JANANUDI.COM NETWORK
ಪ್ರಾಕೃತಿಕ ಸೌಂದರ್ಯದ ಆಕರ್ಷಕ ಪಂಚಗಂಗಾವಳಿ ಅಭಿವೃದ್ಧಿಗೆ ಆಗ್ರಹ
ದೇಶದಲ್ಲೇ ವಿಶೇಷ ವೈಶಿಷ್ಟ್ಯ ಹೊಂದಿರುವ ಕುಂದಾಪುರ ತಾಲ್ಲೂಕಿನ ಪ್ರಸಿದ್ಧ ನದಿಗಳಾದ ಪಂಚಗಂಗಾವಳಿ ನದಿ ತೀರಗಳ ಧಾರ್ಮಿಕ ಹಾಗೂ ಪ್ರಾಕೃತಿಕ ಸೌಂದರ್ಯದ ಪ್ರದೇಶಗಳನ್ನು ಪ್ರವಾಸೋದ್ಯಮಕ್ಕಾಗಿ ಅಭಿವೃದ್ಧಿಪಡಿಸುವ ಬಗ್ಗೆ ದಶಕಗಳಿಂದ ಬೇಡಿಕೆ ಸಲ್ಲಿಸಲಾಗುತ್ತಿದ್ದು ಈ ವರ್ಷ ಯೋಜನೆಗಳನ್ನು ಸಾಕಾರಗೊಳಿಸುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಪಂಚಗಂಗಾವಳಿ ಅಭಿವೃದ್ಧಿ ಸಮಿತಿ ವಿನಂತಿಸಿದೆ.
ಮಲೆನಾಡಿನಲ್ಲಿ ಹುಟ್ಟಿ ಕರಾವಳಿಯತ್ತ ವಿಶಿಷ್ಟ ನಡೆಯೊಂದಿಗೆ ಹರಿದು ಬರುವ ನದಿಗಳು, ಪುಣ್ಯನದಿಗಳೆಂದು ಕರೆಯಲ್ಪಟ್ಟಿದ್ದು ದೇಶವಿದೇಶಗಳ ಪ್ರವಾಸಿಗರು, ಚಲನ ಚಿತ್ರ ನಿರ್ಮಾಪಕರು, ನಿರ್ದೇಶಕರನ್ನು ಆಕರ್ಷಿಸುತ್ತಿವೆ. ಆದರೆ ಪ್ರವಾಸಿಗರಿಗೆ ಹೆಚ್ಚು ಅನುಕೂಲ ನೀಡುವ ಸೌಲಭ್ಯಗಳ ಅನುಷ್ಠಾನವಾಗದೇ ಸಮಸ್ಯೆ ಉಂಟಾಗಿದೆ.
ಪಂಚಗಂಗಾವಳಿ ತೀರಗಳ ಪ್ರಾಕೃತಿಕ ಸೌಂದರ್ಯ ಪ್ರದೇಶಗಳ ಅಭಿವೃದ್ಧಿಯಾದರೆ ಉಡುಪಿ ಜಿಲ್ಲೆಯ ಅಭಿವೃದ್ಧಿಯಲ್ಲೂ ಇದು ಬಹುಮುಖ್ಯ ಪಾತ್ರ ವಹಿಸುತ್ತದೆ. ಮುಖ್ಯವಾಗಿ ಪಂಚನದಿಗಳು ಒಂದುಗೂಡುವ ಕುಂದಾಪುರ ಕೇಂದ್ರ ಪ್ರದೇಶದಲ್ಲಿ ಒಂದು ತೂಗು ಸೇತುವೆ, ವೀಕ್ಷಣಾ ವೇದಿಕೆ, ಪಂಚಗಂಗಾ ವೀಕ್ಷಣಾ ಗೋಪುರ ನಿರ್ಮಾಣಗೊಂಡರೆ ದೊಡ್ಡ ಪ್ರವಾಸಿ ಕೇಂದ್ರವಾಗಿ ಈ ಪ್ರದೇಶ ಪರಿವರ್ತನೆಗೊಳ್ಳಲಿದೆ ಎಂದು ಅಭಿಪ್ರಾಯ ಪಟ್ಟಿರುವ ಪಂಚಗಂಗಾವಳಿ ಅಭಿವೃದ್ಧಿ ಸಮಿತಿ ಈ ವರ್ಷದ ಪ್ರವಾಸೋದ್ಯಮ ದಿನದಿಂದಲೇ ಯೋಜನೆ ಅನುಷ್ಠಾನದ ಬಗ್ಗೆ ಗಂಭೀರವಾಗಿ ಕ್ರಮಕೈಗೊಳ್ಳಬೇಕು ಎಂದು ಕೋರಿದೆ.
ಪಂಚಗಂಗಾವಳಿ ಸಮಿತಿಯ ಸಮಾಲೋಚನಾ ಸಭೆಯಲ್ಲಿ ಸಮಿತಿ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಹಾಗೂ ಸಂಚಾಲಕ ಯು.ಎಸ್.ಶೆಣೈ ಈ ಬಗ್ಗೆ ಸರಕಾರವನ್ನು ಒತ್ತಾಯಿಸಿದ್ದಾರೆ.