ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪತ್ರಕರ್ತರಿಗೆ ಸನ್ಮಾನ ಸಾಧಕರ ಆಯ್ಕೆಯಿಂದ ಪ್ರಶಸ್ತಿ ಘನತೆ ಹೆಚ್ಚಿದೆ-ಮುನಿರಾಜು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ನಗರದಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪಾ.ಶ್ರೀ ಅನಂತರಾಮ್, ಕೋ.ನಾ.ಪ್ರಭಾಕರ್, ಎನ್.ಆರ್.ಪುರುಷೋತ್ತಮ್ ಅವರನ್ನು ಪತ್ರಕರ್ತರ ಸಂಘದ ಆಶ್ರಯದಲ್ಲಿ ಸನ್ಮಾನಿಸಲಾಯಿತು.
ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ, ಪ್ರಾಮಾಣಿಕ ಹಾಗೂ ವೃತ್ತಿನಿಷ್ಟೆ ಹೊಂದಿದ ಪತ್ರಕರ್ತರನ್ನು ಗುರುತಿಸುವ ಕೆಲಸ ಜಿಲ್ಲಾಡಳಿತದಿಂದ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ತಾವೂ ಸಹ ಆಯ್ಕೆ ಸಮಿತಿಯಲ್ಲಿದ್ದು, ಇಬ್ಬರು ಪತ್ರಕರ್ತರು, ಓರ್ವ ಕನ್ನಡ ಪರ ಹೋರಾಟಗಾರರನ್ನು ಆಯ್ಕೆ ಮಾಡುವ ಅವಕಾಶ ಸಿಕ್ಕಿತು ಎಂದ ಅವರು, ಈ ಮೂವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದರಿಂದಾಗಿ ಪ್ರಶಸ್ತಿಯ ಘನತೆಯೂ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.

ಪತ್ರಕರ್ತರ ಆರೋಗ್ಯದ ಬಗ್ಗೆ ಕಾಳಜಿಯಿಂದ ಸಂಘ ಮಾಡಿದ ಚಳಿಗಾಲದಲ್ಲಿ ಹೃದ್ರೋಗದ ಕುರಿತ ಅರಿವು ಕಾರ್ಯಾಗಾರಕ್ಕೆ ಹಲವಾರು ಪತ್ರಕರ್ತರ ಗೈರು ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಕಾರ್ಯಕ್ರಮಗಳ ಸದುಪಯೋಗ ಅಗತ್ಯ ಎಂದರು.
ನಗರಸಭೆ ಆಯುಕ್ತ ಶ್ರೀಕಾಂತ್ ಮಾತನಾಡಿ, ಪತ್ರಕರ್ತರು ಸಂವಿಧಾನದ ನಾಲ್ಕನೆ ಸ್ಥಂಭವಾಗಿದ್ದಾರೆ, ಅವರ ನಡೆ ಸಮಾಜದ ಅಭಿವೃದ್ದಿಯ ಬದ್ದತೆಯಿಂದ ಇರಬೇಕು ಎಂದರು.
ಪತ್ರಕರ್ತರ ಭವನಕ್ಕೆ ಇ-ಖಾತೆ ಮಾಡಿಕೊಡಲು ಅಧ್ಯಕ್ಷರು ಕೋರಿದ್ದು, ಅದನ್ನು ಶೀಘ್ರ ಮಾಡಿಸಿಕೊಡುವುದಾಗಿ ಭರವಸೆ ನೀಡಿ, ಪತ್ರಕರ್ತರ ಮತ್ತು ಭವನದ ಅಭಿವೃದ್ದಿ,ಸ್ವಚ್ಚತೆಗೆ ನಗರಸಭೆ ಎಲ್ಲಾ ಸಹಕಾರ ನೀಡುತ್ತದೆ ಎಂದರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಬಿ.ವಿ.ಗೋಪಿನಾಥ್, ಅನಂತರಾಮ್ ಆತ್ಮಸ್ಥೈರ್ಯ ನಿಜಕ್ಕೂ ಇತರರಿಗೆ ಆದರ್ಶ ಎಂದು ತಿಳಿಸಿ, ಸಾವಿರಾರು ಜನರಿದ್ದರೂ ಕನ್ನಡಪರ ಘೋಷಣೆ ಕೂಗಲು ಹೆದರದ ಕೋ.ನಾ.ಪ್ರಭಾಕರ್ ಅವರ ಭಾಷಾ ಪ್ರೇಮ, ಮಾಹಿತಿಯ ಕೋಶದಂತಿರುವ ಎನ್.ಆರ್. ಪುರುಷೋತ್ತಮ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕಾಗಿ ಜಿಲ್ಲಾಡಳಿತಕ್ಕೆ ಧನ್ಯವಾದ ಸಲ್ಲಿಸಿದರು.
ಸಾಧನೆ ಮಾಡುವಾಗ ಅಡ್ಡಿ ಸಹಜ, ನಮ್ಮ ಶತ್ರುಗಳೇ ನಮ್ಮ ಉನ್ನತಿಗೆ ಕಾರಣ ಎಂಬುದನ್ನು ಮನಗಾಣಬೇಕು,ಮುನಿರಾಜು ಪರಿಶ್ರಮದಿಂದ ಸಂಘದ ಅಭಿವೃದ್ದಿಗೆ ಹಣದ ಹರಿವು ಬರುತ್ತಿದೆ ಎಂದು ಅಭಿನಂದಿಸಿದರು.
ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಕನ್ನಡ ಉಳಿಸುವ ಕೆಲಸವಾಗಬೇಕು, ಕೋಲಾರದಲ್ಲಿ ನಮ್ಮವರೇ ಅಂಗಡಿಗಳ ನಾಮಫಲಕವನ್ನು ಇಂಗ್ಲೀಷ್‍ನಲ್ಲಿ ಬರೆಸುತ್ತಿದ್ದಾರೆ ಎಂದು ವಿಷಾದಿಸಿ, ಈ ಸಂಬಂಧ ನಗರಸಭೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ನಗರದಲ್ಲಿ ಕನ್ನಡ ಪರ ವಾತಾವರಣ ಉಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರನ್ನು ಕೋರಿದರು.
ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಮಹಮದ್‍ಯೂನಸ್, ಕೋಲಾರದಲ್ಲಿ ಪತ್ರಕರ್ತರು ಒಗ್ಗಟ್ಟಾಗಿದ್ದೇವೆ, ಈ ರೀತಿ ಎಲ್ಲರೂ ಒಂದೆಡೆ ಸೇರಿ ಸಂಘದ ಅಭಿವೃದ್ದಿಗೆ ಶ್ರಮಿಸುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‍ಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಪತ್ರಕರ್ತರು ಹಾಜರಿದ್ದರು
.