ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಮುಧೋಳದಲ್ಲಿ ಸಹಾಯಕ ಖಜಾನಾಧಿಕಾರಿ ಎಸ್ಎಸ್ ಬಿರಾದಾರ ಅವರ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿ ಕಪಾಳಕ್ಕೆ ಹೊಡೆದಿರುವ ಕೃಷಿ ಇಲಾಖೆ ಉಪನಿರ್ದೇಶಕರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಹಾಗೂ ಖಜಾನೆ ಸಿಬ್ಬಂದಿಗೆ ರಕ್ಷಣೆಗೆ ಕೋರಿ ರಾಜ್ಯ ಖಜಾನೆ ನೌಕರರ ಸಂಘದ ಜಿಲ್ಲಾಶಾಖೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಖಜಾನಾಧಿಕಾರಿ ರುಕ್ಮಿಣಿದೇವಿ ಹಾಗೂ ಸಂಘದ ಅಧ್ಯಕ್ಷ ಎಚ್.ಶಂಕರ್ ನೇತೃತ್ವದಲ್ಲಿ ಡಿಸಿಯವರಿಗೆ ಮನವಿ ಸಲ್ಲಿಸಿದ್ದು, ಮುಧೋಳದಲ್ಲಿ ಕೃಷಿ ಅಧಿಕಾರಿ ತೋರಿರುವ ಉದ್ದಟತನವನ್ನು ಖಂಡಿಸಲಾಯಿತು.
ಸಮಯ ಮುಗಿದ ನಂತರ ಬಿಲ್ಲುಗಳನ್ನು ಸ್ವೀಕರಿಸಲು ಒತ್ತಡ ಹಾಕಿರುವ ಕೃಷಿ ಅಧಿಕಾರಿ ಆರ್.ಜಿ.ನಾಗಣ್ಣವರ ಎಂಬುವವರು ಬಿಲ್ಲು ಸ್ವೀಕರಿಸಲು ನಿರಾಕರಿಸಿರುವ ಖಜಾನೆ ಅಧಿಕಾರಿಗೆ ಕಪಾಳಕ್ಕೆ ಹೊಡೆದಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ವಿಷಯವಾಗಿದೆ.
ಇವರೂ ಓರ್ವ ಅಧಿಕಾರಿಯಾಗಿದ್ದು, ಇಂತಹ ದುಷ್ಕøತ್ಯ ನಡೆಸುವ ಮೂಲಕ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದಾರೆ, ಇಂತಹ ಘಟನೆಗಳಿಂದ ಖಜಾನೆ ಸಿಬ್ಬಂದಿ,ಅಧಿಕಾರಿಗಳ ಮಾನಸಿಕ ಸ್ಥೈರ್ಯ ಕುಗ್ಗುವಂತಾಗಿದೆ, ಸರ್ಕಾರ ಕೂಡಲೇ ಈ ಅಧಿಕಾರಿಯನ್ನು ಅಮಾನತ್ ಮಾಡಿ, ಕಾನೂನು ರೀತಿಯಲ್ಲಿ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಯಿತು.
ಖಜಾನೆ-2 ಅನ್ವಯ ತಾಲ್ಲೂಕು ಖಜಾನೆಗಳಲ್ಲಿ ಮಧ್ಯಾಹ್ನ 2-30ರ ನಂತರ ಬಿಲ್ಲುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ, ಕಾರಣ ನೆಟ್ ವರ್ಕ್ ವ್ಯವಸ್ಥೆಯಲ್ಲಿ ಸಿಸ್ಟಮ್ ಲಾಕ್ ಆಗಿರುತ್ತದೆ, ಖಜಾನೆ ಇಲಾಖೆಯ ಕೆಟಿಸಿ ಹಾಗೂ ಕೆಎಫ್ಸಿ ನಿಯಮಾವಳಿಹಾಗೂ ಸರ್ಕಾರಿ ಆದೇಶಗಳ ಪ್ರಕಾರವೇ ನಾವು ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ಮುಧೋಳ ಖಜಾನೆಯಲ್ಲಿ ಹಲ್ಲೆ ನಡೆಸಿದ ಅಧಿಕಾರಿಗೆ ಈ ವಿಷಯ ತಿಳಿಸಿದರೂ ಖಜಾನೆ ಅಧಿಕಾರಿ ಮೇಲೆ ದೌರ್ಜನ್ಯ ನಡೆಸಿದ್ದಾರೆ, ಈ ರೀತಿಯ ಹಲ್ಲೆ ಘಟನೆಗಳಿಂದ ಸಿಬ್ಬಂದಿ ಭಯದಲ್ಲಿ ಕೆಲಸ ಮಾಡುವಂತಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ತಮ್ಮ ಅಧೀನದಲ್ಲಿ ಬರುವ ವೇತನ ಬಟವಾಡೆ ಅಧಿಕಾರಿಗಳಿಗೆ ಆರ್ಥಿಕ ಇಲಾಖೆಯ ಆದೇಶಾನುಸಾರ ಆರ್ಥಿಕ ಚಟುವಟಿಕೆಗಳನ್ನು ನಡೆಸುವಂತೆ ಆದೇಶಿಸಬೇಕು ಎಂದು ಈ ಮೂಲಕ ಮನವಿ ಮಾಡುತ್ತೇವೆ, ಖಜಾನೆ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿಮಾಡಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಿಯೋಗದಲ್ಲಿ ಸಹಾಯಕ ಖಜಾನಾಧಿಕಾರಿ ರಾಮಮೂರ್ತಿ, ಖಜಾನೆ ನೌಕರರ ಸಂಘದ ಗೌರವಾಧ್ಯಕ್ಷ ವಿ.ವೆಂಕಟೇಶ್, ಖಜಾಂಚಿ ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಆರ್.ಅಶೋಕ್ ಕುಮಾರ್, ನಾರಾಯಣರಾವ್, ನಟೇಶ್, ಬ್ರಹ್ಮಾನಂದ್ ಮತ್ತಿತರರು ಹಾಜರಿದ್ದರು.
ಚಿತ್ರಶೀರ್ಷಿಕೆ;(ಫೋಟೊ-16ಕೋಲಾರ12) ಮುಧೋಳದಲ್ಲಿ ಸಹಾಯಕ ಖಜಾನಾಧಿಕಾರಿ ಎಸ್ಎಸ್ ಬಿರಾದಾರ ಅವರ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿ ಕಪಾಳಕ್ಕೆ ಹೊಡೆದಿರುವ ಕೃಷಿ ಇಲಾಖೆ ಉಪನಿರ್ದೇಶಕರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಹಾಗೂ ಖಜಾನೆ ಸಿಬ್ಬಂದಿಗೆ ರಕ್ಷಣೆಗೆ ಕೋರಿ ರಾಜ್ಯ ಖಜಾನೆ ನೌಕರರ ಸಂಘದ ಜಿಲ್ಲಾಶಾಖೆ ವತಿಯಿಂದ ಕೋಲಾರದ್ಲಿ -ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.