ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಪುಟ್ಟ ಬಾಲಕಿಗೆ ಬ್ಲಡ್ ಕ್ಯಾನ್ಸರ್-ಆತಂಕದಲ್ಲಿ ಪೋಷಕರು: ಮಾನವೀಯ ನೆರವು ನೀಡಿದ ಬ್ಯಾಲಹಳ್ಳಿ ಗೋವಿಂದಗೌಡ
ಕೋಲಾರ:- ಆರು ವರ್ಷದ ಪುಟ್ಟ ಬಾಲಕಿಯೊಬ್ಬಳು ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ 50 ಸಾವಿರ ರೂ ಆರ್ಥಿಕ ನೆರವು ಕೊಟ್ಟು ಉಳಿದ ಚಿಕಿತ್ಸೆಗೂ ನೆರವಾಗುವುದಾಗಿ ತಿಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಾಲ್ಲೂಕಿನ ಬೆತ್ತನಿ ಗ್ರಾಮದ ಸುಮಂತ್ ಕುಮಾರ್,ಚೈತ್ರಾ ದಂಪತಿಗಳ ಈ ಮುದ್ದಾದ 6 ವರ್ಷದ ಬಾಲಕಿ ಕಾರುಣ್ಯ ಮಾರಕ ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ರೋಗ ಪ್ರಥಮ ಹಂತದಲ್ಲಿರುವುದರಿಂದ ಕೂಡಲೇ ಚಿಕಿತ್ಸೆ ನೀಡಿದಲ್ಲಿ ಗುಣವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆನ್ನಲಾಗಿದೆ.
ಖಾಸಗಿ ಶಾಲೆಯೊಂದರ ವಾಹನ ಚಾಲಕನಾಗಿರುವ ಸುಮಂತ್ ಕುಮಾರ್, ಈಗಾಗಲೇ ಸಾಲ ಮಾಡಿ 1.5 ಲಕ್ಷಕ್ಕೂ ಹೆಚ್ಚಿನ ಹಣವನ್ನು ಚಿಕಿತ್ಸೆಗೆ ಖರ್ಚು ಮಾಡಿದ್ದಾರೆ. ಉಳಿದಂತೆ ಸೆಂಟ್ಜಾನ್ಸ್ ಆಸ್ಪತ್ರೆಯ ವೈದ್ಯರ ಪ್ರಕಾರ ಚಿಕಿತ್ಸೆಗೆ 7.5 ಲಕ್ಷ ರೂಗಳ ಅಗತ್ಯವಿದ್ದು, ಈ ಹಣ ಕೋಢೀಕರಿಸಲಾಗದೇ ಆತಂಕದಲ್ಲೇ ಜೀವನ ದೂಡುತ್ತಿದ್ದಾರೆ.
ಗೋವಿಂದಗೌಡರಿಂದಮಾನವೀಯ ನೆರವು
ಮುದ್ದಾದ ಈ ಬಾಲಕಿಯ ಅನಾರೋಗ್ಯದ ಕುರಿತು ತಿಳಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರು ಪೋಷಕರನ್ನು ಕರೆಸಿಕೊಂಡು ವಿವರ ಪಡೆದು ತಕ್ಷಣವೇ 50 ಸಾವಿರ ನೆರವು ನೀಡಿ, ಉಳಿದ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಒದಗಿಸುವುದಾಗಿ ತಿಳಿಸಿ ನೀಡಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನಗೂ ಮೂವರು ಸಹೋದರಿಯರಿದ್ದಾರೆ ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ, ಈ ಮುದ್ದಾದ ಮಗುವನ್ನು ಕಂಡಾಗ ದೇವರು ಬಡವರಿಗೆ ಏಕೆ ಇಂತಹ ದೊಡ್ಡ ಕಾಯಿಲೆಗಳನ್ನು ನೀಡಿದ ಎಂದು ವಿಷಾದವಾಗುತ್ತದೆ ಎಂದರು.
ಶಾಲೆಗೆ ಹೋಗಿ ಎಲ್ಲರಂತೆ ಕಲಿಯಬೇಕಾದ ಮಗು ಇಂದು ನೋವಿನಿಂದ ಕಾಲ ನೂಕುತ್ತಿದೆ, ಆ ಮಗುವಿನ ಕಣ್ಣುಗಳಲ್ಲಿ ಭಯ ಕಾಣುತ್ತಿದೆ,ಜತೆಗೆ ಇಂತಹ ಮುದ್ದಾದ ಮಗುವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ತಂದೆ,ತಾಯಿಯ ದುಃಖಕ್ಕೆ ಪ್ರತಿಯೊಬ್ಬರು ಸ್ಪಂದಿಸಬೇಕಾದ ಅಗತ್ಯವೂ ಇದೆ ಎಂದರು.
ದುಃಖಿತರಾಗಿದ್ದ ತಂದೆತಾಯಿಗೆ ಧೈರ್ಯ ತುಂಬಿದ ಅವರು, ಚಿಂತೆ ಮಾಡದಿರಿ, ಇಂತಹ ಮುದ್ದಾದ ಮಗುವನ್ನು ದೇವರು ಉಳಿಸಿಕೊಡುತ್ತಾನೆ, ಚಿಕಿತ್ಸೆಗೆ ಹಣದ ಕುರಿತು ಚಿಂತೆ ಮಾಡದಿರಿ, ಚಿಕಿತ್ಸೆ ಆರಂಭವಾಗುತ್ತಿದ್ದಂತೆ ಅಗತ್ಯ ನೆರವು ಒದಗಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬ್ಯಾಲಹಳ್ಳಿ ಗೋವಿಂದಗೌಡರು ನೀಡಿದ ಆರ್ಥಿಕ ನೆರವು ಸ್ವೀಕರಿಸಿದ ಪೋಷಕರು, ಭಾವುಕರಾಗಿ ಧನ್ಯವಾದ ಸಲ್ಲಿಸಿದರು.