ಪೊಲೀಸ್ ಇಲಾಖೆಯಿಂದ ಸಂವಿಧಾನ ದಿನ ಪ್ರತಿಜ್ಞಾ ವಿಧಿ ಸ್ವೀಕಾರ – ಆಸ್ಪತ್ರೆ ಸಿಬ್ಬಂದಿಯ ಮೇಲೆ ಹಲ್ಲೆ, ಆರೋಪಿ ನ್ಯಾಯಾಂಗ ಬಂಧನ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ಪೊಲೀಸ್ ಇಲಾಖೆಯಿಂದ ಸಂವಿಧಾನ ದಿನ ಪ್ರತಿಜ್ಞಾ ವಿಧಿ ಸ್ವೀಕಾರ

ಆಸ್ಪತ್ರೆ ಸಿಬ್ಬಂದಿಯ ಮೇಲೆ ಹಲ್ಲೆ, ಆರೋಪಿ ನ್ಯಾಯಾಂಗ ಬಂಧನ

 

ಕೋಲಾರ ಚಿನ್ನದ ಗಣಿ ಪ್ರದೇಶದ ಚಾಂಫೀಯನ್‍ರೀಫ್ಸ್‍ನಲ್ಲಿನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಮಂಗಳವಾರದಂದು ಬೆಳಿಗ್ಗೆ ಭಾರತದ ಸಂವಿಧಾನ ದಿನಾಚರಣೆಯನ್ನು ಪ್ರತಿಜ್ಞಾವಿಧಿ ಸ್ವೀಕಾರದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರ ಅಧ್ಯಕ್ಷತೆಯಲ್ಲಿ ನಡೆದ ಭಾರತದ ಸಂವಿಧಾನ ದಿನಾಚರಣೆಯ ಪ್ರತಿಜ್ಞಾ ವಿಧಿಯ ಸ್ವೀಕಾರ ಕಾರ್ಯಕ್ರಮದಲ್ಲಿ, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ, ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು; ಸ್ಥಾನಮಾನ ಮತ್ತು ಅವಕಾಶಗಳ ಸಮತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ, ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ದೃಢಸಂಕಲ್ಪ ಮಾಡಿ, ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ರೀತಿಯಲ್ಲಿ 1949ನೆಯ ಇಸವಿಯ ನವೆಂಬರ್ 26ನೇ ದಿನದಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ ಅಲ್ಲದೇ ಜಾತಿ, ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಬೇದ ಭಾವವಿಲ್ಲದೇ ಭಾರತದ ಎಲ್ಲಾ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆಂದು ಸಹ ಪ್ರತಿಜ್ಞೆ ಮಾಡಲಾಯಿತು.
ಸಹಾಯಕ ಆಡಳಿತಾಧಿಕಾರಿ ಎಂ.ಮೂರ್ತಿ, ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ಜಿ.ಸಿ. ರಾಜು, ಸೂರ್ಯಪ್ರಕಾಶ್, ವೆಂಕಟೇಶಮೂರ್ತಿ, ನಿಸ್ತಂತು ಪಿಐ ಎನ್.ಉಮಾಶಂಕರ್ ಸೇರಿದಂತೆ ಜಿಲ್ಲೆಯ ಪಿಎಸ್‍ಐಗಳು, ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

 

 

 

ಆಸ್ಪತ್ರೆ ಸಿಬ್ಬಂದಿಯ ಮೇಲೆ ಹಲ್ಲೆ, ಆರೋಪಿ ನ್ಯಾಯಾಂಗ ಬಂಧನ

ರಾಬರ್ಟ್‍ಸನ್‍ಪೇಟೆ ಪೊಲೀಸ್ ಠಾಣಾ ಸರಹದ್ದಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಆರೋಪಿಯೊಬ್ಬನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನ. 25 ರಂದು ರಾತ್ರಿ ಮಹಿಳಾ ರೋಗಿಯೊಬ್ಬರ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ಹೋಗಲು, ಆಂಬುಲೆನ್ಸ್ ವಾಹನವನ್ನು ತಯಾರಾಗಿಟ್ಟುಕೊಳ್ಳುವಂತೆ ಕರ್ತವ್ಯ ನಿರತ ವೈದ್ಯರ ಸೂಚನೆಯಂತೆ, ಆಂಬುಲೆನ್ಸ್ ಚಾಲಕ ಮುನಿಸ್ವಾಮಿ ಮತ್ತು ವಾರ್ಡ್‍ಬಾಯ್ ಸಗಾಯನಾಥನ್ ಇವರು ಆಂಬುಲೆನ್ಸ್‍ನ್ನು ಆಸ್ಪತ್ರೆ ಮುಂದೆ ನಿಲ್ಲಿಸಿ, ಸ್ಟ್ರಚ್ಚರ್‍ನಲ್ಲಿ ಆಂಬುಲೆನ್ಸ್ ಬಳಿಗೆ ಮಹಿಳಾ ರೋಗಿಯನ್ನು ಕರೆತರುವಷ್ಟರಲ್ಲಿ ಮಹಿಳಾ ರೋಗಿಯ ಅಣ್ಣ ನವೀನ್‍ಕುಮಾರ್ ಎಂಬಾತನು ಅಲ್ಲಿಗೆ ಬಂದು ತನ್ನ ತಂಗಿಯನ್ನು ಏಕೆ ಶಿಫ್ಟ್ ಮಾಡುತ್ತೀರಾ, ಇಲ್ಲಿಯೇ ಚಿಕಿತ್ಸೆ ನೀಡಿಯೆಂದು ದೌರ್ಜನ್ಯದಿಂದ, ಆಂಬುಲೆನ್ಸ್ ಚಾಲಕ ಮುನಿಸ್ವಾಮಿ ಮತ್ತು ವಾರ್ಡ್‍ಬಾಯ್ ಸಗಾಯನಾಥನ್ ಇವರುಗಳ ಮೇಲೆ ಹಲ್ಲೆ ನಡೆಸಿರುತ್ತಾರೆ. ಇದರಿಂದಾಗಿ ಮುನಿಸ್ವಾಮಿ ರವರ ಬಲಗಣ್ಣಿನ ಮೇಲೆ ರಕ್ತಗಾಯವಾಗಿದ್ದು, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿದ ಸಂಬಂಧ ರಾಬರ್ಟ್‍ಸನ್‍ಪೇಟೆ ಪೊಲೀಸ್ ಠಾಣೆಯಲ್ಲಿ ನವೀನ್‍ಕುಮಾರ್ ವಿರುದ್ದ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿಯ ಪತ್ತೆಗಾಗಿ ಸಿಪಿಐ ಸೂರ್ಯಪ್ರಕಾಶ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಆರೋಪಿ ನವೀನ್‍ಕುಮಾರ್ ಅವರನ್ನು ಮಂಗಳವಾರ ಸಂಜೆ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.