ಪತ್ರಕರ್ತ ಸಮಾಜಕ್ಕೆ ಉಪಕಾರ ಆಗುವ ಕೆಲಸ ಮಾಡಬೇಕು : ಎ.ಎಸ್.ಎನ್.ಹೆಬ್ಬಾರ್

JANANUDI.COM NETWORK

ಪತ್ರಕರ್ತ ಸಮಾಜಕ್ಕೆ ಉಪಕಾರ ಆಗುವ ಕೆಲಸ ಮಾಡಬೇಕು : ಎ.ಎಸ್.ಎನ್.ಹೆಬ್ಬಾರ್

ಪತ್ರಕರ್ತರಾಗಿ ಸೇವೆಸಲ್ಲಿಸುವವರಿಗೆ ಸಾಮಾಜಿಕ ಜವಾಬ್ದಾರಿ ಇರುತ್ತದೆ. ಅವರ ವರದಿಗಳು ಧನಾತ್ಮಕವಾಗಿರಬೇಕು. ಆ ವರದಿಯಿಂದ ಜನರಿಗೆ ಉಪಯೋಗವಾದರೆ ಜೀವನದಲ್ಲಿ ಸಾರ್ಥಕತೆ ಸಿಗುತ್ತದೆ. ಎಷ್ಟೋ ಉತ್ತಮ ಪತ್ರಕರ್ತರಿಂದ ಸಮಾಜದಲ್ಲಿ ಕ್ರಾಂತಿಕಾರಿಕ ಬದಲಾವಣೆಗಳಾಗಿವೆ. ಅನ್ಯಾಯಕ್ಕೊಳಗಾದವರಿಗೆ ನ್ಯಾಯಸಿಕ್ಕಿದೆ. ಅಸಹಾಯಕರಿಗೆ ಸಹಾಯ ದೊರಕಿದೆ. ಇದರಿಂದ ಪತ್ರಕರ್ತರಿಗೆ ಸಿಗುವ ತೃಪ್ತಿ ಖುಷಿಯೇ ಬೇರೆ. ” ಎಂದು ಹಿರಿಯ ಪತ್ರಕರ್ತ ಎ.ಎಸ್.ಎನ್.ಹೆಬ್ಬಾರ್ ಹೇಳಿದರು.

ಕುಂದಾಪುರದ ಸರಕಾರಿ ಪ.ಪೂ.ಕಾಲೇಜಿನಲ್ಲಿ ಏರ್ಪಡಿಸಿದ “ಪತ್ರಿಕೋದ್ಯಮದ ಶಕ್ತಿ” ವಿಚಾರವಾಗಿ ಮಾತನಾಡುತ್ತಾ ಅವರು ತಮ್ಮ ಅನುಭವ ವಿವರಿಸಿದರು.

ಪತ್ರಕರ್ತರಾಗಿ ಎ.ಎಸ್.ಎನ್.ಹೆಬ್ಬಾರ್ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರಕಾರಿ ಪ.ಪೂ.ಕಾಲೇಜು – ಕುಂದಪ್ರಭ ಸಹಭಾಗಿತ್ವದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಪತ್ರಕರ್ತನಾಗಿ ಸಮಾಜಕ್ಕೆ ಉಪಕಾರ ಆಗುವ ವರದಿ ಪ್ರಕಟಿಸಿದ್ದರಿಂದ ಜನರಿಗೆ ದೊರಕಿದ ಸಹಾಯದ ಬಗ್ಗೆ ಹಲವು ಉದಾಹರಣೆಗಳನ್ನು ನೀಡಿದ ಅವರು “ಕಲ್ಮರ್ಗಿ ಕುಡುಬಿಯರ ಕೇರಿಗೆ ಬೆಂಕಿ ಬಿದ್ದು ಎಲ್ಲರೂ  ಅನಾಥರಾದಾಗ, ಪತ್ರಿಕೆಯಲ್ಲಿ ಪ್ರಕಟಿಸಿದ ವರದಿಯಿಂದ ಒಂದು ತಿಂಗಳೊಳಗೆ ಇಡೀ ಕೇರಿ ಪುನರ್‍ನಿರ್ಮಾಣಕ್ಕೆ ಸಹಾಯ ದೊರಕಿದುದನ್ನು ಹೇಳಿದರು. ದಾರಿ ತಪ್ಪಿ ಬೈಂದೂರು ಪೋಲೀಸ್ ಠಾಣೆಯಲ್ಲೇ ಉಳಿದ ಆಂಧ್ರದ ಬಾಲಕನಿಗೆ ಹೆತ್ತವರನ್ನು ಪತ್ತೆ ಹಚ್ಚಲು ಸುದ್ದಿ ಮೂಲಕ ನೆರವಾದ ವಿಷಯ ವಿವರಿಸಿದರು. ತನ್ನ ತಪ್ಪು ವರದಿಯಿಂದ ಸಮಾಜಕ್ಕೋ, ವ್ಯಕ್ತಿಗೋ ಅನ್ಯಾಯವಾದುದನ್ನು ಕಂಡು ನೊಂದು ಖಿನ್ನರಾದ ಪತ್ರಕರ್ತರೂ ಇದ್ದಾರೆ. ಸುದ್ದಿ ಮಾಡುವ ಧಾವಂತದಲ್ಲಿ ವಿಷಯದ ತಿಳುವಳಿಕೆ ಸರಿಯಾಗಿ ಇಲ್ಲದೇ ಹೋದರೆ ಕೆಟ್ಟ ಪರಿಣಾಮ ಉಂಟಾಗಬಹುದು ಸಮಾಜದಲ್ಲಿ ಗೌರವ ಪಡೆಯುವ ರೀತಿಯಲ್ಲಿ ಪತ್ರಕರ್ತ ಕೆಲಸಮಾಡಬೇಕು” ಎಂದು ಹೇಳಿದರು.

“ಐವತ್ತು ವರ್ಷಗಳ ಹಿಂದಿನ ಪತ್ರಿಕೋದ್ಯಮಕ್ಕೂ ಇಂದಿನ ಪತ್ರಿಕೋದ್ಯಮಕ್ಕೂ ವ್ಯತ್ಯಾಸವಿದೆ. ಹೊಸ ಹೊಸ ಆವಿಷ್ಕಾರಗಳು ಪತ್ರಕರ್ತರಿಗೆ ಕೆಲಸ ಸುಲಭವಾಗಿಸಿದೆ. ಉದ್ಯೋಗ ಮಾಡಲು ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ರಾಜಕೀಯ ಸುದ್ದಿಗಳನ್ನೇ ವೈಭವೀಕರಿಸುವ ಬದಲು ಇತರ ಪ್ರಾಮುಖ್ಯ ವಿಷಯಗಳತ್ತ ಪತ್ರಕರ್ತ ಗಮನ ಹರಿಸಿ ಓದುಗರನ್ನು ಸೆಳೆಯಬೇಕು” ಎಂದರು.

ಪತ್ರಿಕಾ ಕ್ಷೇತ್ರದಲ್ಲಿ ಸುವರ್ಣ ಸಂವತ್ಸರ ಆಚರಿಸಿದ ಎ.ಎಸ್.ಎನ್.ಹೆಬ್ಬಾರರನ್ನು ಸನ್ಮಾನಿಸಿ,ಗೌರವಿಸಲಾಯಿತು. ಕುಂದಪ್ರಭ ಅಧ್ಯಕ್ಷ ಯು.ಎಸ್.ಶೆಣೈ ಸ್ವಾಗತಿಸಿ, ಕುಂದಾಪುರದಲ್ಲಿ ಪತ್ರಿಕೋದ್ಯಮ ನಡೆದು ಬಂದ ದಾರಿ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಭುಜಂಗ ಶೆಟ್ಟಿ ಮಾತನಾಡಿ ” ಈ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿರುವ ಎ.ಎಸ್.ಎನ್.ಹೆಬ್ಬಾರ್ ನಮ್ಮ ಕಾಲೇಜಿಗೂ, ಕುಂದಾಪುರಕ್ಕೂ ಒಂದು ಹೆಮ್ಮೆ. 80ರ ಹರೆಯದಲ್ಲೂ ಯುವಕರಂತೆ ಚಟುವಟಿಕೆಯಲ್ಲಿರುವ ಇವರು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಅವರ ಪತ್ರಿಕೋದ್ಯಮದ ಅನುಭವ ಕಥನ ದಾಖಲೆ ಮಾಡಬೇಕು” ಎಂದರು.

ಉಪನ್ಯಾಸಕ ಉದಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಲೇಖಕ ಪಿ.ಜಯವಂತ ಪೈ ವಂದಿಸಿದರು.