ವರದಿ: ಶಬ್ಬೀರ್ ಅಹ್ಮದ್
ನಾಪತ್ತೆಯಾಗಿರುವ ಕೋಲಾರ ಜಿಲ್ಲಾ ಉಸ್ತುವಾರಿ ಮಂತ್ರಿ ಸಿ.ಬಿ.ಕೃಷ್ಣಬೈರೇಗೌಡನ್ನು ಹುಡುಕಿಕೊಡಲು ದೂರು
ಕೋಲಾರ : ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಬಿ.ಕೃಷ್ಣಬೈರೇಗೌಡರು ಮೂರು ತಿಂಗಳಿನಿಂದ ಕಾಣೆಯಾಗಿದ್ದು, ಅವರನ್ನು ಹುಡುಕಿ ಕೊಡಬೇಕೆಂದು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರೈತ ನಾಯಕ ಪ್ರೋ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ದೂರು ನೀಡಲಾಯಿತು.
ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಮಾತನಾಡಿ ಕೋಲಾರ ಜಿಲ್ಲೆಯು ಸತತವಾಗಿ ಬರಗಾಲದಿಂದ ಕೂಡಿದ್ದು, ಕೋಲಾರ ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಬಂದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣ ಬೆಳೆ ನಷ್ಠ ಉಂಟಾಗಿದ್ದು, ರೈತರು ಕಂಗಾಲಾಗಿದ್ದಾರೆ. ಹಾಗೂ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉದ್ಬವವಾಗಿದ್ದು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಉದ್ಬವವಾಗಿದ್ದು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲೆಯಾದ್ಯಂತ ನೀರಿನ ಸಮಸ್ಯೆಯಾಗಲೀ, ಜಾನುವಾರುಗಳಿಗೆ ನೀರು ಮತ್ತು ಮೇವಿನ ಸಮಸ್ಯೆಯಾಗಲಿ ಉಂಟಾಗಿಲ್ಲವೆಂದು ಹೇಳಿಕೆ ನೀಡುತ್ತಿರುವುದು ನಾಚಿಕೆಯ ವಿಷಯವಾಗಿದೆ.
ವಾಸ್ತವವಾಗಿ ಹಳ್ಳಿಗಳಿಗೆ ಹೋಗಿ ನೋಡಿದರೆ ಜನ, ಜಾನುವಾರುರುಗಳಿಗೆ ಸಮಸ್ಯೆ ಜಿಲ್ಲೆಯಾದ್ಯಂತ ತಾಂಡವವಾಡುತ್ತಿದ್ದು, ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಾನ್ಯಶ್ರೀ ಸಿ.ಬಿ.ಕೃಷ್ಣಬೈರೇಗೌಡರು ಲೋಕಸಭಾ ಚುನಾವಣೆಯಲ್ಲಿ ತಲ್ಲೀನರಾಗಿದ್ದು, ಅವರಿಗೆ ರಾಜಕೀಯ ಭವಿಷ್ಯ ನೀಡಿದ ಕೋಲಾರ ಜಿಲ್ಲೆಯನ್ನು ಮರೆತು ಬರೀ ರಾಜಕಾರಣಕ್ಕಾಗಿ ಸೀಮಿತವಾಗಿದ್ದಾರೆಯೇ ಅಥವಾ ಯಾರಾದರೂ ಅಪಹರಿಸಿದ್ದಾರೆಯೇ ಎಂದು ಜಿಲ್ಲೆಯ ಜನರಲ್ಲಿ ಗುಸುಗುಸು ಶುರುವಾಗಿದೆ ಎಂದು ದೂರಿದ್ದಾರೆ
ಸಚಿವರು ಮೂರು ತಿಂಗಳಿನಿಂದ ಜಿಲ್ಲೆಗೆ ಬೇಟಿ ನೀಡದೆ, ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಗಮನ ಹರಿಸದೆ, ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳ ಮಾಸಿಕ ಸಭೆಯಾದ ಕೆ.ಡಿ.ಪಿ. ಸಭೆಯನ್ನು ನಡೆಸದೆ ಇರುವುದರಿಂದ ಮಾನ್ಯ ಸಚಿವರು ಕಾಣೆಯಾಗಿರಬಹುದೆಂದು ಅವರನ್ನು ಹುಡುಕಿಕೊಡಲು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರೈತ ನಾಯಕ ಪ್ರೋ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ದೂರಿನಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ನಂದಕುಮಾರ್, ಮುಳಬಾಗಿಲು ತಾಲ್ಲೂಕು ಅದ್ಯಕ್ಷ ಎಲ್.ಎನ್.ಬಾಬು, ಶ್ರೀನಾಥ್, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ದೊಡ್ಡಕುರುಬರಹಳ್ಳಿ ಶಂಕರಪ್ಪ, ಜಿಲ್ಲಾ ಮುಖಂಡರಾದ ಕೊಲದೇವಿ ಗೋಪಲಕೃಷ್ಣಮೂರ್ತಿ, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಕದಿರೇನಹಳ್ಳಿ ಶ್ರೀನಿವಾಸ್, ಕೋಲಾರ ತಾಲ್ಲೂಕು ಅಧ್ಯಕ್ಷ ಶಿಳ್ಳಂಗೆರೆ ವೇಣುಗೋಪಾಲ್, ಕೊಲದೇವಿ ಗಂಗಾಧರ್, ತೇರಹಳ್ಳಿ ಚಂದ್ರಪ್ಪ, ಕೋಲಾರ ನಗರ ಸಂಚಾಲಕ ಜಬೀವುಲ್ಲಾ, ಕಾರ್ಮಿಕ ಘಟಕದ ಫಿರ್ದೋಸ್, ಅಬೀದ್ ಖಾನ್, ಹುಸೇನ್ ನಿಜಾಂ ಪಾಷ, ರಾಮಚಂದ್ರ ಮುಂತಾದವರು ಭಾಗವಹಿಸಿದ್ದರು.