ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ,ಡಿ.10: ಪರಿಶಿಷ್ಟ ಜಾತಿ ಒಳ ಮೀಸಲಾತಿ ಅನುಷ್ಠಾನಕ್ಕೆ ನ್ಯಾ. ಎ. ಜೆ. ಸದಾಶಿವ ಆಯೋಗ ವರದಿಯನ್ನು ಜಾರಿ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಇಲ್ಲಿನ ಮೌರ್ಯ ಸರ್ಕಲ್ ಬಳಿ ಕಳೆದ ನಾಲ್ಕು ದಿನಗಳಿಂದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಬಿ. ಕೃಷ್ಣಪ್ಪ ಬಣ) ಅಹೋ ರಾತ್ರಿ ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಅವರು ಮಾತನಾಡಿದರು.
ಧರಣಿ ನಿರತರು ಇಟ್ಟಿರುವ ಬೇಡಿಕೆಗಳಲ್ಲಿ ಸದಾಶಿವ ಆಯೋಗ ವರದಿ ಪ್ರಕಾರ ಒಳ ಮೀಸಲಾತಿ ಅನುಷ್ಠಾನಕ್ಕೆ ತರುವುದು. ನ್ಯಾ. ಎಚ್.ಎನ್.ನಾಗಮೋಹನದಾಸ್ ಮತ್ತು ನ್ಯಾ. ಕಾಂತರಾಜ್ ಅವರ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿ ಜನರ ಜನ ಸಂಖ್ಯಾವಾರು ಮೀಸಲಾತಿ ಹೆಚ್ಚಳ ಮಾಡಿ ಜಾರಿಗೊಳಿಸುವುದು. ಚದುರಿ ಹೋಗಿರುವ ಕುರುಬ ಸಮುದಾಯವನ್ನು ಕ್ರೂಡೀಕರಿಸಿ ಪರಿಶಿಷ್ಟ ವರ್ಗಕ್ಕೆ ಸೇರಿಸುವ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.
ಇದೇ ವೇಳೆ ಪಿಟಿಸಿಎಲ್ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಒಬ್ಬ ಕೆ.ಎ.ಎಸ್. ಪ್ರಥಮ ದರ್ಜೆ ಅಧಿಕಾರಿಯನ್ನು ನೇಮಿಸಬೇಕು. ಬಡವರಿಗೆ ನೀಡಿರುವ ಇನಾಂತಿ ಜಮೀನುಗಳನ್ನು ಕಾಪಾಡುವ ವಿಚಾರ, ಎಸ್ಸಿ / ಎಸ್ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಹೆಚ್ಚಳ ಹಾಗೂ ಈ ಕುರಿತ ಸರ್ಕಾರದ ಇತ್ತೀಚಿನ ನಿರ್ಧಾರಗಳ ಸಂಬಂಧಿಸಿದಂತೆ, ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹ ಮಂತ್ರಿ ಗೋವಿಂದ ಕಾರಜೋಳ ಅವರ ಜೊತೆ ಮಾತನಾಡಿ, ಸಂಘಟನೆಯ ನಿಯೋಗವನ್ನು ಚರ್ಚೆಗೆ ಆಹ್ವಾನಿಸುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್, ಸಂಘಟನಾ ಸಂಚಾಲಕರಾದ ಎಸ್. ಮಲ್ಲಪ್ಪ ಹಾಸನ, ಮರೀಶ್ ನಾಗಣ್ಣನವರ್ ಧಾರವಾಡ, ಸೂಲಿಕುಂಟೆ ರಮೇಶ್ ಕೋಲಾರ, ಸತ್ಯಾ ಭದ್ರಾವತಿ, ಕೋಲಾರ ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ, ಮುನಿಚೌಡಪ್ಫ ಭಾಗವಹಿಸಿದ್ದರು.