ನರಸಾಪುರ ಕೈಗಾರಿಕಾ ಪ್ರದೇಶದ ವಿಸ್ಟ್ರಾನ್ ಕಂಪನಿಯಲ್ಲಿ ಆಗಿರುವ ಅನಾಹುತಕ್ಕೆ ಆಡಳಿತ ಮಂಡಳಿ ಹಾಗೂ ಗುತ್ತಿಗೆದಾರರ ವೈಫಲ್ಯವೇ ಕಾರಣ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ವಿಸ್ಟ್ರಾನ್ ಕಂಪನಿಯಲ್ಲಿ ಆಗಿರುವ ಅನಾಹುತಕ್ಕೆ ಆಡಳಿತ ಮಂಡಳಿ ಹಾಗೂ ಗುತ್ತಿಗೆದಾರರ ವೈಫಲ್ಯವೇ ಕಾರಣವಾಗಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಹುರಾಷ್ಟ್ರೀಯ ಕಂಪನಿಗಳಿಗೆ ಸ್ವಾಗತ ಕೋರಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ಸರ್ಕಾರ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು, ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಕೆಲಸ ಸಿಗುತ್ತಿದೆಯೇ, ಕಾರ್ಮಿಕರಿಗೆ ಕಾಲಕಾಲಕ್ಕೆ ಸಂಬಂಳ, ಸಾರಿಗೆ ವ್ಯವಸ್ಥೆ ಇತ್ಯಾದಿ ಸೌಲಭ್ಯಗಳು ಇವೆಯೇ ಎಂಬಿತ್ಯಾದಿ ವಿಚಾರಗಳ ಕುರಿತಂತೆ ಕಾಲಕಾಲಕ್ಕೆ ಗಮನಹರಿಸಿದ್ದರೆ ಈ ರೀತಿಯ ಘಟನೆಗಳು ಆಗುತ್ತಿರಲಿಲ್ಲವೆಂದು ಅವರು ತಿಳಿಸಿದ್ದಾರೆ.
ಕೋಲಾರ ಜಿಲ್ಲೆಗೆ ಮತ್ತಷ್ಟು ಬಹುರಾಷ್ಟ್ರೀಯ ಕಂಪನಿಗಳು ಬರಬೇಕಾಗಿದ್ದು, ಕೋಟ್ಯಾಂತರ ರೂಪಾಯಿಗಳ ಬಂಡವಾಳ ಹೂಡಿಕೆಯಾಗಬೇಕಾಗಿದೆ. ಆದರೆ, ಇದರ ಜೊತೆ ಜೊತೆಗೆ ಕೈಗಾರಿಕೆಗಳಿಗೆ ಭೂಮಿ ನೀಡಿದವರು, ಸ್ಥಳೀಯ ನಿರುದ್ಯೋಗಿಗಳ ಹಿತವನ್ನು ಸರ್ಕಾರ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಕಾಪಾಡಬೇಕಾಗುತ್ತದೆ. ಕೈಗಾರಿಕೆ ಆರಂಭ ಮಾಡಿಸಿದ್ದೇ ಸಾಧನೆ ಎಂದು ಹಿಗ್ಗುತ್ತಾ, ಕಾರ್ಖಾನೆಗಳಲ್ಲಿ ಏನಾಗುತ್ತಿದೆಯೆಂಬ ಬಗ್ಗೆ ಗಮನ ಹರಿಸದಿದ್ದರೆ ಈ ರೀತಿಯ ಅನಾಹುತಗಳು ಜರುಗುತ್ತವೆ ಎಂದು ಎಚ್ಚರಿಸಿದ್ದಾರೆ.
ವಿಸ್ಟ್ರಾನ್ ಐಫೋನ್ ಕಂಪನಿಯಲ್ಲಿನ ಘಟನೆಗೆ ಆಡಳಿತ ಮಂಡಳಿ, ಗುತ್ತಿಗೆದಾರರ ವೈಫಲ್ಯದಿಂದಾಗಿ ವೇತನ ತಡವಾಗಿರುವುದೇ ಕಾರಣವಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಕೂಡಲೇ ತನಿಖೆ ನಡೆಸಬೇಕು ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಎಂದು ಆಗ್ರಹಿಸಿದ್ದಾರೆ
.