ವರದಿ : ಕೆ.ಜಿ.ವೈದ್ಯ,ಕುಂದಾಪುರ
ಕುಂದಾಪುರ : ಮಾನವ ಜೀವಿ ನಿಜವಾದ ಮನುಷ್ಯನಾಗಬೇಕಾದರೆ ಆತನಿಗೆ ಸಂಸ್ಕಾರ ಬೇಕು. ಸಂಸ್ಕಾರ ಎಂದರೆ ಸರಿಪಡಿಸುವುದು ಎಂದರ್ಥ. ಬುದ್ಧಿ ಎಳೆದಲ್ಲೆಲ್ಲ ಹೋಗುವವ ವಾನರ, ಸಂಸ್ಕಾರ ನಿರ್ದೇಶಿಸಿದಂತೆ ನಡೆದು ಬಾಳುವವ ನರ. ಮಾನವತ್ವದಿಂದ ಮಾಧವತ್ವದೆಡೆಗೆ ಜೀವಿಯನ್ನು ಕೊಂಡೊಯ್ಯುವುದೇ ಸಂಸ್ಕಾರ. ಪರಿಪೂರ್ಣತ್ವವನ್ನು ಪಡೆಯಲು ಶಾಸ್ತ್ರದಲ್ಲಿ ಮನುಷ್ಯರಿಗೆ ಹದಿನಾರು ಸಂಸ್ಕಾರಗಳನ್ನು ಹೇಳಲಾಗಿದೆ. ಬ್ರಾಹ್ಮಣ ಸಂಘಟನೆಗಳು ಈ ಸಂಸ್ಕಾರಗಳ ಮಹತ್ವವನ್ನು ಪರಿಚಯಿಸಿ ಸಮಾಜದಲ್ಲಿ ನೈತಿಕತೆಯನ್ನು ಬೆಳೆಸುವ ಕಾರ್ಯಗಳನ್ನು ಮಾಡಬೇಕು ಎಂದು ವಿದ್ವಾನ್ ಡಾ. ವಾಸುದೇವ ಭಟ್ ಹಂದಲಸು ಕರೆನೀಡಿದರು.
ಕೊರ್ಗಿಯ ಶ್ರೀ ರಾಜರಾಜೇಶ್ವರೀ ದೇವಾಲಯದಲ್ಲಿ ನಡೆದ ಗುಡ್ಡಟ್ಟು ವಲಯ ಬ್ರಾಹ್ಮಣ ಪರಿಷತ್ ನ ವಾರ್ಷಿಕ ಅಧಿವೇಶನದಲ್ಲಿ ‘ಸಂಸ್ಕಾರಗಳ ಮಹತ್ವ’ ಎಂಬ ವಿಷಯವಾಗಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ವೇದಮೂರ್ತಿ ನಾಗೇಶ್ವರ ಮಂಜ ಕೊರ್ಗಿ ಸಹಧರ್ಮಿಣಿ ದೀಪಾ ಮಂಜ ಜೊತೆಗೂಡಿ ಜ್ಯೋತಿ ಬೆಳಗಿ ಅಧಿವೇಶನವನ್ನು ಉದ್ಘಾಟಿಸಿ ಶುಭಹಾರೈಸಿದರು. ತೊಂಬತ್ತೇಳರ ಹರೆಯದ ವೇದಮೂರ್ತಿ ಮಹಾಬಲೇಶ್ವರ ಐತಾಳ ಹಾರ್ಯಾಡಿ ವಿದ್ಯಾನಿಧಿಗೆ ಚಾಲನೆ ನೀಡಿದರು. ಐತಾಳ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಗುಡ್ಡಟ್ಟು ವಲಯಾಧ್ಯಕ್ಷ ಕೆ. ರಾಜಶೇಖರ ಉಪಾಧ್ಯಾಯ ಸಭಾಧ್ಯಕ್ಷತೆ ವಹಿಸಿದ್ದರು. ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ರಾಘವೇಂದ್ರ ಅಡಿಗ ಕಲ್ಕಟ್ಟೆ, ಮಹಿಳಾ ವೇದಿಕೆ ಅಧ್ಯಕ್ಷೆ ಪವಿತ್ರಾ ಅಡಿಗ, ವಲಯ ಗೌರವಾಧ್ಯಕ್ಷ ಎನ್. ಸತೀಶ್ ಅಡಿಗ, ಖಜಾಂಚಿ ಸತೀಶ್ ಕೊಡ್ಲಾಯ, ಮಹಿಳಾ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಕೊಡ್ಲಾಯ, ಯುವವಿಪ್ರ ವೇದಿಕೆ ಅಧ್ಯಕ್ಷ ಶ್ರೀಧರ ಉಡುಪ, ಗುಡ್ಡಟ್ಟು ಶ್ರೀ ವಿನಾಯಕ ದೇವಳದ ಆನುವಂಶಿಕ ಆಡಳಿತ ಧರ್ಮದರ್ಶಿ ವೇದಮೂರ್ತಿ ಅನಂತಪದ್ಮನಾಭ ಅಡಿಗ ಮುಖ್ಯ ಅತಿಥಿಗಳಾಗಿದ್ದು ಶುಭಹಾರೈಸಿದರು. ವಾಗೀಶ ಉಪಾಧ್ಯಾಯ ವಾರ್ಷಿಕ ವರದಿ ಓದಿದರು.
ವಲಯ ಮಹಿಳಾ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಕೊಡ್ಲಾಯ ಸ್ವಾಗತಿಸಿದರು. ವಲಯ ಗೌರವಾಧ್ಯಕ್ಷ ಎನ್. ಸತೀಶ್ ಅಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಸವಿತಾ ಉಪಾಧ್ಯಾಯ ವಿದ್ಯಾನಿಧಿಗೆ ಆರಂಭಿಕ ಕೊಡುಗೆ ನೀಡಿದರು. ತಾಲೂಕು ಪರಿಷತ್ ಹಾಗೂ ವಿವಿಧ ವಲಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಗಲಿದ ಚೇತನಗಳಿಗೆ ಆರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಾಲಚಂದ್ರ ಅಡಿಗ ಕಾರ್ಯಕ್ರಮ ನಿರೂಪಿಸಿ, ಶ್ರೀಧರ ಉಡುಪ ವಂದಿಸಿದರು.