ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಮರಗಳನ್ನು ಬೆಳೆಸುವುದರಿಂದ ಉತ್ತಮ ಪರಿಸರ ನಿರ್ಮಾಣ ಸಾಧ್ಯ ಹೆಚ್.ನಾಗೇಶ್
ಕೋಲಾರ :ಮರಗಳನ್ನು ಬೆಳೆಸುವ ಮೂಲಕ ಉತ್ತಮ ಪರಿಸರವನ್ನು ನಿರ್ಮಾಣ ಮಾಡಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅಬಕಾರಿ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್ ಅವರು ತಿಳಿಸಿದರು.
ಇಂದು ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಅರಣ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವೃಕ್ಷೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವುದರಿಂದ ಉತ್ತಮ ಮಳೆಯಾಗುತ್ತದೆ. ಹಾಗಾಗಿ ರಸ್ತೆಯ ಬದಿಗಳಲ್ಲಿ, ಅರಣ್ಯ ಪ್ರದೇಶಗಳಲ್ಲಿ ಹಾಗೂ ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ಸಸಿಗಳನ್ನು ನೆಡುವಂತಾಗಬೇಕು ಎಂದು ಅವರು ನುಡಿದರು.
ಮೊದಲು ಮನೆಗಳನ್ನು ಕಟ್ಟುವಾಗ ಮನೆಯ ಮುಂದೆ 2 ತೆಂಗಿನ ಮರಗಳನ್ನು ನೆಡುತ್ತಿದ್ದರು. ಆದರೆ ಈಗ ಮರಗಳನ್ನು ನೆಡುತ್ತಿಲ್ಲ. ಪ್ರತಿಯೊಬ್ಬರೂ ಸಹ ಮರಗಿಡಗಳನ್ನು ತಮ್ಮ ಮನೆ, ಜಮೀನು ಹಾಗೂ ಖಾಲಿ ಇರುವ ಸ್ಥಳಗಳಲ್ಲಿ ನೆಟ್ಟು ಬೆಳೆಸಬೇಕು. ಆಗ ಮಾತ್ರ ವಾತಾವರಣದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಾಗಿ ಉತ್ತಮ ಗಾಳಿ ಸಿಗಲು ಸಾಧ್ಯ ಎಂದು ಹೇಳಿದರು.
ಬೆಟ್ಟಗುಡ್ಡಗಳಲ್ಲಿ ಸಸಿಗಳನ್ನು ನೆಡಲು ಮೊದಲು ತುಂಬಾ ಕಷ್ಟಪಡಬೇಕಾಗಿತ್ತು. ಇದೀಗ ವಿಜ್ಞಾನ ಮುಂದುವರೆದಿದ್ದು ಮನುಷ್ಯ ಹೋಗಲು ಸಾಧ್ಯವಾಗದ ಕಡೆಗಳಲ್ಲಿ ಅಂದರೆ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಪ್ಯಾರಾಗ್ಲೈಡರ್ ಮೂಲಕ ಬೀಜಗಳನ್ನು ಪಸರಿಸಲಾಗುವುದು. ಈ ಬೀಜಗಳನ್ನು ಕೋಲಾರದ ಅಂತರಗಂಗೆ ಮತ್ತು ಶ್ರೀನಿವಾಸಪುರದಲ್ಲಿರುವ ಬೆಟ್ಟಗಳಲ್ಲಿ ಪಸರಿಸಿ ಉತ್ತಮ ಸಸಿಗಳನ್ನು ಬೆಳೆಸಲಾಗುವುದು ಎಂದರು.
ಬೆಟ್ಟಗಳಲ್ಲಿ ಕಲ್ಲುಗಳು ಕಾಣದೆ ಹಸಿರು ಕಾಣಬೇಕು. ಹಾಗಾಗಿ ಪರಿಸರ ಸ್ನೇಹಿ ಸಸಿಗಳಾದ ಶ್ರೀಗಂಧ, ಬೆಟ್ಟದ ನೆಲ್ಲಿ, ಹೊಗೆ, ಚಳ್ಳೇ ಸೇರಿದಂತೆ ವಿವಿಧ ಜಾತಿಯ ಸಸ್ಯದ ಬೀಜಗಳನ್ನು ಪಸರಿಸಲಾಗುವುದು. ಅದೇ ರೀತಿ ವಿದ್ಯಾರ್ಥಿಗಳಿಗೆ ಸಸಿಗಳನ್ನು ನೆಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಿ ಸಸಿಗಳನ್ನು ನೆಡಲು ಪ್ರೇರಣೆ ನೀಡಬೇಕು. ಇದನ್ನು ಶಾಲಾ ಮಟ್ಟದಲ್ಲಿ ಮಾಡಬೇಕು ಎಂದು ಅರಣ್ಯ ಇಲಾಖೆಯವರಿಗೆ ಸೂಚಿಸಿದರು.
ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸಸಿಗಳನ್ನು ನೆಡಬೇಕು. ಅರಣ್ಯ ಇಲಾಖೆಯಿಂದ ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು, ಜಿಲ್ಲೆಯಲ್ಲಿ ಸಾಕಷ್ಟು ರಸ್ತೆಗಳು ಹಾಳಾಗಿವೆ. ಇವುಗಳನ್ನು ಸರಿಪಡಿಸುವ ಕೆಲಸ ಆಗಬೇಕಾಗಿದೆ. ಅಷ್ಟೇ ಅಲ್ಲದೆ ಸ್ಟೇಡಿಯಂನಲ್ಲಿಯೂ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಬಾಕಿ ಉಳಿದಿದೆ. ಇವುಗಳನ್ನು ಅಭಿವೃದ್ಧಿ ಮಾಡಲು ಹೆಚ್ಚು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಬರಗಾಲವು ಮುಂದುವರೆದಿದ್ದು ನೀರಿನ ಸಮಸ್ಯೆಯನ್ನು ಬಗೆಹರಿಸುವುದು ದೊಡ್ಡ ಸವಾಲಾಗಿದೆ. ಹಾಗಾಗಿ ಕೇಂದ್ರ ಸರ್ಕಾರದಿಂದ ಜಲಶಕ್ತಿ ಹಾಗೂ ರಾಜ್ಯ ಸರ್ಕಾರದಿಂದ ಜಲಾಮೃತ ಯೋಜನೆಯನ್ನು ಜಾರಿಗೆ ತರಲಾಗಿದ್ದು ಇದನ್ನು ಜಿಲ್ಲೆಯಲ್ಲಿ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಯೋಜನೆಯಡಿ ಬಿದ್ದ ಮಳೆಯನ್ನು ಭೂಮಿಯಲ್ಲಿ ಇಂಗಿಸುವುದು, ಕಟ್ಟಡದ ಚಾವಣಿಗಳ ಮೇಲೆ ಬೀಳುವ ನೀರನ್ನು ಸಂಗ್ರಹಿಸುವುದು. ಕೆರೆಗಳ ಪುನುಶ್ಚೇತನ, ಜಲಮೂಲಗಳನ್ನು ಉಳಿಸುವುದು, ನೀರಿನ ನಿರ್ವಹಣೆ, ಸಸಿಗಳನ್ನು ನೆಡುವುದು ಇತ್ಯಾದಿ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಹಸರೀಕರಣವನ್ನು ಹೆಚ್ಚಿಸಲು ಅರಣ್ಯ ಇಲಾಖೆಯಿಂದ ಪ್ಯಾರಾಗ್ಲೈಡರ್ ಮೂಲಕ ಬೀಜಗಳನ್ನು ಪಸರಿಸುವ ಆಂದೋಲನವನ್ನು 6 ದಿನಗಳ ಕಾಲ ನಡೆಸಲಾಗುತ್ತದೆ. ಅದರಂತೆ 10 ಬಾರಿ ಅಂದರೆ ಪ್ರತಿ ಬಾರಿ 50 ಕೆ.ಜಿ.ಯಷ್ಟು ಬೀಜಗಳನ್ನು ಚೀಲ ಬ್ಯಾಗಗಳಲ್ಲಿ ತೆಗೆದುಕೊಂಡು ಹೋಗಿ ಪಸರಿಸಲಾಗುವುದು. ಈ ಕಾರ್ಯವು ಕೋಲಾರದಲ್ಲಿ 3 ದಿನ ಹಾಗೂ ಶ್ರೀನಿವಾಸಪುರದಲ್ಲಿ 3 ದಿನಗಳ ಕಾಲ ನಡೆಸಲಾಗುವುದು. ಕಳೆದ ವರ್ಷ ಒಟ್ಟು 5 ದಿನಗಳ ಕಾಲ ನಡೆಸಲಾಗಿತ್ತು ಎಂದರು.
ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸಸಿಗಳನ್ನು ನೆಡುವುದು ಅವಶ್ಯಕವಾಗಿದೆ. ಪ್ರತಿಯೊಬ್ಬ ಮನುಷ್ಯ ಉತ್ತಮ ಗಾಳಿ ಸೇವಿಸಲು ಒಬ್ಬರಿಗೆ 8 ಮರಗಳ ಅವಶ್ಯಕತೆ ಇದೆ. ಹಾಗಾಗಿ ಹುಟ್ಟು ಹಬ್ಬಕ್ಕೆ ಮರ ನೆಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಆ ಮೂಲಕ ಪ್ರತಿಯೊಬ್ಬರೂ ಒಂದೊಂದು ಮರವನ್ನು ನೆಡಲು ಪಣತೊಡಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಅಶ್ವಿನಿ ಅವರು ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಹೆಚ್ಚು ಮಳೆಯಾಗಿ ಜನಜೀವನ ಅಸ್ತವ್ಯಸ್ತವಾಗಿದ್ದರೆ ಕೋಲಾರ ಜಿಲ್ಲೆಯಲ್ಲಿ ಮಳೆಯಿಲ್ಲದೆ ಬರಗಾಲ ಎದುರಿಸುವಂತಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ಹೆಚ್ಚು ಮರಗಳನ್ನು ಬೆಳೆಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಅರವಿಂದ್, ಮುಳಬಾಗಿಲು ತಾಲ್ಲೂಕು ಪಂಚಾಯತಿ ಅಧ್ಯಕ್ಷರಾದ ಶ್ರೀನಿವಾಸ್, ಉಪವಿಭಾಗಾಧಿಕಾರಿ ಸೋಮಶೇಖರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ, ಸಾಮಾಜಿಕ ಅರಣ್ಯ ಇಲಾಖೆಯ ಉಪನಿರ್ದೇಶಕರಾದ ದೇವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.