ಮಾನಸಿಕ ಒತ್ತಡಗಳನ್ನು ಧೈರ್ಯದಿಂದ ಎದುರಿಸುವುದು ಅವಶ್ಯಕ – ಜಾಹ್ನವಿ 

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಮಾನಸಿಕ ಒತ್ತಡಗಳನ್ನು ಧೈರ್ಯದಿಂದ ಎದುರಿಸುವುದು ಅವಶ್ಯಕ – ಜಾಹ್ನವಿ 
ಕೋಲಾರ : ಪೊಲೀಸ್ ಇಲಾಖೆಯ ಸಿಬ್ಬಂಧಿಗಳು ಸದಾ ಒಂದಿಲ್ಲೊಂದು ರೀತಿಯ ಮಾನಸಿಕ ಒತ್ತಡಗಳಲ್ಲಿ ಕೆಲಸ ನಿರ್ವಹಿಸಬೇಕಾಗಿದ್ದು ಇದನ್ನು ದೈರ್ಯದಿಂದ ಎದರಿಸುವುದು ಅವಶ್ಯಕ ಎಂದು ಅಪರ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಜಾಹ್ನವಿ ಅವರು ತಿಳಿಸಿದರು. 
ನಗರ ಹೊರವಲಯದಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾನಸಿಕ ಆರೋಗ್ಯ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 
ಪೊಲೀಸ್ ಇಲಾಖೆಯವರು ಯಾವುದೇ ಕೆಲಸವನ್ನು ಕಷ್ಟಪಟ್ಟು ಮಾಡದೆ ಇಷ್ಟ ಪಟ್ಟು ಮಾಡಬೇಕು. ಆಗ ಮಾತ್ರ ಯಾವುದೇ ರೀತಿಯ ಒತ್ತಡಗಳು ಬಂದರೂ ಅದನ್ನು ಸುಲಭವಾಗಿ ನಿಭಾಯಿಸಿಕೊಂಡು ಹೋಗಬಹುದು. ಹಾಗಾಗಿ ಸಮಸ್ಯೆಗಳು ಎದುರಾದರೆ ಇತರರೊಂದಿಗೆ ಹಂಚಿಕೊಂಡು ಆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು. 
ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ನಾರಾಯಣಸ್ವಾಮಿ ಅವರು ಮಾತನಾಡಿ, ಮನುಷ್ಯನಿಗೆ ಶಾರೀರಿದ ಖಾಯಿಲೆಗಳಲ್ಲಿ ವಿವಿಧ ಬಗೆಗಳು ಇದ್ದಂತೆ ಮಾನಸಿಕ ಕಾಯಿಲೆಗಳಲ್ಲೂ ನಾನಾ ಬಗೆಗಳಿವೆ. ಶಾರೀರಿಕ ಖಾಯಿಲೆಗಳಿಗಿಂತ ಮಾನಸಿಕ ಕಾಯಿಲೆಗಳು ಅತಿ ಪರಿಣಾಮಕಾರಿಯಾದುದು. ಹಾಗಾಗಿ ಮಾನಸಿಕ ಆರೋಗ್ಯವನ್ನು ಪ್ರತಿಯೊಬ್ಬರೂ ಕಾಪಾಡಿಕೊಳ್ಳುವುದು ಅವಶ್ಯಕ ಎಂದರು. 
ಪ್ರಪಂಚದಲ್ಲಿ ಪ್ರತಿ ವರ್ಷ 8 ಲಕ್ಷ ಮಂದಿ ಹಾಗೂ ಕರ್ನಾಟಕದಲ್ಲಿ 2 ಲಕ್ಷ ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಸುಮಾರು 161 ಪ್ರಕರಣಗಳು ಕಂಡು ಬಂದಿದೆ. ಪ್ರತಿ 4 ಸೆಕೆಂಡಿಗೆ ಒಬ್ಬ ವ್ಯಕ್ತಿ ಮಾನಸಿಕ ಸಮಸ್ಯೆಯಿಂದ ನಿಧನ ಹೊಂದುತ್ತಿರುವುದು ದಾಖಲಾಗಿದೆ. ಇದಕ್ಕೆ ಮಾನಸಿಕ ಒತ್ತಡ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು. 
ಮಾನಸಿಕ ಒತ್ತಡವು ಕೇವಲ ಬಡವರಿಗೆ ಅಥವಾ ಶ್ರೀಮಂಥರಿಗೆ ಉಂಟಾಗುವುದಲ್ಲ. ಎಲ್ಲಾ ವರ್ಗದ ಹಾಗೂ ಎಲ್ಲಾ ವಯಸ್ಸಿನವರಿಗೂ ಮಾನಸಿಕ ಒತ್ತಡಗಳು ಉಂಟಾಗುತ್ತದೆ. ಕಷ್ಟ ನಷ್ಟಗಳು ಬಂದಾಗ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಈ ರೀತಿ ಒತ್ತಡಗಳಿಂದ ಮನುಷ್ಯ ಸಾಕಷ್ಟು ದುಶ್ಚಟಗಳಿಗೆ ಬಲಿಯಾಗುವುದೇ ಅಲ್ಲದೆ ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಾರೆ ಎಂದ ಅವರು, ಒತ್ತಡಗಳಿಗೆ ಹೆದರದೆ ಅವುಗಳನ್ನು ದೈರ್ಯದಿಂದ ಮೆಟ್ಟಿನಿಂತು ಕೆಲಸವನ್ನು ಮಾಡಬೇಕು ಎಂದರು. 
ಈ ಸಂದರ್ಭದಲ್ಲಿ ಮಾನಸಿಕ ತಜ್ಞರಾದ ಡಾ.ಪಾವನ, ಶ್ರೀನಾಥ್, ಆರೋಗ್ಯ ಇಲಾಖೆಯ ಹಿರಿಯ ಪ್ರಯೋಗ ಶಾಲಾ ತಂತ್ರಜ್ಞರಾದ ರಮಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.