ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ದಲಿತ ನಾರಾಯಣಪ್ಪರ ಮನೆಯ ಮೇಲೆ ಬೃಹದಾಕಾರವಾಗಿ ಹರಡಿಕೊಂಡಿರುವ ಅರಳಿ ಮರ ಕಡಿಯುವಂತೆ ದಲಿತ ಸಂಘರ್ಷ ಸಮಿತಿ ಆಗ್ರಹ
ಶ್ರೀನಿವಾಸಪುರ: ತಾಲ್ಲೂಕಿನ ಕೊಡಿಚೆರುವು ಗ್ರಾಮದ ದಲಿತ ನಾರಾಯಣಪ್ಪ ಅವರ ಮನೆಯ ಮೇಲೆ ಬೃಹದಾಕಾರವಾಗಿ ಹರಡಿಕೊಂಡಿರುವ ಅರಳಿ ಮರ ಕಡಿಯುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಹಾಗೂ ನಾರಾಯಣಪ್ಪ ಅವರ ಕುಟುಂಬದ ಸದಸ್ಯರು ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಮಂಗಳವಾರ ಧರಣಿ ನಡೆಸಿದರು.
ಈ ಹಿಂದೆ ಮಳೆಗಾಲದಲ್ಲಿ ಮರಕ್ಕೆ ಸಿಡಿಲು ಬಡಿದ ಪರಿಣಾಮವಾಗಿ, ಮನೆಯಲ್ಲಿದ್ದ ನಾರಾಯಣಪ್ಪ ಗಾಯಗೊಂಡಿದ್ದರು. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದರು. ಮನೆಯ ಮೇಲೆ ಹರಡಿಕೊಂಡು ಅಪಾಯಕಾರಿಯಾಗಿರುವ ಮರವನ್ನು ತೆಗೆಯುಂತೆ ದಳಸನೂರು ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಮನವಿ ಮಾಡಲಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನಿಡಿ ಪರಿಶೀಲಿಸಿ ಮರ ತೆಗೆಯಲು ಸಮ್ಮತಿ ಸೂಚಿಸಿದ್ದಾರೆ. ಆದರೆ ಪಿಡಿಒ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮನವಿ ಪತ್ರದಲ್ಲಿ ಆಪಾದಿಸಲಾಗಿದೆ.
ಮನೆ ಮಂದಿಗೆ ಪ್ರಾಣಾಪಾಯ ಉಂಟುಮಾಡುವ ಅರಳಿ ಮರವನ್ನು ತೆರವುಗೊಳಿಸಲು ವಿಫಲರಾಗಿರುವ ಪಿಡಿಒ ಅವರನ್ನು ಅಮಾನತು ಪಡಿಸಬೇಕು. ಶೀಘ್ರವಾಗಿ ಮರವನ್ನು ತೆರವುಗೊಳಿಸಿ ಮನೆ ಮಂದಿಯ ಜೀವ ಉಳಿಸಬೇಕು ಎಂದು ಮನವಿ ಮಾಡಲಾಗಿದೆ.
ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಅವರಿಗೆ ನಿಡಲಾಯಿತು.
ಜಿಲ್ಲಾ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಹೂವಳ್ಳಿ ಸಿ.ನಾಗೇಶ್, ಮುಖಂಡರಾದ ಪ್ರಕಾಶ್, ವೆಂಕಟೇಶ್, ಮೋಹನ್, ಮುರಳಿ, ನರಸಿಂಹ, ರಾಧಮ್ಮ ಮತ್ತಿತರರು ಇದ್ದರು.