ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ರಾಜಕೀಯದಿಂದ ದೂರವಿದ್ದು ಒಂದು ಸಹಕಾರ ಸಂಸ್ಥೆಯನ್ನು ನಡೆಸುವುದು ಅಸಾಧ್ಯ ಆದರೆ ತಾಯಂದಿರು, ರೈತರು ಸಿಡಿದೆದ್ದು ಈ ವ್ಯವಸ್ಥೆ ಉಳಿಸಿಕೊಳ್ಳುವ ಸಂಕಲ್ಪ ಮಾಡಿದರೆ ಮಾತ್ರ ಬದಲಾವಣೆ ಕಾಣಬಹುದು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯಪಟ್ಟರು.
ರಾಜ್ಯ ಸಹಕಾರ ಮಹಾಮಂಡಳ,ಜಿಲ್ಲಾ ಸಹಕಾರಿ ಯೂನಿಯನ್,ಡಿಸಿಸಿ ಬ್ಯಾಂಕ್, ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲಾಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ, ನಗರದ ಕಾರಂಜಿಕಟ್ಟೆಯ ನರ್ಮದಾ ಮಹಿಳಾ ಪತ್ತಿನ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ 67ನೇ ಸಹಕಾರಿ ಸಪ್ತಾಹದ 6 ದಿನದ `ಯುವಜನ, ಮಹಿಳಾ ಮತ್ತು ಅಬಲ ವರ್ಗದವರಿಗಾಗಿ ಸಹಕಾರ ಸಂಸ್ಥೆಗಳು’ ಎಂಬ ವಿಷಯದಡಿ ನಡೆದ ಕಾಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಹಕಾರ ವ್ಯವಸ್ಥೆ ರಾಜಕೀಯದಿಂದ ದೂರವಿರಲಿ ಎಂಬುದು ಭಾಷಣಗಳಿಗೆ ಸೀಮಿತವಾಗುತ್ತಿದೆ, ಕಳೆದ 7 ವರ್ಷಗಳಿಂದ ಪ್ರಪಾತದಲ್ಲಿ ಬಿದ್ದಿದ್ದ ಡಿಸಿಸಿ ಬ್ಯಾಂಕನ್ನು ಮೇಲೆತ್ತಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ ಆದರೂ ರಾಜಕೀಯ ಅಸ್ತ್ರ ನಮ್ಮ ವಿರುದ್ದ ಬಳಸುತ್ತಲೇ ಇದ್ದಾರೆ, ಇದನ್ನು ತಾಯಂದಿರ ಆಶೀರ್ವಾದದಿಂದ ಗೆದ್ದು ನಿಂತಿದ್ದೇನೆ ಎಂದರು.
ಭಾಷಣಗಳಲ್ಲಿ ಎಂವಿ ಕೃಷ್ಣಪ್ಪ, ನಾಗಿರೆಡ್ಡಿ, ಬೈರೈಗೌಡ,ಪಿ.ವೆಂಕಟಗಿರಿಯಪ್ಪ ಅವರ ಹೆಸರು ಹೇಳುತ್ತಲೇ ನಾವಿಂದು ಸಹಕಾರಿ ವ್ಯವಸ್ಥೆಯನ್ನು ರಾಜಕೀಯದಲ್ಲಿ ಬೆರೆಸಿದ್ದೇವೆ, ಇದರ ಬದಲಾವಣೆ ಆಗಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‍ಕುಮಾರ್, ಪ್ರಾಥಮಿಕ ಹಂತದ ಸಹಕಾರ ಸಂಘಗಳಲ್ಲೇ ದುರ್ಬಲರು,ಪರಿಶಿಷ್ಟರು,ಮಹಿಳೆಯರಿಗೆ ಅವಕಾಶ ಕಲ್ಪಿಸುವ ಅಗತ್ಯವಿದೆ ಎಂದು ತಿಳಿಸಿ, ಸದಸ್ಯತ್ವ ನೀಡುವಾಗ ರಾಜಕೀಯ ಪಕ್ಷ,ಜಾತಿಯನ್ನು ಹೊರಗಿಟ್ಟು ನೀಡಬೇಕು ಆಗ ಮಾತ್ರ ಸಹಕಾರಿ ವ್ಯವಸ್ಥೆಗೆ ಅರ್ಥ ಬರುತ್ತದೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಜಿಲ್ಲೆಯಲ್ಲಿಬ್ಯಾಲಹಳ್ಳಿ ಗೋವಿಂದಗೌಡರು ಇಲ್ಲವೆಂದರೆ ಸಹಕಾರಿ ವ್ಯವಸ್ಥೆಯೇ ಇಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ, ಇದಕ್ಕೆ ಕಾರಣ ಪಾತಾಳದಲ್ಲಿದ್ದಿ ಡಿಸಿಸಿ ಬ್ಯಾಂಕ್ ಅನ್ನು ಸಾಧ್ಯವೇ ಇಲ್ಲ ಎನ್ನುವಾಗ ಅದನ್ನು ಉಳಿಸಿ ಉನ್ನತ ಮಟ್ಟಕ್ಕೆ ಏರಿಸಿದ್ದಾರೆ ಎಂದರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಬಿ.ವಿ.ಗೋಪಿನಾಥ್, ಸಹಕಾರಿ ಸಪ್ತಾಹ ಭಾಷಣಗಳಿಗೆ ಸೀಮಿತವಾಗದೇ ವ್ಯವಸ್ಥೆ ಉಳಿಸಲು ಆತ್ಮಾವಲೋಕನ ಅಗತ್ಯ, ಇಡೀ ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡಂತೆ ಸಹಕಾರಿ ರಂಗ ಬೆಳೆಸುವ ಚಿಂತನೆ ಮಾಡಬೇಕು, 16 ವರ್ಷ ಡಿಸಿಸಿ ಬ್ಯಾಂಕ್ ದಿವಾಳಿಯಾಗಿ ಜಿಲ್ಲೆಯ ರೈತರು ಸಾಲಮನ್ನಾದಂತಹ ಸೌಲಭ್ಯಗಳಿಂದ ಮತ್ತೆ ವಂಚಿತರಾಗದಂತೆ ಎಚ್ಚರವಹಿಸುವ ಅಗತ್ಯವಿದೆ ಎಂದರು.
ನದಿ ಮೂಲ,ಕೆಆರ್‍ಎಸ್ ಹೊಂದಿರುವ ಮಂಡ್ಯದಲ್ಲಿ 1500 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ, ಮಳೆ,ನದಿಯೂ ಇಲ್ಲದ ಕೋಲಾರ ಜಿಲ್ಲೆ ಜನ ಆತ್ಮಹತ್ಯೆಯಿಂದ ದೂರವಾಗಲು ಡಿಸಿಸಿ ಬ್ಯಾಂಕ್ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರಣವಾಗಿವೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ, ಕಟ್ಟಕಡೆಯ ಗ್ರಾಮೀಣ ಜನತೆಗೆ ಸಹಕಾರಿ ವ್ಯವಸ್ಥೆಯ ಪ್ರಯೋಜನ ಸಿಗಬೇಕು, ಪ್ರತಿಕುಟುಂಬದಿಂದಲೂ ಓರ್ವ ಸದಸ್ಯನಾಗಬೇಕು ಆಗ ಮಾತ್ರ ಸಹಕಾರಿ ವ್ಯವಸ್ಥೆ ಸದೃಢಗೊಳ್ಳಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಸಹಕಾರಿ ರಂಗದಲ್ಲಿ ಶೇ.20 ಮಂದಿಯೂ ತೊಡಗಿಕೊಂಡಿಲ್ಲ, ಈ ಬಗ್ಗೆ ಆತ್ಮಾವಲೋಕನ ಅಗತ್ಯ, ಪ್ರತಿ ವರ್ಷವೂ ಸಪ್ತಾಹದಲ್ಲಿ ಒಂದೇ ಭಾಷಣ ಕೇಳುತ್ತಿದ್ದೇವೆ ಅಷ್ಟೆ ಎಂದರು.
ಸಹಕಾರಿಗಳ ಮನಃಪರಿವರ್ತನೆಯಾಗಬೇಕು, ಯುವಕರಿಗೆ ಶೇ.30,ಅಲ್ಪಸಂಖ್ಯಾತರಿಗೆ ಶೇ.10, ಮಹಿಳೆಯರಿಗೆ ಶೇ.30 ದುರ್ಬಲರಿಗೆ ಶೇ.30 ಸ್ಥಾನ ಸಹಕಾರಿ ಸಂಸ್ಥೆಗಳಲ್ಲಿ ಮೀಸಲಿಡುವ ಮನಸ್ಸು ಬಂದರೆ ಮಾತ್ರ ಸಹಕಾರಿ ಕ್ಷೇತ್ರದಲ್ಲಿ ಸಮಾಜದ ಕಟ್ಟಕಡೆಯ ಕುಟುಂಬದ ಸದಸ್ಯತ್ವ ಹೊಂದಲು ಸಾಧ್ಯ ಆದರೆ ನಾವು ಮುಖವಾಡ ಹಾಕಿಕೊಂಡು ಮಾತನಾಡುತ್ತೇವೆ, ಆದ್ದರಿಂದ ಪೂರ್ವಾಗ್ರಹಪೀಡಿತ ಮನಸ್ಥಿತಿ ಬದಲಾಗಿ ಸಹಕಾರ ರಂಗ ಶೋಷಿತರ,ದುರ್ಬಲರ ಪರವಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕಿ ಆರ್.ಅರುಣಾ, ಡಿಸಿಸಿ ಬ್ಯಾಂಕ್ ಮಹಿಳೆಯರು ಗೌರವದಿಂದ ಬದುಕಲು ದಾರಿ ತೋರಿದೆ, ಇಂದು ಬಡ್ಡಿ ವ್ಯಾಪಾರಿಗಳು ಡಿಸಿಸಿ ಬ್ಯಾಂಕ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಕೋವಿಡ್ ಸಂದರ್ಭದಲ್ಲಿ ವಾಣಿಜ್ಯ ಬ್ಯಾಂಕುಗಳು ಸಾಲ ನೀಡಲಿಲ್ಲ, ಡಿಸಿಸಿ ಬ್ಯಾಂಕ್ ತಾಯಂದಿರಿಗೆ ಕರೆದು ಸಾಲ ನೀಡಿ ಬದುಕು ರೂಪಿಸಿಕೊಳ್ಳಲು ನೆರವಾಗಿದೆ, ಜಿಲ್ಲೆಯಲ್ಲಿ ಆತ್ಮಹತ್ಯೆಗಳು ಇಲ್ಲವಾಗಲು ಸಹಕಾರಿ ಬ್ಯಾಂಕ್ ಕಾರಣವಾಗಿದೆ ಎಂದರು.
ಪತ್ರಕರ್ತ ಸಹಕಾರ ಸಂಘದ ಉಪಾಧ್ಯಕ್ಷ ಕೋ.ನಾ.ಮಂಜುನಾಥ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಯೂನಿಯನ್ ನಿರ್ದೇಶಕರಾದ ಉರಿಗಿಲಿ ರುದ್ರಸ್ವಾಮಿ,ಚೆಂಜಿಮಲೆ ರಮೇಶ್,ಪೆಮ್ಮಶೆಟ್ಟಿಹಳ್ಳಿ ಸುರೇಶ್, ಟಿ.ಕೆ.ಬೈರೇಗೌಡ,ಪಿ.ಎಂ.ವೆಂಕಟೇಶ್,ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ವಿ.ಆರ್.ಶಶಿಧರ್, ಯೂನಿಯನ್ ಸಿಇಒ ಕೆ.ಎಂ.ಭಾರತಿ, ಸಹಕಾರ ಸಂಘಗಳ ಉಪನಿಬಂಧಕ ಸಿದ್ದನಗೌಡ ಎನ್.ನೀಲಪ್ಪನವರ್, ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕಿ ಜಿ.ಬಿ.ಶಾಂತಕುಮಾರಿ, ನರ್ಮದಾ ಮಹಿಳಾ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಅಂಬಿಕಾ,ಸದಸ್ಯರಾದ ಸುನೀತಾ, ಸುಜಾತಾ, ತಸ್ಲೀಂಉನ್ನೀಸಾ, ಪತ್ರಕರ್ತರ ಸಹಕಾರ ಸಂಘದ ಸಿಇಒ ಗಂಗಾಧರ್, ಯೂನಿಯನ್ ರವಿ,ಲಕ್ಷ್ಮಿ ಮತ್ತಿತರರಿದ್ದರು.