ಮಣ್ಣಿನ ಸೊಗಡಿನ ಸಾಹಿತಿ ಆರ್.ಚೌಡರೆಡ್ಡಿ ಅವರಿಗೆ  ರಾಜ್ಯೋತ್ಸವ ಪ್ರಶಸ್ತಿಯ ಗರಿ

JANANUDI.COM NETWORK

ಮಣ್ಣಿನ ಸೊಗಡಿನ ಸಾಹಿತಿ ಆರ್.ಚೌಡರೆಡ್ಡಿ ಅವರಿಗೆ  ರಾಜ್ಯೋತ್ಸವ ಪ್ರಶಸ್ತಿಯ ಗರಿ

ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ ಸಾಹಿತಿ ಹಾಗೂ ಪತ್ರಕರ್ತ ಆರ್.ಚೌಡರೆಡ್ಡಿ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕೃಷಿಕ ಕಟುಂಬದಲ್ಲಿ ಹುಟ್ಟಿ ಬೆಳೆದ ಇವರು, ಪ್ರೌಢ ಶಾಲಾ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಚಿಲಿಪಿಲಿ, ಗಂಧಗಾಳಿ, ಕುಕಿಲು, ಮಾತು ಮೌನದ ನಡುವೆ (ಕವನ ಸಂಕಲನಗಳು), ಪ್ರತಿಬಿಂಬ, ತೋರಣ (ಕಥಾ ಸಂಕಲನಗಳು) ಕಣಿವೆಯ ಕುಸುಮ, ಬೆಂಕಿಯ ಸಂಗ, ಮೂರು ಮುಖಗಳು ( ಕಾದಂಬರಿಗಳು), ಮಾವಿನ ಮಡಿಲು, ಬೇರು ಬೆವರು, ಸುಗ್ಗಿ ಮತ್ತಿತರ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಮಕ್ಕಳಿಗಾಗಿ ಕತೆ ಮತ್ತು ಕವಿತೆಗಳನ್ನು ಬರೆದಿದ್ದಾರೆ.
ಇವರ ಭಾವಗೀತೆಗಳಿಗೆ ಖ್ಯಾತ ಗಾಯಕರಾದ ಪಿಚ್ಚಳ್ಳಿ ಶ್ರೀನಿವಾಸ್, ಡಿ.ಆರ್.ರಾಜಪ್ಪ, ಜಿ.ಪ್ರಭಾಕರರೆಡ್ಡಿ, ಜನ್ನಘಟ್ಟ ಕೃಷ್ಣಮೂರ್ತಿ ಅವರು ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ. ಕತೆ, ಕವನ, ಲೇಖನಗಳು ಪತ್ರಿಕೆಗಳು, ವಿಶೇಷ ಸಂಚಿಕೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಣೆಗಳಲ್ಲಿ ಪ್ರಕಟಗೊಂಡಿವೆ. ಆಕಾಶವಾಣಿಯಿಂದಲೂ ಪ್ರಸಾರವಾಗಿವೆ. ಕೆಲವು ಮಕ್ಕಳ ಪದ್ಯಗಳು ಆನೆ ಬಂದಿತ್ತು ಎಂಬ ಹೆಸರಿನ ಧ್ವನಿ ಸುರುಳಿಯಲ್ಲಿ ಸೇರಿವೆ. ಕೆಲವು ಕವನಗಳು ತೆಲುಗು ಭಾಷೆಗೆ ಭಾಷಾಂತರಗೊಂಡಿವೆ
ಇವರು ಕನ್ನಡ ಜಾಗೃತಿ ಸಮಿತಿಯ ಸದಸ್ಯನಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಪುಸ್ತಕಗಳ ಮೌಲ್ಯಮಾಪಕನಾಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ದಸರಾ ಪ್ರಧಾನ ಕವಿಗೋಷ್ಠಿ ಸೇರಿದಂತೆ ರಾಜ್ಯ ಹಾಗೂ ಅಖಿಲ ಭಾರತ ಮಟ್ಟದ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಹಲವು ಕವಿಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದಾರೆ.
ಇವರು ಸಾಹಿತ್ಯ ಸೇವೆಗಾಗಿ ದೊಡ್ಡಬಳ್ಳಾಪುರದ ಮಾತೃ ಚೌಡೇಶ್ವರಿ ಕಲಾ ಸಂಘದ ವತಿಯಿಂದ ‘ಕನಕದಾಸ ಪ್ರಶಸ್ತಿ’, ಪತ್ರಿಕಾ ಲೇಖನಗಳಿಗಾಗಿ ಬಿ.ವಿ.ನರಸಿಂಹಮೂರ್ತಿ ಪ್ರಶಸ್ತಿ ಹಾಗೂ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶ್ರೀನಿವಾಸಪುರ ತಾಲ್ಲೂಕಿನ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ಪ್ರಜಾವಾಣಿ ಪತ್ರಿಕೆಯ ತಾಲ್ಲೂಕು ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪರಿಸರ ಪ್ರೇಮಿಯಾದ ಆರ್.ಚೌಡರೆಡ್ಡಿ, ಮಾವಿನ ಮಡಿಲು ಎಂದು ಖ್ಯಾತವಾಗಿರುವ ಶ್ರೀನಿವಾಸಪುರ ತಾಲ್ಲೂಕಿನ ಸಸ್ಯ ಹಾಗೂ ಜೀವ ಜಗತ್ತಿನ ವೈವಿಧ್ಯತೆಯನ್ನು ತಮ್ಮ ಲೇಖನಗಳಲ್ಲಿ ಹಿಡಿದಿಟ್ಟಿದ್ದಾರೆ. ಮಣ್ಣಿನ ವಾಸನೆಯಿಂದ ಕೂಡಿರುವ ಅವರ ಲೇಖನಗಳಲ್ಲಿ ಪರಿಸರ ಕಾಳಜಿ, ಸಾಂಸ್ಕøತಿಕ ಪರಂಪರೆಯ ಸೊಗಡು ಹಾಗೂ ಕೃಷಿ ಕ್ಷೇತ್ರದ ಏಳುಬೀಳು ಪ್ರಧಾನವಾಗಿ ಕಂಡುಬರುತ್ತದೆ.
ಪತ್ರಿಕಾ ಕ್ಷೇತ್ರ ಹಾಗೂ ಸಾಹಿತ್ಯ ವಲಯದಲ್ಲಿ ತಮ್ಮದೇ ಆದ ಶೈಲಿಯ ಬರವಣಿಗೆಯಿಂದ ಗುರುತಿಸಿಕೊಂಡಿರುವ ರೆಡ್ಡಿಯವರು ಸ್ನೇಹ ಜೀವಿ. ಮಣ್ಣಿನ ನಂಟು ಬಿಡದೆ ಸಾಹಿತ್ಯದ ಜತೆಗೆ ಕೃಷಿಯನ್ನೂ ಅಪ್ಪಿಕೊಂಡಿದ್ದಾರೆ. ಮಣ್ಣಿನ ಸೊಗಡಿನ ಸಾಹಿತಿಗೆÀ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ ಸಿಕ್ಕಿರುವುದು ಸಾಹಿತ್ಯಾಸಕ್ತರಿಗೆ ಸಂತೋಷ ತಂದಿದೆ.