ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : ಅಪ್ರಾಪ್ತ ವಯಸ್ಸಿನ ಮಕ್ಕಳ ಬಾಲ್ಯ ವಿವಾಹವನ್ನು ತಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಲ್ ರಘುನಾಥ್ ಅವರು ತಿಳಿಸಿದರು . ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಜಿಲ್ಲಾ ವಕೀಲರ ಸಂಘ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಜಿಲ್ಲಾ ಮಕ್ಕಳ ರಕ್ಷಣಾ ಘಟಕ , ಮಕ್ಕಳ ಕಲ್ಯಾಣ ಸಮಿತಿ , ಕಲೆಕ್ಟಿವ್ ಆ್ಯಕ್ಷನ್ ನೆಟ್ ವರ್ಕ್ , ಚೈಲ್ಡ್ ರೈಟ್ಸ್ ಟ್ರಸ್ಟ್ , ಅರ್ಪಣಂ ಸಂಸ್ಥೆ ಬಾಗೇಪಲ್ಲಿ . ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಾಲ್ಯವಿವಾಹ ನಿಷೇಧ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು . ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನ್ವಯ ಮಹಿಳೆಗೆ 18 ವರ್ಷ ಹಾಗೂ ಪುರುಷನಿಗೆ 21 ವರ್ಷದ ನಂತರದಲ್ಲಿ ಮದುವೆಯಾಗಲು ಕಾನೂನಿನಲ್ಲಿ ಅವಕಾಶವಿದೆ . ಈ ವಯಸ್ಸಿಗೆ ಮೊದಲು ಮದುವೆಯಾದರೆ ಅದು ಬಾಲ್ಯ ವಿವಾಹವಾಗುತ್ತದೆ ಎಂದರು . ಸಾಮೂಹಿಕ ವಿವಾಹಗಳ ಸಂದರ್ಭದಲ್ಲಿ , ಆರ್ಥಿಕ ತೋಂದರೆ , ಹೀಗೆ ವಿವಿಧ ರೀತಿಯ ತೊಂದರೆಗಳಿಂದ ಬಾಲ್ಯ ವಿವಾಹಗಳು ಆಗುತ್ತಿವೆ . ಹೆಣ್ಣು ಮಕ್ಕಳ ಹಾಗೂ ಮಹಿಳೆಯರ ರಕ್ಷಣೆಗೆ ವಿವಿಧ ಕಾನೂನುಗಳನ್ನು ರೂಪಿಸಲಾಗಿದೆ . ಶಿಕ್ಷಣವು ಮೂಲಭೂತ ಹಕ್ಕಾಗಿದೆ ಆದರೆ ಆಸ್ತಿಯ ಹಕ್ಕನ್ನು ಸಾಂವಿಧಾನಿಕ ಹಕ್ಕಾಗಿ ಗುರುತಿಸಲ್ಪಟ್ಟಿದೆ . ಶಿಕ್ಷಣವನ್ನೆ ಆಸ್ತಿಯನ್ನಾಗಿ ಮಾಡಿ ಅಂದರೆ ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದರು .18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ವಿವಾಹ ನೆರವೇರಿಸಿದ್ದಲ್ಲಿ ಕಾನೂನು ಚೌಕಟ್ಟಿನಲ್ಲಿ ಇದು ಅಪರಾಧವಾಗಿದ್ದು , ಕಾನೂನಿನ ಮಾನ್ಯತೆ ಇರುವುದಿಲ್ಲ . ಬಾಲ್ಯವಿವಾಹ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಇದ್ದಲ್ಲಿ ತಕ್ಷಣ ಅಂತಹ ಬಾಲ್ಯವಿವಾಹವನ್ನು ತಡೆಯಬೇಕು . ಮಹಿಳೆಯರಿಗೆ ಎಲ್ಲಾ ರಂಗಗಳಲ್ಲೂ ಶೇ 33 ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು . ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ವಂಚಿತ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣವನ್ನು ನೀಡಬೇಕು . ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿಕ್ಷಣ ವಂಚಿತ ಮಕ್ಕಳ ಬಗ್ಗೆ ಗಣತಿ ( ಸಮೀಕ್ಷೆ ) ನಡೆಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು . ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಹೆಚ್ ಗಂಗಾಧರ್ ಅವರು ಮಾತನಾಡಿ , ಜಿಲ್ಲೆಯಲ್ಲಿ ಕರೋನಾ ಸಂದರ್ಭದಲ್ಲಿ ಹಲವಾರು ಬಾಲ್ಯ ವಿವಾಹಗಳು ಆಗಿರುವುದು ಮಾಹಿತಿ ಇದ್ದು , ಇನ್ನು ಮುಂದೆ ಆಗುವ ಬಾಲ್ಯವಿವಾಹಗಳನ್ನು ತಡೆಯಬೇಕಿದೆ . ಬಾಲ್ಯವಿವಾಹಗಳನ್ನು ತಡೆಗಟ್ಟುವ ಉದ್ದೇಶ ಸಮಾಜವು ಸದೃಢತೆ ಕಡೆಗೆ ಸಾಗುವುದು ಎಂದರು . ಕೋವಿಡ್ 19 ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ . ಅದರಂತೆಯೇ ಗ್ರಾಮೀಣ ಮಟ್ಟದಲ್ಲಿ ಅಗುವಂತ ಬಾಲ್ಯವಿವಾಹಗಳನ್ನು ತಡೆಗಟ್ಟಲು ಸ್ಥಳೀಯ ಅಧಿಕಾರಿಗಳು ಕ್ರಮ ವಹಿಸಬೇಕು . ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಕ್ಕಳ ಹಾಗೂ ಮಹಿಳೆಯರ ರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ರೀತಿಯ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ . ಶಿಕ್ಷಣವು ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು ಎಂದರು . ಬಾಲ್ಯವಿವಾಹಗಳನ್ನು ತಡೆಗಟ್ಟಲು ಸರ್ಕಾರ ವಿವಿಧ ಕಾನೂನುಗಳನ್ನು ಜಾರಿಗೆ ತಂದಿದೆ . ಯಾರೇ ಆದರೂ ಬಾಲ್ಯವಿವಾಹ ನಡೆಯುತ್ತಿದೆ ಎಂದು ಕರೆ ಮಾಡಿದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ , ಪರಿಶೀಲಿಸಿ ಬಾಲ್ಯವಿವಾಹ ಆಗುತ್ತಿದ್ದಲ್ಲಿ ಅಂತಹ ಬಾಲ್ಯವಿವಾಹವನ್ನು ಅಧಿಕಾರಿಗಳು ತಡೆಯಬೇಕು ಎಂದ ಅವರು ಮಕ್ಕಳ ಹಕ್ಕುಗಳ ಹಿತರಕ್ಷಣೆಗೊಸ್ಕರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಕಾನೂನು ಸೇವಾ ಅಧಿಕಾರಿಯನ್ನು ನೇಮಿಸಲಾಗಿದೆ ಎಂದರು . ಜಿಲ್ಲೆ ವ್ಯಾಪ್ತಿಯಲ್ಲಿ ಯಾವುದಾದರೂ ಬಾಲ್ಯವಿವಾಹ ನಡೆಯುತ್ತಿರುವುದು ಕಂಡುಬಂದರೆ 8762002393 ಈ ಸಂಖ್ಯೆಗೆ ಕರೆಮಾಡಿ ತಿಳಿಸಿದರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು .ಇದೇ ಸಂದರ್ಭದಲ್ಲಿ ಬಾಲ್ಯ ವಿವಾಹವನ್ನು ತಡೆಗಟ್ಟುವ ಕುರಿತು ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು . ಕಾರ್ಯಾಗಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಎಂ ಜಿ ಪಾಲಿ , ಚೈಲ್ಡ್ ರೈಟ್ ಟ್ರಸ್ಟ್ ನ ಕಾರ್ಯಕಾರಿ ನಿರ್ದೇಶಕರಾದ ವಾಸುದೇವ ಶರ್ಮಾ , ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಸಂಜೀವಪ್ಪ , ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಚೌಡಪ್ಪ , ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿಗಳಾದ ರಘುಪತಿ , ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ರಮೇಶ್ , ಕಾರ್ಯಗಾರದ ಸಂಪನ್ಮೂಲ ವ್ಯಕ್ತಿ ಕೆ ಎಸ್ ಗಣೇಶ್ , ಗಮನ ಮಹಿಳಾ ಸಮೂಹದ ಶಾಂತಮ್ಮ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು , ಅಂಗನವಾಡಿ ಕಾರ್ಯಕರ್ತೆಯರು , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು ಉಪಸ್ಥಿತರಿದ್ದರು.