JANANUDI.COM NETWORK
ಬೀಜಾಡಿ: ನಮ್ಮ ನೆಲದ ಸಂಸ್ಕ್ರತಿ, ಕಲೆ, ಆಚಾರ ವಿಚಾರವನ್ನು ಉಳಿಸಿ ಬೆಳೆಸುವ ಕೆಲಸ ಕನ್ನಡ ಜಾನಪದ ಪರಿಷತ್ ಮಾಡುತ್ತಿದೆ. ಸೋಭಾನೆ ಸಹಿತ ಇನ್ನಿತರ ಜಾನಪದ ಕಲೆಗಳ ದಾಖಲಿಕರಣ ಮಾಡುವುದರ ಮೂಲಕ ಮುಂದಿನ ಪೀಳಿಗೆಗೆ ಅದು ಅನುಕೂಲವಾಗಲಿದೆ ಎಂದು ಕನ್ನಡ ಜಾನಪದ ಪರಿಷತ್‍ನ ವಿಭಾಗೀಯ ಸಂಚಾಲಕಿ ಡಾ.ಭಾರತಿ ಮರವಂತೆ ಹೇಳಿದರು.
ಅವರು ಭಾನುವಾರ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ, ಬೀಜಾಡಿ ಗೋಪಾಡಿ ಮಿತ್ರ ಸಂಗಮ, ರೋಟರಿ ಸಮುದಾಯ ದಳ ಬೀಜಾಡಿ ಗೋಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಅವರ ಮಾರ್ಗದರ್ಶನದಲ್ಲಿ ಬೀಜಾಡಿ ದಿವಂಗತ ನಾಗೇಶ್ವರ ಬಾಯರಿ ಅವರ ಮನೆಅಂಗಳದಲ್ಲಿ ನಡೆದ ಸೋಭಾನೆ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್ ವಹಿಸಿದ್ದರು. ವೇದಮೂರ್ತಿ ಶಂಕರನಾರಾಯಣ ಬಾಯರಿ ಆಶೀರ್ವಚನಗೈದರು.ಕನ್ನಡ ಜಾನಪದ ಪರಿಷತ್ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಉದಯ ಕುಮಾರ್ ಬಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಸೋಭಾನೆ ಹಾಡುಗಾರರಾದ ತಲ್ಲೂರು ಕೋಟೆಬಾಗಿಲು ಗ್ರಾಮದ ಸೀತು, ಬೀಜಾಡಿ ಗ್ರಾಮದ ಶಾರದಾ ಗಾಣಿಗ, ತಲ್ಲೂರು ಕಂಬಳಗದ್ದೆ ದುರ್ಗಿ ಅವರನ್ನು ಸನ್ಮಾನಿಸಿಸಲಾಯಿತು.ಕನ್ನಡ ಜಾನಪದ ಪರಿಷತ್‍ನ ವಿಭಾಗೀಯ ಸಂಚಾಲಕಿ ಡಾ.ಭಾರತಿ ಮರವಂತೆ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿನಿ ಪ್ರೀತಿ ಜಾನಪದದಲ್ಲಿ ಮಹಿಳೆಯ ಪಾತ್ರದ ಕುರಿತು ಮಾತನಾಡಿದರು. ಸುಜಾತ ಗೋಪಾಡಿ, ಚಂದ್ರ ಬಿ.ಎನ್ ಸೋಭಾನೆ ಮತ್ತು ಜಾನಪದ ಹಾಡನ್ನು ಹಾಡಿದರು.
ಮಿತ್ರ ಸಂಗಮದ ಅಧ್ಯಕ್ಷ ಮಂಜುನಾಥ ಬೀಜಾಡಿ ಸ್ವಾಗತಿಸಿದರು.ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್ ಗಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಸಮುದಾಯ ದಳ ಅಧ್ಯಕ್ಷ ಗಿರೀಶ್ ಕೆ.ಎಸ್ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.