JANANUDI.COM NETWORK
ಕೋಲಾರ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನದ ನಂತರ ಜಿಲ್ಲೆಯಲ್ಲಿ ಶೇ.100 ಸಾಧನೆಯ ಶಾಲೆಗಳ ಸಂಖ್ಯೆ 113 ರಿಂದ 135ಕ್ಕೇರಿದೆ ಮತ್ತು ಪೂರಕ ಪರೀಕ್ಷೆಯಲ್ಲೂ ಶೇ.76.40 ಫಲಿತಾಂಶ ಬಂದಿದೆ ಎಂದು ಡಿಡಿಪಿಐ ಕೆ.ಎಂ.ಜಯರಾಮರೆಡ್ಡಿ ತಿಳಿಸಿದರು.
ಈ ಸಂಬಂಧ ಮಾಹಿತಿ ನೀಡಿದ ಅವರು, ಮರು ಮೌಲ್ಯಮಾಪನದ ನಂತರ ರಾಜ್ಯದಲ್ಲೇ 6ನೇ ಸ್ಥಾನ ಪಡೆದಿದ್ದ ಜಿಲ್ಲೆಯ ಒಟ್ಟಾರೆ ಫಲಿತಾಂಶವೂ ಶೇ.1 ರಷ್ಟು ಹೆಚ್ಚಳವಾಗಿದೆ, ಜತೆಗೆ ನಗರದ ಬೆಂಗಳೂರು ಮಾಂಟೋಸ್ಸರಿ ಶಾಲೆಯ ವಿದ್ಯಾರ್ಥಿನಿ ಸಾಯಿಮೇಘನಾ 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಹಿರಿಮೆಯೂ ಸೇರಿಕೊಂಡಿದೆ ಎಂದು ಹರ್ಷ ಹಂಚಿಕೊಂಡರು.
ಮರು ಮೌಲ್ಯಮಾಪನದಲ್ಲಿ 11 ಸರ್ಕಾರಿ, 3 ಅನುದಾನಿತ ಹಾಗೂ 8 ಅನುದಾನ ರಹಿತ ಶಾಲೆಗಳು ಶೇ.100 ಸಾಧನೆಯ ಗೌರವಕ್ಕೆ ಪಾತ್ರವಾಗಿವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮರುಮೌಲ್ಯಮಾಪನದಲ್ಲಿ 150 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕೋಲಾರ ತಾಲ್ಲೂಕಿನಲ್ಲಿ 45, ಬಂಗಾರಪೇಟೆ 18, ಕೆಜಿಎಫ್-17, ಮಾಲೂರು-33, ಶ್ರೀನಿವಾಸಪುರ-17 ಹಾಗೂ ಮುಳಬಾಗಿಲು ತಾಲ್ಲೂಕಿನಲ್ಲಿ 17 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದರು.
ಗುಣಾತ್ಮಕತೆಯೆಡೆಗೆ ಜಿಲ್ಲೆಯ ಫಲಿತಾಂಶ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗುಣಾತ್ಮಕತೆತಗೆ ಒತ್ತು ನೀಡಿದ್ದು, ಈ ಬಾರಿ ಜಿಲ್ಲೆಯಲ್ಲಿ 1239 ಮಂದಿ ಎ+ ಶ್ರೇಣಿಯಲ್ಲಿ ಹಾಗೂ ಶೇ.60ಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಒಟ್ಟು ಶೇ.80.63 ಎಂದು ತಿಳಿಸಿದರು.
ಕಳೆದ 2019ರಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ 12927 ಇತ್ತು ಆದರೆ ಈ ಬಾರಿ 14160ಕ್ಕೇರಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಿಂದ ಆನ್‍ಲೈನ್ ಪಾಠ
ಅನೇಕ ಸರ್ಕಾರಿ ಶಾಲೆಗಳ ಶಿಕ್ಷಕರು ಸಹಾ ಆನ್‍ಲೈನ್ ಪಾಠ ಮಾಡುತ್ತಿದ್ದಾರೆ, ರಜೆ ನಡುವೆಯೂ ಅನೇಕರು ಮಕ್ಕಳಪರ ಕಾಳಜಿ ವಹಿಸಿ ವಾಟ್ಸ್‍ಪ್ ಗ್ರೂಪ್ ಮಾಡಿಕೊಂಡು ಮಕ್ಕಳಿಗೆ ಗೃಹಪಾಠ ನೀಡಿ, ಅವರಿಂದ ಉತ್ತರ ಪಡೆದು ಮೌಲ್ಯಮಾಪನ ಮಾಡಿ ಕಲಿಸುತ್ತಿದ್ದಾರೆ ಎಂದರು.
ವಿದ್ಯಾಗಮ ಮುಂದುವರಿಕೆ ಸರ್ಕಾರದ ತೀರ್ಮಾನಕ್ಕೆ ಬಿಟ್ಟಿದ್ದು, ಕೋವಿಡ್ ಶೀಘ್ರ ನಾಶವಾಗಿ ಶಾಲೆಗಳು ಮತ್ತೆ ಪುನರಾರಂಭವಾಗಬೇಕು ಎಂಬುದೇ ಇಲಾಖೆಯ ಆಶಯವಾಗಿದೆ ಎಂದರು.
ಪೂರಕ ಪರೀಕ್ಷೆ ಉತ್ತಮ ಸಾಧನೆ
ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಇದಾದ ನಂತರ ನಡೆದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯಲ್ಲೂ ಜಿಲ್ಲೆ ಉತ್ತಮ ಸಾಧನೆ ಮಾಡಿದ್ದು, ಶೇ.76.40 ಫಲಿತಾಂಶ ಬಂದಿದೆ ಎಂದು ತಿಳಿಸಿದರು.
ಪರೀಕ್ಷೆಗೆ ಕುಳಿತ 1801 ವಿದ್ಯಾರ್ಥಿಗಳ ಪೈಕಿ 1376 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಕುಳಿತಿದ್ದ 1061 ಬಾಲಕರ ಪೈಕಿ 773 ಮಂದಿ ಹಾಗೂ ಪರೀಕ್ಷೆಗೆ ಕುಳಿತಿದ್ದ 740 ಬಾಲಕಿಯರ ಪೈಕಿ 603 ಮಂದಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದರು.
ಪೂರಕ ಪರೀಕ್ಷಾ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳಿಗೆ ಶೇ.70.28 ರಷ್ಟು ಫಲಿತಾಂಶ ಬಂದಿದೆ. ಅನುದಾನಿತ ಶಾಲೆಗಳಿಗೆ 79.07 ಹಾಗೂ ಅನುದಾನ ರಹಿತ ಶಾಲೆಗಳಿಗೆ ಶೇ.87.07 ಫಲಿತಾಂಶ ಬಂದಿದೆ ಎಂದು ತಿಳಿಸಿದರು.