ಪ್ರಾಧ್ಯಾಪಕ ಡಾ.ಶರತ್ ಅನಂತಮೂರ್ತಿರಿಂದ ವಿಶೇಷ ಉಪನ್ಯಾಸ ಕ್ವಾಂಟಂ ಭೌತಶಾಸ್ತ್ರ ಕಲಿಕೆಯಿಂದ ಹೆಚ್ಚಿನ ಉದ್ಯೋಗಾವಕಾಶ ಲಭ್ಯ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ಪ್ರಾಧ್ಯಾಪಕ ಡಾ.ಶರತ್ ಅನಂತಮೂರ್ತಿರಿಂದ ವಿಶೇಷ ಉಪನ್ಯಾಸ
ಕ್ವಾಂಟಂ ಭೌತಶಾಸ್ತ್ರ ಕಲಿಕೆಯಿಂದ ಹೆಚ್ಚಿನ ಉದ್ಯೋಗಾವಕಾಶ ಲಭ್ಯ

 

 

ಕೋಲಾರ:- ಕ್ವಾಂಟಂ ಭೌತಶಾಸ್ತ್ರ ವ್ಯಾಸಂಗದಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸಿಗಲಿದೆ ಎಂದು ಖ್ಯಾತ ಸಾಹಿತಿ ಯು.ಆರ್.ಆನಂತಮೂರ್ತಿ ಅವರ ಪುತ್ರ ಬೆಂಗಳೂರು ವಿವಿ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಶರತ್ ಅನಂತಮೂರ್ತಿ ತಿಳಿಸಿದರು.
ನಗರ ಹೊರವಲಯದ ಬೆಂಗಳೂರು ಉತ್ತರ ವಿವಿ ಭೌತಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಕ್ವಾಂಟಂ ಮೆಕಾನಿಕ್ಸ್‍ನ ಮೂಲಭೂತ ತತ್ವಗಳು ಹಾಗೂ, ಬ್ಲಾಕ್ ಬಾಡಿ ರೇಡಿಯೇಷನ್, ಫೋಟೋ ಎಲೆಕ್ಟ್ರಿಕ್ ಎಫೆಕ್ಟ್, ಡ್ಯೂಯಲ್ ನೇಚರ್ ಆಫ್ ಪಾರ್ಟಿಕಲ್ ಮತ್ತಿತರ ಅಂಶಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರಲ್ಲದೇ ಪ್ರಸ್ತುತ ಕ್ವಾಂಟಂ ಭೌತಶಾಸ್ತ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳ ಕುರಿತು ತಿಳಿಸಿಕೊಟ್ಟರು.
ವಿದ್ಯಾರ್ಥಿ ಸಮುದಾಯ ಕೇವಲ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣಕ್ಕೆ ಸೀಮಿತವಾಗದೇ ಉದ್ಯೋಗಾಧಾರಿತ ಮತ್ತು ದೇಶದ ವಿಜ್ಞಾನ ಕ್ಷೇತ್ರಕ್ಕೆ ಒತ್ತು ನೀಡುವ ಭೌತಶಾಸ್ತ್ರ ಅಧ್ಯಯನಕ್ಕೆ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಭೌತಶಾಸ್ತ್ರ ಎಂದರೆ ಕಷ್ಟವೆಂಬ ಮನೋಭಾವದಿಂದ ಹೊರಬರಬೇಕು, ನಿರಂತರ ಅಧ್ಯಯನದಿಂದ ಮತ್ತು ಆಸಕ್ತಿ ವಹಿಸಿದಲ್ಲಿ ಯಾವ ವಿಷಯವೂ ಕಷ್ಟವಾಗಲಾರದು ಎಂದರು.
ಭೌತಶಾಸ್ತ್ರದ ಸುಲಭ ಕಲಿಕೆಯ ವಿಧಾನ ಅರಿತುಕೊಳ್ಳಿ, ಕಲಿಕಾಸಕ್ತಿ ಹೆಚ್ಚಿಸಿಕೊಂಡರೆ ವಿಷಯ ಗ್ರಹಿಕೆ ಸುಲಭವಾಗುತ್ತದೆ ಎಂದರು.
ಗೆ ಬೆಂಗಳೂರು ಉತ್ತರ ವಿವಿ ಕುಲಸಚಿವ ಪ್ರೊ.ಕೆ.ಜನಾರ್ಧನಂ, ಕಲಿಕಾಸಕ್ತಿಯ ಮೂಲಕ ವಿಷಯಗ್ರಹಿಕೆ ಹೊಂದಿ ಉತ್ತಮ ಶೈಕ್ಷಣಿಕ ಸಾಧನೆಯೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ ಎಂದು ಭೌತಶಾಸ್ತ್ರ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಕರೆ ನೀಡಿದರು.
ಬೆಂಗಳೂರು ಉತ್ತರ ವಿವಿ ಇತರೆ ವಿವಿಗಳಿಗೆ ಮಾದರಿಯಾಗಲು ವಿದ್ಯಾರ್ಥಿಗಳು,ಪ್ರಾಧ್ಯಾಪಕರ ಪರಿಶ್ರಮ ಅಗತ್ಯವಿದೆ ಎಂದ ಅವರು, ವಿವಿಯಲ್ಲಿ ಮತ್ತಷ್ಟು ಕೋರ್ಸುಗಳನ್ನು ಆರಂಭಿಸುವ ಮೂಲಕ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದೆಡೆಗೆ ಸೆಳೆಯುವ ಕಾರ್ಯವಾಗುತ್ತಿದೆ ಎಂದರು.
ವಿವಿಯಲ್ಲಿ ಪಠ್ಯ ಕಲಿಕೆಯ ಜತೆಗೆ ಸಂಶೋಧನೆಗೂ ಆದ್ಯತೆ ನೀಡುವ ಅಗತ್ಯವಿದೆ, ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಮುಗಿಸಿದ ನಂತರ ನೀವು ಅಧ್ಯಾಪಕರಾಗುವುದರಿಂದ ನಿಮ್ಮಲ್ಲಿ ಹೆಚ್ಚಿನ ಜ್ಞಾನಾಭಿವೃದ್ದಿಗಾಗಿ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ, ಗ್ರಂಥಾಲಯ ಸದುಪಯೋಗಪಡಿಸಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರಾಧ್ಯಾಪಕ ಡಾ.ಶರತ್ ಅನಂತಮೂರ್ತಿ ಅವರನ್ನು ವಿವಿಯ ಭೌತಶಾಸ್ತ್ರ ವಿಭಾಗದಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ವಿಭಾಗದ ಸಂಯೋಜಕಿ ಸುಷ್ಮಾ, ಉಪನ್ಯಾಸಕರಾದ ಜಾಹ್ನವಿ, ಶಾಲಿನಿ, ಲೋಕೇಶ್,ಸುರೇಶ್‍ಬಾಬು,ಶ್ರೀನಿವಾಸ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.