ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಬೇಡಿಕೆಗಳು ಆಗ್ರಹಿಸಿ ಮುಷ್ಕರ ನಡೆಸಿದ ಪರಿಣಾಮ ಪ್ರಯಾಣಿಕರು ಹೊರ ಊರುಗಳಿಗೆ ಹೋಗಲು ಪರದಾಡಿದರು.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಆಗ್ರಹಿಸಿ ಮುಷ್ಕರ ನಡೆಸಿದ ಪರಿಣಾಮವಾಗಿ ಪ್ರಯಾಣಿಕರು ಹೊರ ಊರುಗಳಿಗೆ ಹೋಗಲು ಪರದಾಡಿದರು.
ಬೇರೆ ಬೇರೆ ಸ್ಥಳಗಳಿಗೆ ಹೋಗಲು ಬಸ್‌ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಗಂಟೆಗಟ್ಟಲೆ ಕಾದರೂ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಸೇವೆ ಪ್ರಾರಂಭವಾಗಲಿಲ್ಲ. ಬಸ್‌ ಚಾಲಕರು ಹಾಗೂ ನಿರ್ವಾಹಕರು ಬಸ್‌ಗಳಿಂದ ದೂರ ಉಳಿದರು. ರಸ್ತೆ ಸಾರಿಗೆ ಸಂಸ್ಥೆ ಸೇವೆಯನ್ನೇ ನೆಚ್ಚಿಕೊಂಡಿರುವ ಗ್ರಾಮೀಣ ಪ್ರದೇಶದ ಪ್ರಯಾಣಿಕರು ಹೆಚ್ಚಿನ ತೊಂದರೆ ಅನುಭವಿಸಿದರು.
ದೂರದ ಗ್ರಾಮಗಳಿಗೆ ಆಟೋ ಬಾಡಿಗೆ ಕೊಡಲಾಗದೆ, ನಡೆಯಲು ಸಾಧ್ಯವಾಗದೆ ಪರಿತಪಿಸಿದ ಪ್ರಯಾಣಿಕರು, ಹತ್ತಿರದ ಗ್ರಾಮಗಳತ್ತ ಕಾಲ್ನಡಿಗೆಯಲ್ಲೇ ಹೊರಟರು. ದೂರದ ಸ್ಥಳಗಳಿಗೆ ಹೋಗುವ ಪ್ರಯಾಣಿಕರು, ಬೆರಳೆಣಿಕೆಯಷ್ಟು ಖಾಸಗಿ ಬಸ್‌ಗಳು ಹಾಗೂ ಸರಕು ಸಾಗಣೆ ಟೆಂಪೋಗಳನ್ನು ಅವಲಂಬಿಸಬೇಕಾಯಿತು.