ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ನರೇಗಾದಲ್ಲಿ ರೇಷ್ಮೆ ಇಲಾಖೆ ಸಾಧನೆ-ಅ.21ರಂದು ಜಿಪಂ ಸಿಇಒಗೆ ದೆಹಲಿಗೆ ಆಹ್ವಾನ
ರೇಷ್ಮೆ ಹುಳು,ತೋಟಗಳು,ನೂಲುಬಿಚ್ಚುವ ಕೈಗಾರಿಕೆಗಳ ವೀಕ್ಷಿಸಿದ ಸಿಇಒ ದರ್ಶನ್
ಕೋಲಾರ:- ಜಿಲ್ಲೆಯ ರೇಷ್ಮೆ ಇಲಾಖೆ ಮಹಾತ್ಮಾಗಾಂಧಿ ಉದ್ಯೋಗಖಾತ್ರಿ ಯೋಜನೆಯಲ್ಲಿ ರಾಜ್ಯಕ್ಕೆ ನಂ1 ಆಗಿದ್ದು, ಕೇಂದ್ರ ಸರ್ಕಾರ ಅ.21 ರಂದು ದೆಹಲಿಯಲ್ಲಿ ಈ ಸಾಧನೆಯ ವಿವರ ಮಂಡಿಸಲು ಆಹ್ವಾನ ನೀಡಿರುವ ಹಿನ್ನಲೆಯಲ್ಲಿ ಜಿಪಂ ಸಿಇಒ ಹೆಚ್.ವಿ.ದರ್ಶನ್ ತಾಲ್ಲೂಕಿನ ವಿವಿಧೆಡೆ ರೇಷ್ಮೆ ಕೃಷಿ ಚಟುವಟಿಕೆಗಳ ವೀಕ್ಷಣೆ ನಡೆಸಿದರು.
ನರೇಗಾದಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿರುವುದರ ಜತೆಗೆ ರೇಷ್ಮೆ ಕೃಷಿಯಲ್ಲಿ ನರೇಗಾ ಅನುಷ್ಟಾನದಲ್ಲಿ ರಾಜ್ಯಕ್ಕೆ ಪ್ರಥಮವಾಗಿದೆ, ಈ ಹಿನ್ನಲೆಯಲ್ಲಿ ದೆಹಲಿಯಲ್ಲಿ ಈ ಸಾಧನೆಯ ವಿಷಯ ಮಂಡಿಸಲು ಕೇಂದ್ರ ಸರ್ಕಾರ ಜಿಪಂ ಸಿಇಒ ಹಾಗೂ ರೇಷ್ಮೆ ಇಲಾಖೆ ಉಪನಿರ್ದೇಶಕ ಪ್ರಭಾಕರ್ ಅವರಿಗೆ ಆಹ್ವಾನ ನೀಡಿದೆ.
ಜಿಪಂ ಸಿಇಒ ಅವರು ಜಿಲ್ಲೆಗೆ ಹೊಸದಾಗಿ ಆಗಮಿಸಿರುವ ಹಿನ್ನಲೆಯಲ್ಲಿ ರೇಷ್ಮೆ ಕೃಷಿಯ ವಿವಿಧ ಚಟುವಟಿಕೆಗಳ ಬಗ್ಗೆ ಅರಿಯುವ ಪ್ರಯತ್ನವಾಗಿ ಇಂದು ವಿವಿಧ ಗ್ರಾಮಗಳು,ಹಿಪ್ಪುನೇರಳೆ ತೋಟಗಳಿಗೆ, ರೈತರ ಮನೆಗಳಿಗೆ ಭೇಟಿ ನೀಡಿದರು.
ಮೊದಲಿಗೆ ಕೋಲಾರದ ರೇಷ್ಮೆ ಬಿತ್ತನೆ ಕೋಠಿಗೆ ಭೇಟಿ ನೀಡಿದ ಸಿಇಒ ಅವರು ಅಲ್ಲಿನ ಕಾರ್ಯಚಟುವಟಿಕೆಗಳ ವೀಕ್ಷಣೆ ನಡೆಸಿದರು, ಪ್ರತಿ ತಿಂಗಳು ಬಿತ್ತನೆಯಾಗುವ ರೇಷ್ಮೆ ಮೊಟ್ಟೆ, ರೈತರ ಬೇಡಿಕೆ ಮತ್ತಿರರ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು.
ಪ್ರಗತಿಪರ ರೈತ
ಈಶ್ವರ್ ಮನೆಗೆ ಭೇಟಿ
ಸಿಇಒ ದರ್ಶನ್ ತಾಲ್ಲೂಕಿನ ಉಪ್ಪುಕುಂಟೆಯ ಸಮೀಪ ನಾಲ್ಕೈದು ಹಿಪ್ಪುನೇರಳೆ ತೋಟಗಳಿಗೆ ಭೇಟಿ ನೀಡಿ ಅಲ್ಲಿನ ಕೃಷಿ ಚಟುವಟಿಕೆಗಳು, ನರೇಗಾದಡಿ ಕೈಗೊಂಡಿರುವ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದರು.
ನಂತರ ತಾಲ್ಲೂಕಿನ ಪ್ರಗತಿಪರ ದೊಡ್ಡರೈತ ಅಂಕತಟ್ಟಿಯ ಈಶ್ವರ್ ಅವರ 20 ಎಕರೆ ಹಿಪ್ಪುನೇರಳೆ ತೋಟಕ್ಕೆ ಭೇಟಿ ನೀಡಿ, ವಿವಿಧ ಮಾದರಿಯ ಹಿಪ್ಪುನೇರಳೆ ಬೆಳೆ ಬೆಳೆದಿರುವುದನ್ನು ಕಂಡು ರೈತರಿಂದ ನೀರಿನ ಮಿತಬಳಕೆ, ಮರಗಳ ವಿಧಾನದಲ್ಲಿ ಕೃಷಿ ಮತ್ತಿತರ ಅಂಶಗಳ ಕುರಿತು ಮಾಹಿತಿ ಸಂಗ್ರಹಿಸಿದರು.
ವಿಜ್ಞಾನಿಗಳ ತಾಂತ್ರಿಕತೆಯನ್ನೂ ಮೀರಿಸಿ ತಾಲ್ಲೂಕಿನ ರೈತರು ಬರದಲ್ಲೂ ನೀರಿನ ಮಿತಬಳಕೆಯೊಂದಿಗೆ ರೇಷ್ಮೆ ಕೃಷಿಯಲ್ಲಿ ಮಾಡಿರುವ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಜಿಲ್ಲೆಯ ಜೀವನಾಡಿಯಾಗಿರುವ ಈ ಉದ್ಯಮದ ಅಭಿವೃದ್ದಿಗೆ ಮತ್ತಷ್ಟು ಕೆಲಸ ಆಗಬೇಕಾಗಿದೆ ಎಂದರು.
ನಾಗನಾಳ ಶ್ರೀನಿವಾಸ್
ನಿವಾಸಕ್ಕೆ ಸಿಇಒ
ರಾಜ್ಯಪ್ರಶಸ್ತಿ ಹಾಗೂ ಆತ್ಮಯೋಜನೆ ಪ್ರಶಸ್ತಿ ವಿಜೇತ ರೇಷ್ಮೆ ಕೃಷಿಕ ನಾಗನಾಳ ಶ್ರೀನಿವಾಸ್ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಜಿಪಂ ಸಿಇಒ ದರ್ಶನ್, ಅವರು ದ್ವಿತಳಿ ರೇಷ್ಮೆ ಹುಳು ಸಾಕಾಣೆಯ ತಾಂತ್ರಿಕತೆಯ ಕುರಿತು ಮಾಹಿತಿ ಪಡೆದುಕೊಂಡರು.
ರೈತ ಶ್ರೀನಿವಾಸ್ ದ್ವಿಸಂತತಿ ರೇಷ್ಮೆ ಹುಳು ಸಾಕಾಣಿಯಲ್ಲಿ ಮಾಡಿರುವ ಸಾಧನೆ ಕಂಡು ಅವರನ್ನು ಪ್ರಶಂಶಿಸಿದ ಸಿಇಒ ಅವರ ಸಾಧನೆಗಾಗಿ ಕೈಗೊಂಡಿರುವ ವಿವಿಧ ವಿಧಾನಗಳ ಕುರಿತು ಮಾಹಿತಿ ಪಡೆದುಕೊಂಡರು.
ಚೀನಾ ರೇಷ್ಮೆ ಆಮದು ನಿಲ್ಲಲು ದೇಶಿ ರೈತರು ಗುಣಮಟ್ಟದ ರೇಷ್ಮೆ ಉತ್ಪಾದಿಸುವ ಅಗತ್ಯ ಇರುವುದರಿಂದ ಬೈವೋಲ್ಟೈನ್ ರೇಷ್ಮೆ ಹುಳು ಸಾಕಾಣಿಕೆಗೆ ಒತ್ತು ನೀಡಲಾಗುತ್ತಿದೆ, ಈ ದ್ವಿಸಂತತಿ ರೇಷ್ಮೆಕೃಷಿಗೆ ಅನೇಕ ರೈತರು ಇನ್ನು ಧೈರ್ಯ ಮಾಡುತ್ತಿಲ್ಲ ಆದರೆ ನಾಗನಾಶ ಶ್ರೀನಿವಾಸ್ ದ್ವಿತಳಿ ರೇಷ್ಮೆಕೃಷಿಯಲ್ಲೇ ಸಾಧನೆ ಮಾಡಿ ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಂಡಿರುವ ಕುರಿತು ಇಲಾಖೆಯ ಉಪನಿರ್ದೇಶಕ ಪ್ರಭಾಕರ್ ಸಿಇಒ ಅವರಿಗೆ ಮಾಹಿತಿ ಒದಗಿಸಿದರು.
ಇದಾದ ನಂತರ ನಗರ ಹೊರವಲಯದ ಪವರ್ ಗ್ರಿಡ್ ಸಮೀಪ 3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸ್ವಯಂಚಾಲಿತ ನೂಲು ಬಿಚ್ಚಾಣಿಕಾ ಕೈಗಾರಿಕೆ ವೀಕ್ಷಿಸಿದರು.
ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ದ್ವಿಸಂತತಿ ಹುಳು ಸಾಕಾಣಿಕೆಯ ಜತೆಗೆ ಗುಣಮಟ್ಟದ ರೇಷ್ಮೆ ಉತ್ಫಾದನೆಗೆ ಸ್ವಯಂಚಾಲಿನ ನೂಲು ಬಿಚ್ಚಾಣಿಕೆ ಕೈಗಾರಿಕೆ ಅಗತ್ಯವಾಗಿದೆ ಎಂದು ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆ ಉಪನಿರ್ದೇಶಕ ಎಂ.ಕೆ.ಪ್ರಭಾಕರ್, ಸಹಾಯಕ ನಿರ್ದೇಶಕ ಮಂಜುನಾಥ್, ಜಿಲ್ಲಾ ರೇಷ್ಮೆ ಬೆಳೆಗಾರರ ಸಂಘದ ಕಾರ್ಯದರ್ಶಿ ಬಿ.ಎಂ.ಶಂಕರೇಗೌಡ, ಖಜಾಂಚಿ ಮಾದಮಂಗಲ ರಮೇಶ್ ಮತ್ತಿತತರು ಉಪಸ್ಥಿತರಿದ್ದರು.