ದೈಹಿಕ ಶಿಕ್ಷಕರನ್ನು ಸಹಶಿಕ್ಷಕರೆಂದು ಪರಿಗಣಿಸುವ ಕಡತ ಅನುಮೋದಿಸಿ : ಶಿಕ್ಷಣ ಸಚಿವರಿಗೆ ದೈಹಿಕ ಶಿಕ್ಷಕರ ಸಂಘದ ಮನವಿ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

 

ದೈಹಿಕ ಶಿಕ್ಷಕರನ್ನು ಸಹಶಿಕ್ಷಕರೆಂದು ಪರಿಗಣಿಸುವ ಕಡತ ಅನುಮೋದಿಸಿ : ಶಿಕ್ಷಣ ಸಚಿವರಿಗೆ ದೈಹಿಕ ಶಿಕ್ಷಕರ ಸಂಘದ ಮನವಿ 

 

 

 

 

 

ಕೋಲಾರ:- ಪ್ರೊ.ವೈದ್ಯನಾಥನ್ ವರದಿಯಂತೆ ದೈಹಿಕ ಶಿಕ್ಷಕರನ್ನು ಸಹಶಿಕ್ಷಕರೆಂದು ಪರಿಗಣಿಸಲು ಸಿದ್ದವಾಗಿರುವ ಕಡತವನ್ನು ಸಂಪುಟದಲ್ಲಿ ಮಂಡಿಸಿ ಒಪ್ಪಿಗೆ ಪಡೆದುಕೊಳ್ಳುವಂತೆ ರಾಜ್ಯ ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಸಚಿವರು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಇ.ಶ್ರೀನಿವಾಸಗೌಡ, ಈ ಹಿಂದೆ ತಮ್ಮ ಸೂಚನೆಯಂತೆ ಶಿಕ್ಷಣ ಇಲಾಖೆ ದೈಹಿಕ ಶಿಕ್ಷಕರನ್ನೂ ಸಹಶಿಕ್ಷಕರೆಂದು ಪರಿಗಣಿಸುವ ಸಂಬಂಧ ಕಡತ ತಯಾರಿಸಿದ್ದು, ಈ ಕಡತ ಈಗಾಗಲೇ ಆಡಳಿತ ಮತ್ತು ಸಿಬ್ಬಂದಿ ಇಲಾಖೆ, ಆರ್ಥಿಕ ಇಲಾಖೆ,ಕಾನೂನು ಇಲಾಖೆಗಳ ಅನುಮತಿ ಪಡೆದುಕೊಂಡಿದೆ ಮತ್ತು ಸದನದ ಭರವಸೆಗಳ ಸಮಿತಿಯೂ ಒಪ್ಪಿ ವರದಿ ನೀಡಿದೆ ಎಂದು ತಿಳಿಸಿದರು.

ಸದರಿ ಕಡತಕ್ಕೆ ಸಂಬಂಧಿಸಿದಂತೆ ಸರ್ಕಾರದ ಅಪರ ಕಾರ್ಯದರ್ಶಿಗಳ ನೇತೃತ್ವದ ಉಪಸಮಿತಿಯಲ್ಲಿ ಚರ್ಚೆಯಾಗಿ ಅನುಮೋದನೆಗೊಂಡಿದೆ ಆದರೆ ಈ ಕಡತ ಸಮಗ್ರ ವೃಂದನೇಮಕಾತಿ ನಿಯಮ ತಿದ್ದುಪಡಿಯ ಕಡತದಲ್ಲಿ ಸೇರಿಕೊಂಡಿದ್ದು, ಇದಕ್ಕೆ ಸಂಪುಟದ ಒಪ್ಪಿಗೆ ಅಗತ್ಯವಾಗಿದೆ ಎಂದು ತಿಳಿಸಿದರು.

ಬೇರೆ ಬೇರೆ ವೃಂದದ ಕಡತಗಳು ಇನ್ನೂ ತೀರ್ಮಾನವಾಗದ ಕಾರಣ ದೈಹಿಕ ಶಿಕ್ಷಕರನ್ನು ಸಹಶಿಕ್ಷಕರೆಂದು ಪರಿಗಣಿಸಬೇಕಾಗಿರುವ ಕಡತವನ್ನು ಸಮಗ್ರ ಕಡತದಿಂದ ಬೇರ್ಪಡಿಸಿ ಹೊಸ ಕಡತ ಮಾಡಿ ಅದನ್ನು ಮಂಡಿಸುವಂತೆ ತಾವೇ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಫೆ.17 ರಂದು ಸೂಚಿಸಿದ್ದೀರಿ ಎಂದರು.

ತಮ್ಮ ಸೂಚನೆಯಂತೆ ಪ್ರತ್ಯೇಕ ಕಡತ ಸಿದ್ದಗೊಂಡು ಪ್ರಧಾನ ಕಾರ್ಯದರ್ಶಿಗಳ ಬಳಿ ಇದ್ದು, ಇದನ್ನು ಕೂಡಲೇ ಪಡೆದುಕೊಂಡು ಸಂಪುಟದಲ್ಲಿ ಒಪ್ಪಿಗೆ ಪಡೆದುಕೊಳ್ಳುವ ಮೂಲಕ ದೈಹಿಕ ಶಿಕ್ಷಕರ ಬಹುಕಾಲದ ಬೇಡಿಕೆ ಈಡೇರಿಸುವಂತೆ ಅವರು ಮನವಿ ಮಾಡಿದರು.

ಮನವಿ ನೀಡಿಕೆ ಸಂದರ್ಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಚೌಡಪ್ಪ, ವಿ.ಮುರಳಿಮೋಹನ್ ಮತ್ತಿತರರಿದ್ದರು.