ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಆಸ್ಪತ್ರೆ ಆವರಣದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದರು.
ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ ಬಳಿಕ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿ, ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ತಜ್ಞ ವೈದ್ಯರ ಹಾಗೂ ದಾದಿಯರ ಕೊರತೆ ಇದೆ. ಕೆಲವು ವೈದ್ಯಕೀಯ ಉಪಕರಣಗಳ ಅಗತ್ಯವಿದೆ. ಈ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಪುರಸಭೆ ವತಿಯಿಂದ ಆಸ್ಪತ್ರೆ ಮುಂದಿನ ರಸ್ತೆ ನಿರ್ಮಿಸಲಾಗುವುದು ಎಂದು ಹೇಳಿದರು.
ಕೊರತೆಗಳ ನಡುವೆಯೂ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ಆಸ್ಪತ್ರೆ ಆವರಣವನ್ನು ಸ್ವಚ್ಛವಾಗಿಡಲಾಗಿದೆ. ಆವರಣದಲ್ಲಿ ಗಿಡ, ಮರ ಬೆಳೆಸುವುದರ ಮೂಲಕ ಉತ್ತಮ ಪರಿಸರ ನಿರ್ಮಿಸಲಾಗಿದೆ. ಇಲ್ಲಿ ವಿಶೇಷವಾಗಿ ಆಯರ್ವೇದ ವೈದ್ಯ ಪದ್ಧತಿಯಲ್ಲಿ ಬಳಸುವ ಅಪರೂಪದ ಔಷಧೀಯ ಸಸ್ಯಗಳನ್ನು ಬೆಳೆಯಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿ ಕಟ್ಟಡಕ್ಕೆ ಸ್ಥಳ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಒಳರೋಗಿಗಳ ವಿಭಾಗಕ್ಕೆ ತೆರಳಿ ಕುಂದು ಕೊರತೆ ವಿಚಾರಿಸಿದರು. ತೀವ್ರ ನಿಗಾ ಘಟಕ, ಡಯಲಿಸೀಸ್ ಘಟಕ ಹಾಗೂ ಅದೇ ಆಸ್ಪತ್ರೆ ಆವರಣದಲ್ಲಿರುವ ಆಯುರ್ವೇದ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿದರು.
ತಹಶೀಲ್ದಾರ್ ಬಿ.ಎಸ್.ರಾಜೀವ್, ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಮೋಹನ್ ಕುಮಾರ್, ಆರೋಗ್ಯ ನಿರೀಕ್ಷಕ ರಮೇಶ್, ಎಂಜಿನಿಯರ್ ಶ್ರೀನಿವಾಸ್ ಇದ್ದರು.