ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ರಾಜ್ಯದಲ್ಲಿ ಒಟ್ಟಾರೆ 20 ಕರೋನಾ ಪ್ರಕರಣಗಳು ಕಂಡು ಬಂದಿವೆ – ಡಾ|| ಕೆ.ಸುಧಾಕರ್
ಕೋಲಾರ: ಇಂದು ಒಂದೇ ದಿನ ರಾಜ್ಯದಲ್ಲಿ ಹೊಸದಾಗಿ 5 ಕರೋನಾ ಪ್ರಕರಣಗಳು ಕಂಡು ಬರುವದರೊಂದಿಗೆ ಒಟ್ಟಾರೆ ರಾಜ್ಯದಲ್ಲಿ ಇದುವರೆಗೆ (21-03-2020 ರ ವರೆಗೆ) 20 ಕರೋನಾ ಪ್ರಕರಣಗಳು ಕಂಡು ಬಂದಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ|| ಕೆ. ಸುಧಾಕರ್ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರೋನಾ ವೈರಸ್ ಕುರಿತ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದು ಗೌರಿಬಿದನೂರಿನಲ್ಲಿ 1, ಮೈಸೂರಿನಲ್ಲಿ 1, ಹಾಗೂ ಬೆಂಗಳೂರಿನಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ. ಈ 20 ಪ್ರಕರಣಗಳಲ್ಲಿ 4 ರಿಂದ 5 ಜನ ಗುಣಮುಖರಾಗಿದ್ದು, ಅವರನ್ನು ಒಂದು ವಾರದ ನಂತರ ಡಿಸ್ಚಾರ್ಜ್ ಮಾಡಲಾಗುವುದು. ಕರೋನಾ ವೈರಸ್ನಲ್ಲಿ ಭಾರತವು ಎರಡನೇ ಹಂತದಲ್ಲಿದ್ದು, ಮುಂದಿನ ಹಂತಕ್ಕೆ ಹೋಗದಂತೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಬೇಕು. ಆದ್ದರಿಂದ ಎಲ್ಲಾ ರೀತಿಯ ಜಾಗೃತಿ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.
20 ದಿನಗಳಿಂದ ಹೊರದೇಶದಿಂದ ಬಂದವರನ್ನು ಕಡ್ಡಾಯವಾಗಿ ಹೋಂ ಕ್ವಾರಂಟೈನ್ನಲ್ಲಿ ಇರಿಸಬೇಕು. ಅವರು ಟ್ರಾವೆಲ್ ಹಿಸ್ಟರಿ ಪ್ರಮುಖವಾಗಿದ್ದು, ಇದರ ಬಗ್ಗೆ ಜಾಗೃತಿ ವಹಿಸಬೇಕು. ಖಾಸಗಿ ಮೆಡಿಕಲ್ ಕಾಲೇಜಿಗಳಲ್ಲೂ ಬೆಡ್ಗಳನ್ನು ಕಾಯ್ದಿರಿಸಬೇಕು. ಪ್ರತಿ ಐಸೋಲೇóಷನ್ ಬೆಡ್ಗೂ 1.5 ಮೀಟರ್ ಅಂತರವಿರಬೇಕು. ಅತಿ ಹೆಚ್ಚು ಜನಸಂದಣಿ ಆಗುವ ಸರ್ಕಾರಿ ಕಛೇರಿಗಳಾದ ಕಂದಾಯ ಇಲಾಖೆ, ಸಬ್ರಿಜಿಸ್ಟರ್ ಹಾಗೂ ಕೋರ್ಟ್ಗಳಲ್ಲಿ ಅಗತ್ಯ ಸೇವೆಗಳನ್ನು ಹೊರತು ಪಡಿಸಿ, ಉಳಿದ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಅದೇ ರೀತಿ ಆಸ್ಪತ್ರೆಗಳಲ್ಲೂ ತುರ್ತು ಸೇವೆಗಳನ್ನು ಮಾತ್ರ ನೀಡಿ ಮುಂದಿನ 2-3 ವಾರಗಳ ನಂತರ ನೀಡಬಹುದಾದ ಸೇವೆಗಳನ್ನು ಮುಂದೂಡಿ. ಇಂದಿನಿಂದಲೇ ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ಬಂದ್ ಮಾಡಬೇಕು. ಹೋಟೆಲ್ಗಳಲ್ಲಿ ಪಾರ್ಸಲ್ ಸೇವೆಯನ್ನು ಮಾತ್ರ ನೀಡಬೇಕು. ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ. ರೋಗದ ಲಕ್ಷಣಗಳು ಕಂಡು ಬಂದವರು ಹಾಗೂ ಹೊರ ದೇಶದಿಂದ ಬಂದವರು ಮಾಸ್ಕ್ ಧರಿಸಬಹುದು. ಕೋವಿಡ್-19 ದೃಢಪಟ್ಟವರು ಮಾತ್ರ ಎನ್-95 ಮಾಸ್ಕ್ ಧರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್, ಕೋಲಾರ ಲೋಕಸಭಾ ಸಂಸದರಾದ ಎಸ್.ಮುನಿಸ್ವಾಮಿ, ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಶ್ರೀನಿವಾಸಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಎಸ್.ವೆಂಕಟೇಶ್, ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ, ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಹೆಚ್.ವಿ ದರ್ಶನ್, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರಡ್ಡಿ, ಕೆ.ಜಿ.ಎಫ್ ಪೋಲಿಸ್ ವರಿಷ್ಠಾಧಿಕಾರಿಗಳಾದ ಮಹಮದ್ ಸುಜಿತಾ, ಅಪರ ಜಿಲ್ಲಾಧಿಕಾರಿಗಳಾದ ಶಿವಸ್ವಾಮಿ, ಕೋಲಾರ ಉಪವಿಭಾಗಾಧಿಕಾರಿಗಳಾದ ಸೋಮಶೇಖರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ವಿಜಯ್ಕುಮಾರ್ ಸೇರಿದಂತೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.