ಜನತಾ ನ್ಯಾಯಾಲದಲ್ಲಿ ಪ್ರಕರಣಗಳು ಶೀಘ್ರವಾಗಿ ವಿಲೇವಾರಿಯಾಗುತ್ತಿದ್ದು ನ್ಯಾಯಾಲಯದಲ್ಲಿ ನೀಡುವ ತೀರ್ಪು ಅಂತಿಮವಾಗಿದ್ದು :ನ್ಯಾಯಾಧೀಶರಾದ ಕೆ.ಆರ್.ನಾಗರಾಜ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : ಜನತಾ ನ್ಯಾಯಾಲದಲ್ಲಿ ಪ್ರಕರಣಗಳು ಶೀಘ್ರವಾಗಿ ವಿಲೇವಾರಿಯಾಗುತ್ತಿದ್ದು ನ್ಯಾಯಾಲಯದಲ್ಲಿ ನೀಡುವ ತೀರ್ಪು ಅಂತಿಮವಾಗಿದ್ದು , ಯಾವುದೇ ನ್ಯಾಯಾಲಯದಲ್ಲಿ ತೀರ್ಪನ್ನು ಪ್ರಶ್ನಿಸುವ ಅವಕಾಶವಿಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಆರ್.ನಾಗರಾಜ್ ಅವರು ತಿಳಿಸಿದರು . ಇಂದು ಜಿಲ್ಲಾ ನ್ಯಾಯಾಲಯ ಸಂಕೀರ್ಣ ಆವರಣದಲ್ಲಿ ಹಮ್ಮಿಕೊಂಡಿದ್ದ ಜನತಾ ನ್ಯಾಯಾಲಯದ ಪೂರ್ವಭಾವಿ ಸಮ ಸಂಧಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಆಗಸ್ಟ್ 14 ರಂದು ಮೆಗಾ ಲೋಕ ಅದಾಲತ್‌ನ್ನು ಹಮ್ಮಿಕೊಂಡಿದ್ದು , ಆಗಸ್ಟ್ 13 ರವರೆಗೂ ಪ್ರತಿದಿನ ಪೂರ್ವಭಾವಿ ಸಮ ಸಂಧಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು . ಜನತಾ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಮತ್ತು ವಕೀಲರು ಸಂಧಾನಕಾರರಾಗಿರುತ್ತಾರೆ . ಕಕ್ಷಿದಾರರ ನಡುವೆ ಮಾತುಕತೆ ನಡೆಸಿ ಅವರ ಮನವೊಲಿಸಿ ಯಾವುದೇ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಸಂದರ್ಭವನ್ನು ಸೃಷ್ಟಿ ಮಾಡಲಾಗುತ್ತಿದೆ . 350 ಕ್ಕೂ ಹೆಚ್ಚಿನ ಪ್ರಕರಣಗಳನ್ನು ಪೂರ್ವಭಾವಿ ಸಮ ಸಂಧಾನದಲ್ಲಿ ತೀರ್ಮಾನ ಮಾಡಿ ಯಶಸ್ವಿ ಕಾಣಲಾಗಿದೆ . ಜಿಲ್ಲೆಯ ಕಕ್ಷಿದಾರರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು . ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನತೆ ಹಕ್ಕನ್ನು ಸಾಧರಪಡಿಸಿಕೊಳ್ಳಲು ವಿವಾದಗಳು ವೇಗವಾಗಿ ತೀರ್ಮಾನಗೊಂಡು ಅವರ ಹಕ್ಕನ್ನು ಬೇಗ ಪಡೆದುಕೊಂಡರೆ ಸರ್ವರಿಗೂ ಸಮಬಾಳು ಎಂಬ ಪ್ರಜಾಪ್ರಭುತ್ವದ ಬುನಾದಿಯ ಉದ್ದೇಶವನ್ನು ಈಡೇರಿಸಿದಂತೆ ಆಗುತ್ತದೆ ಎಂದು ಅವರು ಹೇಳಿದರು . ಜನತಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗಂಗಾಧರ ಚನ್ನಬಸಪ್ಪ ಹಡಪದ ಅವರು ಮಾತನಾಡಿ ಇದುವರೆಗೆ ಸುಮಾರು 8 ಸಾವಿರ ಪ್ರಕರಣಗಳನ್ನು ಗುರುತಿಸಿದ್ದು , 1700 ಪ್ರಕರಣಗಳು ಪೂರ್ವಭಾವಿ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದೆ . ಮುಖ್ಯವಾಗಿ ಚೆಕ್ ಅಮಾನ್ಯ ಪ್ರಕರಣಗಳು , ಕ್ರಿಮಿನಲ್ ಪ್ರಕರಣಗಳು , ವಿಭಾಗ ಪ್ರಕರಣಗಳು , ಮರಳು ಕಳ್ಳತನ ಪ್ರಕರಣಗಳು , ಸಿವಿಲ್ ಪ್ರಕರಣಗಳು ಹಾಗೂ ಮೋಟಾರ್ ಬೈಕ್ ಪ್ರಕರಣಗಳು ಇತ್ಯರ್ಥ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು . ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಜಿ.ಶ್ರೀಧರ್ ಅವರು ಮಾತನಾಡಿ ಪ್ರತಿಯೊಬ್ಬ ಕಕ್ಷಿದಾರರ ನಡುವಿನ ದ್ವೇಷವನ್ನು ಹೋಗಲಾಡಿಸಿ ಸಾಮರಸ್ಯದಿಂದ ಜೀವನ ನಡೆಸಲು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು . ಪ್ರಧಾನ ಸಂಧಾನಕಾರರಾಗಿ ಜೋಕ್ಟೋ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಪವನೇಶ್ , ಜಿಲ್ಲಾ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ , ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾದ ಅನಿತಾ , ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿಗಳಾದ ರಘುಪತಿಗೌಡ ಹಾಗೂ ವಕೀಲರು ಸೇರಿ ಪೂರ್ವ ಜನತಾ ನ್ಯಾಯಾಲಯದ ಸಂಧಾನವನ್ನು ನಡೆಸುತ್ತಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಆರ್.ನಾಗರಾಜ್ ಅವರು ತಿಳಿಸಿದರು .