ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಮಾಚಿದೇವರ ಕಾಯಕ ತತ್ವ ಇಂದು ಅಗತ್ಯ : ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದಸ್ವಾಮಿ
ಶ್ರೀನಿವಾಸಪುರ:ಮಾಚಿದೇವರ ಕಾಯಕ ತತ್ವ ಇಂದಿನ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದಸ್ವಾಮಿ ಹೇಳಿದರು. ಪಟ್ಟಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಡಿವಾಳ ಸಮುದಾಯ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸರ್ಕಾರದ ಸೌಲಭ್ಯ ಪಡೆಯಲು ಸಂಘಟಿತ ಪ್ರಯತ್ನ ಮಾಡಬೇಕು. ಸಮುದಾಯದ ಬಳಕೆಗಾಗಿ, ಸಮುದಾಯ ಭವನ ನಿರ್ಮಾಣ ಮಾಡಲು ನಿವೇಶನ ನೀಡಲಾಗಿದೆ. ಅದಕ್ಕೆ ಅಗತ್ಯವಾದ ಕಾಂಪೌಂಡ್ ನಿರ್ಮಿಸಲು ಅಗತ್ಯವಾದ ನೆರವು ನೀಡಲಾಗುವುದು ಎಂದು ಹೇಳಿದರು.
ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ರಾಘವೇಂದ್ರ ಪ್ರಕಾಶ್ ಮಾತನಾಡಿ, ಮಡಿವಾಳ ಸಮುದಾಯ ಸಮಾಜಕ್ಕೆ ಸ್ವಚ್ಛತೆಯ ಮಹತ್ವ ಸಾರಿದೆ. ಕಾಯಕ ಯೋಗಿ ಮಾಚಿದೇವರು ತಮ್ಮ ವಚನಗಳ ಮೂಲಕ ಸಮಾಜವನ್ನು ತಿದ್ದಲು ಪ್ರಯತ್ನಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದಲ್ಲಿ ಅವರು ಮುಂದೆ ಅಧಿಕಾರಿಗಳಾಗಿ ಸಮುದಾಯದ ಅಭಿವೃದ್ಧಿಗೆ ಅಗತ್ಯವಾದ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದಿದ್ದ ಸಮುದಾಯದ ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.
ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಪುರಸಭೆ ಸದಸ್ಯ ಭಾಸ್ಕರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಸಂಘದ ಅಧ್ಯಕ್ಷ ರಮೇಶ್, ಮುಖಂಡರಾದ ನಾರಾಯಣಸ್ವಾಮಿ, ಮುರಳಿ ಮೋಹನ್, ಸೋಮನಾಥ ಬಾಬು, ಮಂಜು, ಲಕ್ಷ್ಮಣ್ಣ, ರಾಮಕೃಷ್ಣಪ್ಪ, ನಂಜುಂಡಪ್ಪ, ಕಾಕಣ್ಣ, ವೆಂಕಟೇಶಪ್ಪ, ಹನುಮೇಗೌಡ ಇದ್ದರು.
ಮೆರವಣಿಗೆ: ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರ ಮೆರವಣಿಗೆ ಏರ್ಪಡಿಸಲಾಗಿತ್ತು.