ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಕೆಲವೆಡೆ ಕಣ್ಣಿಗೆ ಹಾನಿ ಪಟಾಕಿ ಸಿಡಿಸುವಾಗ 10ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಬೆಳಕಿನ ಹಬ್ಬವಾದ ದೀಪಾವಳಿಯಂದು ಪಟಾಕಿ ಸಿಡಿಸುವಾಗ ಈ ಬಾರಿ ದೃಷ್ಟಿದೋಷದಂತಹ ಯಾವುದೇ ಗಂಭೀರ ಪ್ರಕರಣಗಳು ವರದಿಯಾಗಿಲ್ಲವಾದರೂ, ತಾಲ್ಲೂಕಿನ ವಿವಿಧೆಡೆ 10ಕ್ಕೂ ಹೆಚ್ಚು ಮಂದಿ ಮಕ್ಕಳು, ಹಿರಿಯರು ಸಣ್ಣಪುಟ್ಟ ಕಣ್ಣಿನ ಸಮಸ್ಯೆಗಳು, ಸುಟ್ಟಗಾಯಗಳಿಂದ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಧಾವಿಸಿದ್ದು, ನಗರದ ವಿವೇಕ ನೇತ್ರಾಲಯವೊಂದರಲ್ಲೇ 5 ಮಂದಿ ಕಣ್ಣಿನ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ನೇತ್ರ ತಜ್ಞ ಡಾ.ಹೆಚ್.ಆರ್.ಮಂಜುನಾಥ್ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿದ ಅವರು, ಮುನ್ನಚ್ಚರಿಕೆ ದೃಷ್ಟಿಯಿಂದ ದಿನದ 24 ಗಂಟೆಗಳು ತುರ್ತು ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದ್ದು, ಸಂಪೂರ್ಣ ದೃಷ್ಟಿಹಾನಿಯಂತಹ ಯಾವುದೇ ಪ್ರಕರಣಗಳು ವರದಿಯಾಗಲ್ಲ ಎಂದು ತಿಳಿಸಿದರು.
ಬೆಳಕಿನ ಹಬ್ಬದಲ್ಲಿ ಮಕ್ಕಳು ಸಂಭ್ರಮದಿಂದ ಪಟಾಕಿ ಸಿಡಿಸುವಾಗ ಚಿಣ್ಣರಿಗೆ ಮಾತ್ರವಲ್ಲದೇ ಪೋಷಕರ ಕಣ್ಣಿಗೂ ಹಾನಿಯಾಗಿದ್ದು, ತಮ್ಮಲ್ಲಿಗೆ ಬಂದ ಐವರಿಗೆ ಸಣ್ಣಪುಟ್ಟ ಪ್ರಮಾಣದಲ್ಲಿ ತೊಂದರೆಯಾಗಿದೆ ಎಂದು ತಿಳಿಸಿದರು.
ಸಾಮಾನ್ಯವಾಗಿ ಪಟಾಕಿ ಸಿಡಿಸುವಾಗ ಪಟಾಕಿಯೊಳಗಿನ ರಾಸಾಯನಿಕದಿಂದ, ಸಿಡಿತದ ವೇಗಕ್ಕೆ ಮಣ್ಣು ಮತ್ತು ಬೆಂಕಿಯಿಂದ ಎರಡೂ ರೀತಿಯ ಸಮಸ್ಯೆ ಎದುರಾಗುತ್ತದೆ ಎಂದು ಅವರು ತಿಳಿಸಿದರು.
ಪಟಾಕಿ ಕಡಿಮೆ
ಹಾನಿಯೂ ಇಲ್ಲ
ನಗರದ ಶಂಕರನೇತ್ರಾಲಯಕ್ಕೆ ಈ ಬಾರಿ ಯಾವುದೇ ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾದ ಪ್ರಕರಣ ಬಂದಿಲ್ಲ ಎಂದು ನೇತ್ರ ತಜ್ಞ ಡಾ.ಶಂಕರ್ ನಾಯಕ್ ತಿಳಿಸಿದರು.
ಈ ಬಾರಿ ಪಟಾಕಿ ಬಳಕೆ ಪ್ರಮಾಣವೂ ಕಡಿಮೆಯಾಗಿದೆ, ಆದ್ದರಿಂದಾಗಿ ಕಣ್ಣಿಗೆ ಹಾನಿಯೂ ಆಗಿಲ್ಲ ಎಂದ ಅವರು, ಸಾರ್ವಜನಿಕರಲ್ಲಿ ಪಟಾಕಿ ಸಿಡಿಸುವುದರಿಂದಾಗುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ವೈದ್ಯ ಹೆಚ್.ಆರ್.ಮಂಜುನಾಥ್ ಅವರು ಹೇಳುವಂತೆ ಪಟಾಕಿ ಸಿಡಿಸುವುದನ್ನೇ ಬಿಟ್ಟರೆ ಒಳಿತು, ಪರಿಸರ ಮಾತ್ರವಲ್ಲ ಕಣ್ಣಿನ ರಕ್ಷಣೆಗೂ ಸಹಕಾರಿ ಎಂದರು.
ಇಷ್ಟಕ್ಕೂ ಪಟಾಕಿ ಸಿಡಿಸಲೇ ಬೇಕಾದಲ್ಲಿ ಪೋಷಕರು ಎಚ್ಚರಿಕೆಯಿಂದ ಮಕ್ಕಳಿಂದ ಪಟಾಕಿ ಹೊಡೆಸಬೇಕು ಎಂದು ತಿಳಿಸಿದರು.
ಸುಟ್ಟ ಗಾಯಗಳಿಗೆ
ಆಯುರ್ವೇದ ಚಿಕಿತ್ಸೆ
ನಗರದ ಹಳೆ ಮಾಧ್ಯಮಿಕ ಶಾಲೆ ಎದುರಿಗಿರುವ ವೆಂಕಟೇಶಶೆಟ್ಟಿ ಸುಟ್ಟಗಾಯಗಳ ಚಿಕಿತ್ಸಾಲಯಕ್ಕೆ ದೀಪಾವಳಿ ನಂತರದ ಭಾನುವಾರ ಮತ್ತು ಮತ್ತು ಸೋಮವಾರ ಸುಟ್ಟ ಗಾಯಗಳಿಂದ 10ಕ್ಕೂ ಹೆಚ್ಚು ಮಂದಿ ಬಂದಿದ್ದು, ಇದರಲ್ಲಿ ಐವರು ಮಂದಿ ಪಟಾಕಿ ಸಿಡಿತದಿಂದ ಗಾಯಗೊಂಡವರು ಎಂದು ತಿಳಿಸಿದರು.
ಪ್ರತಿವರ್ಷ ಅಡುಗೆ ಎಣ್ಣೆ,ಪಟಾಕಿ ಬೆಂಕಿಯ ಸುಟ್ಟ ಗಾಯಗಳ 25ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಈ ಬಾರಿ ಕಡಿಮೆಯಾಗಿರುವ ಕುರಿತು ಸಂತಸ ವ್ಯಕ್ತಪಡಿಸಿ,ಜನತೆಯಲ್ಲಿ ಅರಿವು ಮೂಡಿದೆ ಎಂದರು.
ನಗರದ ಎಸ್‍ಎನ್‍ಆರ್ ಆಸ್ಪತ್ರೆ, ಜಾಲಪ್ಪ ಆಸ್ಪತ್ರೆ, ನೇತ್ರದೀಪ ಕಣ್ಣಿನ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಒಂದೆರಡು ಪ್ರಕರಣಗಳ ವರದಿಯಾಗಿದ್ದು, ಒಟ್ಟಾರೆ ಈ ಬಾರಿ ಪಟಾಕಿಯಿಂದಾದ ಹಾನಿಯ ಪ್ರಮಾಣ ಕಡಿಮೆಯಾಗಿದೆ
.