ನದಿಗಳ ಜೋಡಣೆಯಿಂದ ಬರ ಮತ್ತು ನೆರೆಯನ್ನು ತಡೆಯಬಹುದಾಗಿದೆ -ಎಸ್.ಮುನಿಸ್ವಾಮಿ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ನದಿಗಳ ಜೋಡಣೆಯಿಂದ ಬರ ಮತ್ತು ನೆರೆಯನ್ನು ತಡೆಯಬಹುದಾಗಿದೆ -ಎಸ್.ಮುನಿಸ್ವಾಮಿ
ಕೋಲಾರ: ರಾಜ್ಯದ 17 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದು, ಅಪಾರ ಆಸ್ತಿ ಪಾಸ್ತಿ ಹಾನಿಯಾಗಿದೆ. ಅದೇ ರೀತಿ ಕೆಲವು ಜಿಲ್ಲೆಗಳು ಬರಕ್ಕೆ ತುತ್ತಾಗಿವೆ. ಈ ಸಮಸ್ಯೆಗಳಿಗೆ ನದಿ ಜೋಡಣೆ ಮಾಡುವುದರಿಂದ ಬರ ಮತ್ತು ನೆರೆ ಸಮಸ್ಯೆಯನ್ನು ತಡೆಯಬಹುದಾಗಿದೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು. 
           ಇಂದು 73 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಪತ್ರಿಕಾಗೋಷ್ಠಿಯನ್ನು ಕುರಿತು ಅವರು ಮಾತನಾಡಿದರು. ನೆರೆಗೆ ತುತ್ತಾಗಿ ಶಾಶ್ವತವಾಗಿ ಮನೆ ಕಳೆದುಕೊಂಡವರಿಗೆ 5 ಲಕ್ಷ, ರಿಪೇರಿಗೆ 01 ಲಕ್ಷ, ಮನೆ ನಿರ್ಮಾಣ ಆಗುವವರೆಗೆ ಪ್ರತಿ ತಿಂಗಳು 5 ಸಾವಿರ ಬಾಡಿಗೆ ಹಾಗೂ ನಿವೇಶನ ಇಲ್ಲದವರಿಗೆ 30*40 ಅಳತೆ ನಿವೇಶನವನ್ನು ನೀಡಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ ಎಂದು ತಿಳಿಸಿದರು. 
         ಕೋಲಾರ ಜಿಲ್ಲೆಯು ಬರಕ್ಕೆ ತುತ್ತಾಗಿದ್ದು, ಶಾಶ್ವತ ನೀರಾವರಿಯನ್ನು ಒದಗಿಸಲು ಎತ್ತಿನಹೊಳೆ ಹಾಗೂ ಕೆಸಿವ್ಯಾಲಿ ಯೋಜನೆಗಳನ್ನು ತರಲಾಗಿದೆ. ಕೆಸಿ ವ್ಯಾಲಿಯಿಂದ ನೀರು ಬಂದು ಈಗಾಗಲೇ ಸುಮಾರು 30 ಕೆರೆಗಳು ಭರ್ತಿಯಾಗಿದ್ದು, ಇದರ ಸುತ್ತಮುತ್ತ ಇರುವ ಕೊಳವೆಬಾವಿಗಳಲ್ಲಿ ನೀರು ಮರುಪೂರಣಗೊಂಡು 200 ಅಡಿಗಳಿಗೆ ನೀರು ದೊರೆಯುತ್ತಿರುವುದು ಸಂತಸ. ಎತ್ತಿನಹೊಳೆ ಯೋಜನೆಯನ್ನು ತೀವ್ರ ರೀತಿಯಲ್ಲಿ ಪೂರ್ಣಗೊಳಿಸಲು ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು. 
         ಪ್ರಧಾನಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ  ಜಿಲ್ಲೆಯಿಂದ 1.15 ಲಕ್ಷ ಫಲಾನುಭವಿಗಳು ಇದ್ದು, 70 ಸಾವಿರ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ 6 ಸಾವಿರ, ರಾಜ್ಯ ಸರ್ಕಾರದಿಂದ 4 ಸಾವಿರಗಳನ್ನು ನೀಡಲಾಗುತ್ತಿದೆ. ಕೆಜಿಎಫ್‍ನಲ್ಲಿ 12,600 ಎಕರೆ ಸರ್ಕಾರಿ ಜಾಗ ಇದ್ದು, ಇದರಲ್ಲಿ 6700 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಕಾರಿಡಾರ್‍ನ್ನು ನಿರ್ಮಾಣ ಮಾಡಿ ಸ್ಥಳೀಯರಿಗೆ ಉದ್ಯೋಗ ಒದಗಿಸಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಜಿಲ್ಲೆಯಲ್ಲಿ ಟೆಕ್ಸ್‍ಟೈಲ್ ಪಾರ್ಕ್‍ನ್ನು ಸ್ಥಾಪನೆ ಮಾಡಲು 40 ಕೋಟಿ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಜಿಲ್ಲೆಯ ಎ.ಪಿ.ಎಂ.ಸಿ ಮಾರುಕಟ್ಟೆಗೆ ಅಗತ್ಯವಿದ್ದ 30 ಎಕರೆ ಪ್ರದೇಶವನ್ನು ನೀಡಲು ಕ್ರಮವಹಿಸಲಾಗಿದೆ.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬರುವ ಯೋಜನೆಗಳನ್ನು ಸೂಕ್ತ ರೀತಿಯಲ್ಲಿ ಫಲಾನುಭವಿಗಳಿಗೆ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. 
          ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ಮಾತನಾಡಿ, ಪ್ರವಾಹಕ್ಕೆ ತುತ್ತಾಗಿರುವ ಜನತೆಗೆ ಕೋಲಾರದ ನಾಗರೀಕರು ನೆರೆ ಪರಿಹಾರ ಸಾಮಗ್ರಿಗಳನ್ನು ಹಾಗೂ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ. ಕಷ್ಟ ಕಾಲದಲ್ಲಿ ಸಹಾಯ ಹಸ್ತ ಚಾಚಿದ ಜಿಲ್ಲೆಯ ಎಲ್ಲಾ ನಾಗರೀಕರಿಗೂ ಸರ್ಕಾರದ ವತಿಯಿಂದ ಹಾಗೂ ಜಿಲ್ಲಾಡಳಿತದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು. 
         ಕೋಲಾರ ಜಿಲ್ಲೆಯಲ್ಲಿ ಶೇ 33 ರಷ್ಟು ಮಳೆ ಕೊರತೆಯುಂಟಾಗಿದೆ. ಇದರಿಂದ ಬಿತ್ತನೆಯ ಕಾರ್ಯವು ಕುಂಠಿತವಾಗಿದೆ. ಜಿಲ್ಲೆಯ 133 ಗ್ರಾಮಗಳು ನೀರಿನ ಕೊರತೆಯನ್ನು ಎದುರಿಸುತ್ತಿದ್ದು, 73 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳ ಮೂಲಕ ಉಳಿದ ಗ್ರಾಮಗಳಿಗೆ ಖಾಸಗಿ ಟ್ಯಾಂಕರ್ ಮೂಲಕ ದಿನಕ್ಕೆ 230 ಟ್ರಿಪ್ ಟ್ಯಾಂಕರ್ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಶ್ರೀನಿವಾಸಪುರ, ಮುಳಬಾಗಿಲು ಮತ್ತು ಕೆಜಿಎಫ್‍ಗಳಲ್ಲಿ 3 ಮೇವು ಬ್ಯಾಂಕ್‍ಗಳನ್ನು ಹಾಗೂ ಬಂಗಾರಪೇಟೆ ಮತ್ತು ಮಾಲೂರಿನಲ್ಲಿ 2 ಗೋಶಾಲೆಗಳನ್ನು ತೆರೆಯಲಾಗಿದೆ. ಗೋಶಾಲೆಗಳಲ್ಲಿ ಪ್ರತಿ ಜಾನುವಾರಿಗೆ 70 ರೂ.ಗಳ ನಿರ್ವಹಣಾ ವೆಚ್ಚವನ್ನು ನೀಡಲಾಗುತ್ತದೆ ಎಂದರು. 
        ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಶ್ರೀನಿವಾಸಗೌಡ ಅವರು ಮಾತನಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಬರಕ್ಕೆ ತುತ್ತಾಗಿವೆ. ಜಾನುವಾರುಗಳಿಗೆ ಮೇವು ಹಾಗೂ ಜನರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಮತ್ತು ಜಿಲ್ಲಾಡಳಿತಗಳು ಪ್ರಥಮ ಆದ್ಯತೆ ನೀಡಬೇಕು ಎಂದರು. 
       ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ. ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ ಅವರು ಉಪಸ್ಥಿತರಿದ್ದರು.