ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ ಸೆ.18: ಬಳ್ಳಾರಿ ಜಿಲ್ಲೆಯ ರೈತ ಹೋರಾಟಗಾರ್ತಿ ಮತ್ತು ರೈತ ಮಹಿಳೆ ಮೇಲೆ ಹಲ್ಲೆ ಮಾಡಿ, ಅತ್ಯಾಚಾರ, ಕೊಲೆಯತ್ನ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ರೈತಸಂಘದ ಹೋರಾಟಗಾರ್ತಿ ಸೆ.5ರಂದು ಹೊಳಲು ಗ್ರಾಮದ ಸಮೀಪ ಹೊಲಕ್ಕೆ ಹೋದ ಸಂದರ್ಭದಲ್ಲಿ ಆಕೆಯ ಮೇಲೆ ಹಲ್ಲೆ ಮಾಡಿರುವುದಲ್ಲದೆ, ಅತ್ಯಾಚಾರಕ್ಕೆ ಮತ್ತು ಬಲವಂತವಾಗಿ ವಿಷ ಕುಡಿಸಿ ಕೊಲೆಗೆ ಯತ್ನಿಸಿರುವುದು ಖಂಡನೀಯವಾಗಿದೆ. ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಸೆ.5ರಂದು ಘಟನೆ ನಡೆದಿದ್ದು, ಈವರೆಗೂ ಆರೋಪಿಗಳನ್ನು ಬಂಧಿಸದೇ ಇರುವ ಕ್ರಮ ಸರಿಯಲ್ಲ. ರಾಜ್ಯ ಮತ್ತು ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ದಿನೇದಿನೇ ಹೆಚ್ಚಾಗುತ್ತಿದ್ದರೂ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗುತ್ತಿಲ್ಲ.ಹಾಗಾಗಿ ಭಯವಿಲ್ಲದೆ ಇಂತಹ ಕೃತ್ಯಗಳನ್ನು ಎಸಲಾಗುತ್ತಿದ್ದು, ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ರೈತ ಹೋರಾಟಗಾರ್ತಿಯ ಮೇಲಿನ ಹಲ್ಲೆ, ಅತ್ಯಾಚಾರಕ್ಕೆ ಮತ್ತು ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕಾಗಿದ್ದು, ಇಲ್ಲವಾದಲ್ಲಿ ಇಂತಹ ಘಟನೆಗಳು ರಾಜ್ಯದ ಮೂಲೆ ಮೂಲೆಯಲ್ಲಿಯೂ ಪದೇಪದೇ ಮರುಕಳಿಸುವುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ತಕ್ಷಣ ಈ ಪ್ರಕರಣ ಆರೋಪಿಗಳನ್ನು ಬಂಧಿಸಿ ಆಕೆಗೆ ನ್ಯಾಯ ಒದಗಿಸಿಕೊಡಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪೋಲಿಸ್ ವರಿಷ್ಠಾಧಿಕರಿಗಳಾದ ಕಾರ್ತಿಕ್ರೆಡ್ಡಿರವರು ನಿಮ್ಮ ಈ ಮನವಿಯನ್ನು ಕೂಡಲೇ ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು
ಮನವಿ ನೀಡುವಾಗ ಎಸ್.ಎಪ್.ಐ ಅಂಬರೀಶ್, ಗಾಂದಿನಗರ ಬಾಬು,ಕೆ.ಬಿ.ಎಸ್ ಉಪಾದ್ಯಕ್ಷ ಮುಶೀರ್ ಅಹಮದ್, ನಾರಾಯಣ, ನಳಿನಿ.ವಿ ಕಾವ್ಯಾಂಜಲಿ, ಚಂದ್ರಪ್ಪ ಮುಂತಾದವರಿದ್ದರು.
