ಮೀನುಗಾರರ ಸಾಲಮನ್ನಾ ಘೋಷಣೆ ಕೇವಲ ಪ್ರಚಾರಕ್ಕಷ್ಟೇ ಸೀಮಿತವೇ? ಸಚಿವರನ್ನೇ ತರಾಟೆಗೆ ತೆಗೆದುಕೊಂಡ ಮೀನುಗಾರ ಮಹಿಳೆಯರು

JANANUDI.COM NETWORK

 

ಮೀನುಗಾರರ ಸಾಲಮನ್ನಾ ಘೋಷಣೆ ಕೇವಲ ಪ್ರಚಾರಕ್ಕಷ್ಟೇ ಸೀಮಿತವೇ?
ಸಚಿವರನ್ನೇ ತರಾಟೆಗೆ ತೆಗೆದುಕೊಂಡ ಮೀನುಗಾರ ಮಹಿಳೆಯರು

 

 

ಕುಂದಾಪುರ, ಮಾ.17: ಇಂದು ಬಂದರು ಹಾಗೂ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಯುವ ಮುಖಂಡ ಕೋಡಿ ಸುನಿಲ್ ಪೂಜಾರಿಯವರ ನೇತೃತ್ವದಲ್ಲಿ ಭೇಟಿಯಾದ ಕೋಡಿ ಭಾಗದ ಮೀನುಗಾರ ಮಹಿಳೆಯರು ಯಡಿಯೂರಪ್ಪ ಸರಕಾರ ಪ್ರಮಾಣ ವಚನ ಸಂದರ್ಭದಲ್ಲಿ ಮೀನುಗಾರರ ಸಾಲಮನ್ನಾ ಘೋಷಣೆ ಮಾಡಿರುವುದು ಕೇವಲ ಪ್ರಚಾರಕಷ್ಟೇ ಸೀಮಿತವೇ ಎಂದು ಪ್ರಶ್ನಿಸಿದರು.

     ಮೀನುಗಾರ ಮಹಿಳೆಯರ 50 ಸಾವಿರದ ತನಕದ ಸಾಲಮನ್ನಾ ಮಾಡುವುದಾಗಿ ಘೋಷಿಸಿ ತಿಂಗಳು 8 ಕಳೆದರೂ ಒಂದೇ ಒಂದು ರೂಪಾಯಿ ಸಾಲ ಕೂಡ ಮನ್ನಾ ಮಾಡಲಾಗಿಲ್ಲ. ಅಲ್ಲಲ್ಲಿ ಸಾಲ ಮನ್ನಾದ ಬಗ್ಗೆ ಫ್ಲೆಕ್ಸ್ ಪ್ರಚಾರ ಫಲಕಗಳನ್ನು ಅಳವಡಿಸಲಾಗಿದೆ. ಸರಕಾರಿ ಬಸ್ಸುಗಳ ಮೇಲೂ ಕೂಡ ಇಂತಹ ಪ್ರಚಾರ ಫಲಕಗಳನ್ನು ಅಳವಡಿಸಲಾಗಿದೆ. ಅದನ್ನು ನಂಬಿದ ಮೀನುಗಾರ ಮಹಿಳೆಯರು ಬ್ಯಾಂಕುಗಳ ಸಾಲವನ್ನು ಮರುಪಾವತಿಸಿಲ್ಲ. ಆದರೆ ಈಗ ಬ್ಯಾಂಕ್‍ಗಳಿಂದ ನೋಟೀಸ್‍ಗಳು ಬರಲಾರಂಭಿಸಿದೆ. ಇದರಿಂದ ಮೀನುಗಾರ ಮಹಿಳೆಯರು ಚಿಂತಾಕ್ರಾಂತರಾಗಿದ್ದಾರೆ. ಆ ಕಾರಣದಿಂದ ಈ ಕೂಡಲೇ ಘೋಷಣೆ ಮಾಡಲ್ಪಟ್ಟ ಸಾಲವನ್ನು ಮನ್ನಾ ಮಾಡಬೇಕು. ಎಂದು ಆಗ್ರಹಿಸಿ ಮನವಿಯನ್ನು ನೀಡಲಾಯಿತು.
     ಈ ಸಂದರ್ಭದಲ್ಲಿ ಜೈ ಕರ್ನಾಟಕ ಚಿಲ್ಲರೆ ಮೀನು ಮಾರಾಟಗಾರರ ಸಂಘ ಮತ್ತು ಬೀಜಾಡಿ ಮೀನುಗಾರರ ಸಂಘದ ಕೋಡಿ ಭಾಗದ ಕುಸುಮ ಖಾರ್ವಿ, ಕಮಲ ಖಾರ್ವಿ, ಕಮಲ ತಿಮ್ಮಪ್ಪ ಖಾರ್ವಿ, ಮೂಕಾಂಬು ಖಾರ್ವಿ, ರಾಧ ಮೊಗವೀರ, ನೀಲ ಖಾರ್ವಿ, ಗೀತಾ ಖಾರ್ವಿ, ಸಂತೋಷ್ ಖಾರ್ವಿ ಮುಂತಾದ 100ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.