ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಮ್ಯಾನುಯಲ್ ಸ್ಕ್ಯಾವೆಂಜರ್ ಗಳಿಗೆ ಪುರ್ನವಸತಿ ಸೌಲಭ್ಯಗಳನ್ನು ಕಲ್ಪಿಸಿ – ಜಗದೀಶ್ ಹಿರೇಮಣಿ
ಕೋಲಾರ: ಜಿಲ್ಲೆಯಾದ್ಯಂತ ಇರುವ ಮ್ಯಾನುಯಲ್ ಸ್ಕ್ಯಾವೆಂಜರ್ಗಳಿಗೆ ಪುರ್ನವಸತಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾದ ಜಗದೀಶ್ ಹಿರೇಮಣಿ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸಫಾಯಿ ಕರ್ಮಚಾರಿಗಳಿರುವ ಕಾಲೋನಿಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಕಾಲೋನಿಗಳಿಗೆ ಕುಡಿಯುವ ನೀರು, ಚರಂಡಿ, ಕಾಂಕ್ರೀಟ್ ರಸ್ತೆ, ಸೌಲಭ್ಯಗಳನ್ನು ಒದಗಿಸಬೇಕು. ಮ್ಯಾನುಯೆಲ್ ಸ್ಕ್ಯಾವೆಂಜರ್ಗಳಿಗೆ ಮಿಶನರಿ ಆಧಾರಿತ ಸಾಲಸೌಲಭ್ಯಗಳನ್ನು ನೀಡಬೇಕೆಂದರು.
ಮ್ಯಾನುಯೆಲ್ ಸ್ಕ್ಯಾವೆಂಜರ್ಗಳಿಗೆ ಗುರುತಿನ ಚೀಟಿ ನೀಡಿ. ಇದರಿಂದ ಅವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸಲು ಅನುಕೂಲವಾಗುತ್ತದೆ. ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಸಾಲಸೌಲಭ್ಯಗಳನ್ನು ಕೋಲಾರ ಜಿಲ್ಲೆಗೆ ನೀಡಿದ್ದೇವೆ. ಅತಿ ಹೆಚ್ಚು ಮ್ಯಾನುಯೆಲ್ ಸ್ಕ್ಯಾವೆಂಜರ್ಗಳು ನೋಂದಣಿಯಾಗಿರುವುದು ಕೋಲಾರದಲ್ಲಿಯೇ. 20 ವರ್ಷಗಳಿಂದ ಸಾಲಸೌಲಭ್ಯವನ್ನು ನೀಡುತ್ತಿದ್ದರೂ ಮಾನ್ಯುಯಲ್ ಸ್ಕ್ಯಾವೆಂಜರ್ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದೆ. ಆದ್ದರಿಂದ ಬೋಗಸ್ ಅರ್ಜಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
2018 ರೊಳಗೆ ಮ್ಯಾನುಯಲ್ ಸ್ಕ್ಯಾವೆಂಜರ್ಗಳ ಸಂಪೂರ್ಣವಾಗಿ ಶೂನ್ಯಗೊಳಿಸುವ ಗುರಿಯನ್ನು ಆಯೋಗವು ಹೊಂದಿತ್ತು, ಆದರೆ ಇನ್ನು ಮುಂದುವರೆಯುತ್ತಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 541 ಮ್ಯಾನುಯೆಲ್ ಸ್ಕ್ಯಾವೆಂಜರ್ಗಳನ್ನು ಗುರುತಿಸಲಾಗಿದೆ. ಗುರುತಿನ ಚೀಟಿ ಇದ್ದರೆ ಇವರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲು ಸಹಕಾರಿಯಾಗುತ್ತದೆ. ಒಂದು ವಾರದೊಳಗೆ ಮ್ಯಾನುಯೆಲ್ ಸ್ಕ್ಯಾವೆಂಜರ್ಗಳಿಗೆ ಗುರುತಿನ ಚೀಟಿಯನ್ನು ನೀಡುವಂತೆ ಸಮಾಜ ಕಲ್ಯಾಣ ಆಧಿಕಾರಿಗಳಿಗೆ ಸೂಚಿಸಿದರು.
ಸಫಾಯಿ ಕರ್ಮಚಾರಿಗಳು ಕ್ಯಾನ್ಸರ್, ಶ್ವಾಸಕೋಶ ಸಮಸ್ಯೆಗಳಿಂದ ಹೆಚ್ಚಿನ ರೀತಿಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಅವರಿಗೆ ಪುರಸಭೆ ಮತ್ತು ನಗರಸಭೆ ವತಿಯಿಂದ ಸುರಕ್ಷಾ ಪರಿಕರಗಳನ್ನು ನೀಡಿ ಅವುಗಳನ್ನು ಬಳಸುವಂತೆ ಅರಿವು ಮೂಡಿಸಬೇಕು. ಸಫಾಯಿ ಕರ್ಮಚಾರಿಗಳಿಗೆ ನುರಿತ ತಜ್ಞರಿಂದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.
ಸ್ಥಳೀಯ ಸಂಸ್ಥೆಗಳು ಹಾಗೂ ನಗರಾಭಿವೃದ್ಧಿಯಲ್ಲಿ ಕೆಲಸ ಮಾಡುತ್ತಿರುವ ಖಾಯಂ ಉದ್ಯೋಗ ವಲ್ಲದ ಪೌರಕಾರ್ಮಿಕರು ನಿವೃತ್ತಿ ಹೊಂದಿದರೆ ಅಂತಹವರಿಗೆ ಇಲಾಖೆ ವತಿಯಿಂದ ಜೀವನಾಧಾರಕ್ಕೆ ಸಹಾಯ ಧನ ನೀಡುವ ಒಂದು ಯೋಜನೆಯನ್ನು ರೂಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ವೇತನಗಳ ಪಾವತಿ ಹಾಗೂ ವಿಳಂಬದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪೌರಕಾರ್ಮಿಕರಿಗೆ ಕಡ್ಡಾಯವಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಅನ್ನು ನೀಡಬೇಕು ಎಂದು ತಿಳಿಸಿದರು.
ಕೆ.ಎಸ್.ಆರ್.ಟಿ.ಸಿ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆಗಳ ಅಧಿಕಾರಿಗಳಿಂದ ಮ್ಯಾನುವೆಲ್ ಸ್ಕ್ಯಾವೆಂಜರ್ಗಳ ಬಗ್ಗೆ ಮಾಹಿತಿ ಪಡೆದರು.
ಸಭೆಯಲ್ಲಿ ರಾಷ್ಟ್ರೀಯ ಕರ್ಮಚಾರಿ ಆಯೋಗದ ಕಾರ್ಯದರ್ಶಿಗಳಾದ ಆರ್.ರಮಾ, ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮಾ, ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಹೆಚ್.ವಿ ದರ್ಶನ್, ನಗರಸಭೆಯ ಯೋಜನಾ ನಿರ್ದೇಶಕರಾದ ರಂಗಸ್ವಾಮಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.