ನಿವಾಸಪುರದಲ್ಲಿ ಏರ್ಪಡಿಸಿದ್ದ ಮೌಲ್ಯ ಶಿಕ್ಷಣ ಕಾರ್ಯಾಗಾರವನ್ನು ವಿಜಯಪುರದ ಬಸವ ಕಲ್ಯಾಣ ಮಠದ ಮಹದೇವಸ್ವಾಮೀಜಿ ಉದ್ಘಾಟಿಸಿದರು.  

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ನಿವಾಸಪುರದಲ್ಲಿ ಏರ್ಪಡಿಸಿದ್ದ ಮೌಲ್ಯ ಶಿಕ್ಷಣ ಕಾರ್ಯಾಗಾರವನ್ನು ವಿಜಯಪುರದ ಬಸವ ಕಲ್ಯಾಣ ಮಠದ ಮಹದೇವಸ್ವಾಮೀಜಿ ಉದ್ಘಾಟಿಸಿದರು.
ಶ್ರೀನಿವಾಸಪುರ: ಶಿಕ್ಷಕರು ಮಕ್ಕಳಲ್ಲಿ ಅವರಲ್ಲಿ ಸೆವಾ ಮನೋಭಾವ ಮೂಡಿಸಬೇಕು ಎಂದು ವಿಜಯಪುರದ ಬಸವ ಕಲ್ಯಾಣ ಮಠದ ಮಹದೇವಸ್ವಾಮೀಜಿ ಹೇಳಿದರು.
  ಪಟ್ಟಣದ ಕನಕ ಸಮುದಾಯ ಭವನದ ಸಭಾಂಗಣದಲ್ಲಿ ತಾಲ್ಲೂಕು ವಿಶ್ವ ಹಿಂದೂ ಪರಿಷತ್‌ ಟ್ರಸ್ಟ್‌ ವತಿಯಿಂದ ಶನಿವಾರ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಮೌಲ್ಯ ಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಗುರುವಿಗೆ ಅಪಾರವಾದ ಗೌರವ ಇದೆ. ಅದನ್ನು ಉಳಿಸುವ ಹೊಣೆಗಾರಿಕೆ ಇಂದಿನ ಶಿಕ್ಷಕ ಸಮುದಾಯದ ಮೇಲಿದೆ. ಶಿಕ್ಷಕರು ತಮ್ಮ ಜವಾಬ್ದಾರಿ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸಬೇಕು ಎಂದು ಹೇಳಿದರು.
  ದಿವಂಗತ ರಾಷ್ಟ್ರಪತಿ ಎಸ್‌.ರಾಧಾಕೃಷ್ಣನ್‌ ಒಬ್ಬ ಶ್ರೇಷ್ಠ ಶಿಕ್ಷಕರಾಗಿದ್ದರು. ಅವರ ಆದರ್ಶ ಪಾಲನೆ ಮಾಡಬೇಕು. ಮಕ್ಕಳ ಭವಿಷ್ಯ ಶಿಕ್ಷಕರ ಹೃದಯದಲ್ಲಿ ಅರಳಬೇಕು. ಪ್ರತಿ ಮಗುವೂ ದೇಶದ ಅಮೂಲ್ಯ ಆಸ್ತಿಯಾಗಬೇಕು. ದೇಶ ಕಟ್ಟುವ ಕನಸು ನನಸಾಗಲು ಶಿಕ್ಷಕರ ಶ್ರಮ ಹಾಗೂ ಸತ್ವ ಬೇಕಾಗುತ್ತದೆ. ಇದನ್ನು ಮನಗಂಡು ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.
  ಶಿಕ್ಷಣ ಪರಿಚಾರಕ ಯು.ಭೀಮರಾವ್‌ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಮೌಲ್ಯ ಶಿಕ್ಷಣದ ಜೊತೆಗೆ ಮಾಹಿತಿ ಶಿಕ್ಷಣ ನೀಡಬೇಕು. ರಾಮಾಯಣ, ಮಹಾ ಭಾರತದ ಮಹಾ ಪಾತ್ರಗಳ ಆದರ್ಶವನ್ನು ಮಕ್ಕಳಲ್ಲಿ ತುಂಬಬೇಕು. ಗುರು, ತಂದೆ, ತಾಯಿ, ನೆರೆ ಹೊರೆ, ದೇಶ ಹೀಗೆ ಹಂತ ಹಂತವಾಗಿ ಇಡೀ ವಿಶ್ವವನ್ನು ಅಪ್ಪಿಕೊಳ್ಳುವ ಮನೋಭಾವ ಉಂಟಾಗುವಂತೆ ಮಾಡಬೇಕು ಎಂದು ಹೇಳಿದರು.
  ಶಿಕ್ಷಣ ತಜ್ಞ ಎಂ.ಆರ್.ನಾಗರಾಜ್‌ ಮಾತನಾಡಿ, ಮಕ್ಕಳಲ್ಲಿ ಜೀವನ ಮೌಲ್ಯಗಳನ್ನು ಬಿತ್ತುವ ಶಿಕ್ಷಕ ಮಾತ್ರ ಮಕ್ಕಳ ಹೃದಯಲ್ಲಿ ನೆಲೆಸಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಸಾಮಾಜಿಕ ಮೌಲ್ಯಗಳು ಮನೆ ಮತ್ತು ಶಾಲೆಯಿಂದ ಮನಸ್ಸಿನ ಆಳಕ್ಕೆ ಇಳಿಯಬೇಕು ಎಂದು ಹೇಳಿದರು. 
  ತಾಲ್ಲೂಕು ವಿಶ್ವ ಹಿಂದೂ ಪರಿಷತ್ ಟ್ರಸ್ಟ್‌ ಅಧ್ಯಕ್ಷ ಎಸ್.ಮೋಹನ್‌ ಕುಮಾರ್, ಕಾರ್ಯದರ್ಶಿ ಎಂ.ವೇಮಣ್ಣ, ಬಿಆರ್‌ಸಿ ವಸಂತ, ನಂದೀಶ್‌, ರಾಮಚಂದ್ರಪ್ಪ ಇದ್ದರು.