ಪ್ರೌಢಶಾಲಾ ಶಿಕ್ಷಕರಿಗೆ ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಾಗಾರ ಬೋಧನೆಯಲ್ಲಿ ತಂತ್ರಜ್ಞಾನ ಬಳಸಲು ತರಬೇತಿ ಅಗತ್ಯ:ಜಯರಾಮರೆಡ್ಡಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಮಕ್ಕಳ ಸುಲಭ ಕಲಿಕೆಗೆ ಪೂರಕವಾಗಿ ಬದಲಾಗಲು ಶಿಕ್ಷಕರಿಗೆ ತರಬೇತಿ ಅಗತ್ಯ ಎಂದು ಡಿಡಿಪಿಐ ಹಾಗೂ ಡಯಟ್ ಪ್ರಾಂಶುಪಾಲರೂ ಆದ ಕೆ.ಎಂ.ಜಯರಾಮರೆಡ್ಡಿ ತಿಳಿಸಿದರು.
ಗುರುವಾರ ನಗರದ ಬಾಲಕರ ಜೂನಿಯರ್ ಕಾಲೇಜಿನಲ್ಲಿ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ವತಿಯಿಂದ ಪ್ರೌಢಶಾಲಾ ಶಿಕ್ಷಕರಿಗೆ ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಾಗಾರ (ಟಾಲ್ಪ್)ಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಬೋಧನೆ ಪರಿಣಾಮಕಾರಿಯಾಗಲು ಶಿಕ್ಷಕರಿಗೆ ಕಾಲಕಾಲಕ್ಕೆ ತಕ್ಕಂತೆ ಅಗತ್ಯ ತಾಂತ್ರಿಕ ತರಬೇತಿ ನೀಡಿ ಸಜ್ಜುಗೊಳಿಸುವ ಕೆಲಸ ಇಲಾಖೆಯಿಂದ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಕಲಿಕೆಯಲ್ಲಿ ಬದಲಾವಣೆ ಅಗತ್ಯವಾಗಿದೆ, ಒಂದುಕಡೆ ಆನ್‍ಲೈನ್ ಶಿಕ್ಷಣದ ಕೂಗು ಇದೆ, ಜತೆಗೆ ಮಕ್ಕಳಿಗೆ ತಂತ್ರಜ್ಞಾನದೊಂದಿಗೆ ಶಿಕ್ಷಣ ನೀಡುವುದು ಅಗತ್ಯವೂ ಇದೆ ಎಂದರು.
ಸರ್ಕಾರಿ ಶಾಲೆಗಳಲ್ಲೂ ಮಕ್ಕಳಿಗೆ ಗಣಕಯಂತ್ರವನ್ನು ಬಳಸಿಕೊಂಡು ಗುಣಮಟ್ಟದ ಬೋಧನೆ ನೀಡಲು ಶಿಕ್ಷಕರು ಸಜ್ಜಾಗಬೇಕು, ಕಲಿಕೆಗೆ ಪೂರಕವಾದ ಅನೇಕ ತಂತ್ರಾಂಶಗಳು ಇಂದು ಆನ್‍ಲೈನ್‍ನಲ್ಲಿ ಸಿಗುತ್ತವೆ, ನಿಮ್ಮ ಬೋಧನೆಯ ಜತೆಗೆ ಆ ತಂತ್ರಾಂಶಗಳ ನೆರವು ಪಡೆದು ಮಕ್ಕಳಿಗೆ ಬೋಧನೆ ಮಾಡಿದಲ್ಲಿ ಮತ್ತಷ್ಟು ಪರಿಣಾಮಕಾರಿ ಎಂದರು.
ಶಾಲೆಗಳ ಆರಂಭದ ಕುರಿತು ಸರ್ಕಾರ ಇನ್ನೂ ಸ್ವಷ್ಟ ನಿರ್ಧಾರ ಕೈಗೊಂಡಿಲ್ಲ, ಆದರೆ ಕೆಲವೇ ದಿನಗಳಲ್ಲಿ ನಿರ್ಧಾರ ಹೊರ ಬೀಳುವ ಸಾಧ್ಯತೆ ಇರುವುದರಿಂದ ಶಾಲೆಗಳಲ್ಲಿ ಸ್ವಚ್ಚತೆ ಮತ್ತಿತರ ಕಾರ್ಯಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದರು.
ಕಂಪ್ಯೂಟರ್ ಶಿಕ್ಷಣ
ಅತ್ಯಗತ್ಯ-ಕೆ.ಉಮಾ
ಕಾರ್ಯಕ್ರಮ ಸಂಯೋಜಕರು ಹಾಗೂ ಡಯಟ್ ಹಿರಿಯ ಉಪನ್ಯಾಸಕರಾದ ಕೆ.ಉಮಾ ಮಾತನಾಡಿ, ಕಂಪ್ಯೂಟರ್ ಕಲಿಕೆ ಇಂದು ಪ್ರತಿಯೊಬ್ಬರಿಗೂ ಅಗತ್ಯವಿದೆ, ಮಕ್ಕಳಿಗೆ ವಿವಿಧ ತಂತ್ರಾಂಶಗಳನ್ನು ಬಳಸಿಕೊಂಡು ಅವರ ಆಶಯಕ್ಕೆ ತಕ್ಕಂತೆ ಕಲಿಕೆಯಲ್ಲಿ ಬದಲಾವಣೆ ತಂದುಕೊಳ್ಳುವುದು ಅಗತ್ಯವಾಗಿದೆ ಎಂದರು.
ಮಕ್ಕಳಿಗೆ ಶಿಕ್ಷಕರು ತಾತ್ವಿಕ ಬೋಧನೆಯ ಜತೆಗೆ ತಂತ್ರಜ್ಞಾನ ಬಳಸಿ ಚಿತ್ರಗಳ ಮೂಲಕ ಕಲಿಸಲು ಮುಂದಾದರೆ ಅದು ಹೆಚ್ಚು ಪರಿಣಾಮಕಾರಿಯೂ ಆಗಿರುತ್ತದೆ ಎಂದರು.
ಸರ್ಕಾರಿ ಶಾಲೆಗಳ ಎಲ್ಲಾ ಶಿಕ್ಷಕರಿಗೂ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಿನ್ನಲೆಯಲ್ಲಿ ಕಂಪ್ಯೂಟರ್ ಜ್ಞಾನ ಅಗತ್ಯವಿದೆ, ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣವನ್ನು ಕಲಿಸಿಕೊಡಲು ಅದು ಸಹಾಯವೂ ಆಗುತ್ತದೆ ಜತೆಗೆ ತಮ್ಮ ಕಲಿಕಾ ವಿಧಾನದಲ್ಲೂ ಕಂಪ್ಯೂಟರ್ ಬಳಸಿಕೊಂಡು ಮಕ್ಕಳನ್ನು ಕಲಿಕೆಯೆಡೆಗೆ ಆಕರ್ಷಿಸಲು ಸಹಕಾರಿಯಾಗಲಿದೆ ಎಂದರು.
ತರಬೇತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಸ್ಯಾನಿಟೈಸರ್ ಬಳಸಿ, ಕೋವಿಡ್ ಕುರಿತು ಎಚ್ಚರಿಕೆಯಿಂದಿರಿ, ತರಬೇತಿಯ ಪ್ರಯೋಜನ ಪಡೆದುಕೊಂಡು ಅದನ್ನು ಶಾಲೆಗಳಲ್ಲಿ ಅನುಷ್ಟಾನಗೊಳಿಸಿ ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಬಿಜು ಥಾಮಸ್, ಶಿಲ್ಪಾ, ಪುಷ್ಪಲತಾ, ಪರಪ್ಪ, ಶಿಕ್ಷಕರಾದ ವಿ.ಗೋಪಾಲಕೃಷ್ಣ, ವೆಂಕಟೇಶ್ ಸೇರಿದಂತೆ ತಾಲ್ಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಹಾಜರಿದ್ದರು
.