ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ತಾಲ್ಲೂಕು ಸಿಪಿಎಂ ಕಾರ್ಯಕರ್ತರ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ
ಶ್ರೀನಿವಾಸಪುರ: ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ತಾಲ್ಲೂಕು ಸಿಪಿಎಂ ಕಾರ್ಯಕರ್ತರು ಮಂಗಳವಾರ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ, ದೇಶದಲ್ಲಿ ಕೊರೊನಾ ಹರಡುವುದನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ವಲಸೆ ಕಾರ್ಮಿಕರನ್ನು ನಡೆಸಿಕೊಂಡ ರೀತಿ ಅಮಾನವೀಯವಾಗಿದೆ. ಅವರು ತಮ್ಮ ಸ್ವಂತ ಸ್ಥಳಗಳ ಕಡೆಗೆ ಕಾಲ್ನಡಿಗೆಯಲ್ಲಿ ಸಾಗಿ ಸಾವು ನೋವು ಅನುಭವಿಸಬೆಕಾಯಿತು ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಾತಕೋಟ ನವೀನ್ ಕುಮಾರ್ ಮಾತನಾಡಿ, ಆದಾಯ ತೆರಿಗೆ ಪಾವತಿ ಮಾಡುವವರನ್ನು ಬಿಟ್ಟು ಉಳಿದ ಎಲ್ಲ ಕುಟುಂಬಗಳಿತೆ ತಿಂಗಳಿಗೆ ರೂ.750 ರಂತೆ ಆರು ತಿಂಗಳ ಕಾಲ ನಗದು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಕೆ.ಜೆ.ರಾಮಪ್ಪ, ಕೆ.ಜಿ.ವೆಂಕಟಶಾಮಿ, ಆಂಜಪ್ಪ, ಪದ್ಮ , ಅರುಣಮ್ಮ, ರೆಡ್ಡಮ್ಮ, ಶ್ರೀನಿವಾಸ್, ಶ್ರೀನಿವಾಸಪ್ಪ, ವೆಂಕಟರವಣ, ನಾಗರಾಜ್ ಇದ್ದರು.
ಪ್ರತಿಭಟನೆ: ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಸಿಪಿಯು ನೇತೃತ್ವದಲ್ಲಿ ಕೇಂದ್ರ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಪಾದಿಸಿ ರಸ್ತೆ ತಡೆ ನಡೆಸಲಾಯಿತು. ಯಲ್ದೂರು ಗ್ರಾಮದಲ್ಲಿ ಕೆಪಿಆರ್ಎಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.