ಡ್ರಗ್ಸ್ ಮಾಫಿಯಾಗೆ ಕಾಲೇಜು ಯುವಕರೇ ಮುಖ್ಯ ಗುರಿ, ವಾಹನ ಚಲಾವಣೆಯಲ್ಲಿ ಸಹನೆ ಕಾನೂನು ಪಾಲನೆ ಅಗತ್ಯ – ಠಾಣಾಧಿಕಾರಿ ಹರೀಶ್ ನಾಯ್ಕ್ ಇವರಿಂದ ಆರ್. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸ.

ವರದಿ: ಡಿ.ಬಿ.ಕ್ರಷ್ಣಮೂರ್ತಿ

ಡ್ರಗ್ಸ್ ಮಾಫಿಯಾಗೆ ಕಾಲೇಜು ಯುವಕರೇ ಮುಖ್ಯ ಗುರಿ, ವಾಹನ ಚಲಾವಣೆಯಲ್ಲಿ ಸಹನೆ ಕಾನೂನು ಪಾಲನೆ ಅಗತ್ಯ – ಠಾಣಾಧಿಕಾರಿ ಹರೀಶ್ ನಾಯ್ಕ್ ಇವರಿಂದ ಆರ್. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸ.

ಕುಂದಾಪುರ, ಜು.೧೨: “ಮದ್ಯ ಹಾಗೂ ಮಾದಕ ವಸ್ತು ಸೇವನೆಯ ಚಟಕ್ಕೆ ಸಿಲುಕಿರುವವರಲ್ಲಿ ಹೆಚ್ಚಿನವರು ಯುವಕರು ಹಾಗೂ ವಿದ್ಯಾರ್ಥಿಗಳಾಗಿದ್ದಾರೆ ಆದ್ದರಿಂದ ಮಾದಕ ಸೇವನೆಯ ವಿರುದ್ದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಿಗೆ ತೆರಳಿ ನಿರಂತರವಾಗಿ ಈ ಬಗ್ಗೆ ತಿಳುವಳಿಕೆ ಮೂಡಿಸಲಾಗುತ್ತದೆ’ ಎಂದು ಕುಂದಾಪುರ ಠಾಣಾಧಿಕಾರಿ ಹರೀಶ್ ನಾಯಕ್ ಹೇಳಿದರು. ಅವರು ಶುಕ್ರವಾರ ಕುಂದಾಪುರದ ಆರ್.ಎನ್.ಶೆಟ್ಟಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು.

   “ಸಮಾಜದಲ್ಲಿ ಮಾದಕ ದ್ರವ್ಯ ವ್ಯಸನಕ್ಕೆ ಮಕ್ಕಳು ತುತ್ತಾಗದಂತೆ ಇರಬೇಕಾದರೆ ಪೋಷಕರು,ಶಾಲೆ,ಕಾಲೇಜುಗಳಲ್ಲಿನ ಶಿಕ್ಷ ಕರು ಹೆಚ್ಚಿನ ಪಾತ್ರ ವಹಿಸಬೇಕಾಗುತ್ತದೆ.ವಿದ್ಯಾರ್ಥಿಗಳಿಗೆ ಹದಿಹರೆಯದಲ್ಲಿ ಮಾನಸಿಕ, ದೈಹಿಕ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಬೇಕಾಗುತ್ತದೆ.ಅವರ ಬದುಕಿನಲ್ಲಿ ಸೋಲು ವೈಫಲ್ಯದ ಸಂದರ್ಭದಲ್ಲಿ ಅವರ ಮೇಲಿನ ಒತ್ತಡ ನಿವಾರಣೆಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಆಗಬೇಕಾಗಿದೆ. ಸಮಾಜದಲ್ಲಿ ಮಾದಕ ವ್ಯಸನ ಹೋಗಲಾಡಿಸುವುದು ನಮ್ಮೆಲ್ಲರ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಈ ಜಾಗೃತಿ ಮೂಡಿಸಬೇಕಾಗಿದೆ” ಎಂದರು

    ಮಾದಕ ವ್ಯಸನಕ್ಕೆ ಸಿಲುಕುವವರ ಸರಾಸರಿ ವಯಸ್ಸು 12 ವರ್ಷದಿಂದ 19 ವರ್ಷವಾಗಿದ್ದು, ಬಹುತೇಕರು ಕಾಲೇಜು ವಿದ್ಯಾರ್ಥಿಗಳು. ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ತನ್ನ ಬೇರು ಗಟ್ಟಿಪಡಿಸಿಕೊಳ್ಳುತ್ತಿರುವ ಡ್ರಗ್ಸ್ ಮಾಫಿಯಾಗೆ ಕಾಲೇಜು ಯುವಕರೇ ಮುಖ್ಯ ಗುರಿಯಾಗಿರುವುದು ಇದರಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. ಪೋಷಕರಿಂದ ದೂರವಿರುವ ಹಾಗೂ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ಯುವಕರು ಬೇಗ ಈ ಚಟದತ್ತ ಆಕರ್ಷಿತರಾಗುತ್ತಾರೆ. ವ್ಯಸನಿ ಮನಸ್ಸು ಮಾಡದ ಹೊರತು ಚಟ ಹೋಗುವುದಿಲ್ಲ. ಒಮ್ಮೆ ಚಟ ಅಂಟಿಕೊಂಡರೆ ಸುಲಭವಾಗಿ ಪಾರಾಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಮೇಲೆ ಪೋಷಕರು ಸಂಪೂರ್ಣ ನಿಗಾ ವಹಿಸಿರಬೇಕು. ಮಗ ಅಥವಾ ಮಗಳ ವರ್ತನೆಯಲ್ಲಿ ಯಾವುದೇ ಬದಲಾವಣೆಯಾದರೆ ಕೂಡಲೇ ಲಕ್ಷ್ಯ ವಹಿಸಬೇಕು. ಅಲ್ಲದೆ ಕಾಲೇಜುಗಳಲ್ಲಿ ಶಿಕ್ಷಕರು ಕೂಡ ವಿದ್ಯಾರ್ಥಿಗಳ ಮೇಲೆ ಗಮನ ಹರಿಸುತ್ತಿರುಬೇಕಾಗುತ್ತದೆ. ವ್ಯಕ್ತಿಯು ಒಮ್ಮೆ ಚಟಕ್ಕೆ ಅಂಟಿಕೊಂಡರೆ ಸುಲಭವಾಗಿ ಮುಕ್ತಿ ಪಡೆಯಲು ಸಾಧ್ಯವಿಲ್ಲ. ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುವ ವ್ಯಸನವು ಪ್ರಾಣಕ್ಕೂ ಸಂಚಕಾರಿ ಎಂಬುದನ್ನು ಅರಿಯುವ ವೇಳೆಗೆ ಅಪಾಯದ ಮಟ್ಟಮೀರಿರುತ್ತದೆ. ಕೆಲವು ಮಾದಕ ದ್ರವ್ಯಗಳು ತೀವ್ರ ಹಾನಿಕಾರಿಯಾಗಿದ್ದು, ಮಾದಕ ವಸ್ತುಗಳು ದೈಹಿಕ ಹಾನಿಯನ್ನು ಕೂಡ ಉಂಟು ಮಾಡುತ್ತದೆ ಎಂದರು”

     ಹಾಗೇ ಅವರು ವಾಹನ ಚಲಾವಣೆಯಲ್ಲಿ ಯುವಜನತೆಗೆ ಅತ್ಯಂತ ಅಗತ್ಯವಾದ ಸಹನೆ ಮತ್ತು ಸಾಮಾನ್ಯಜ್ಞಾನದಂಥ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ವಾಹನ ಚಲಾಯಿಸಿ ದಲ್ಲಿ  ಮತ್ತು ಸಂಚಾರಿ ನಿಯಮಗಳನ್ನು ಪಾಲಿಸಿದ್ದಲ್ಲಿ  ಸಂಭವಿಸಬಹುದಾದ ಅವಘಡಗಳನ್ನು ತಪ್ಪಿಸಬಹುದು” ಎಂದರು.

      ದಿನಾಂಕ 12-7-2019 ರಂದು ಆರ್ ಎನ್  ಶೆಟ್ಟಿ ಪದವಿಪೂರ್ವ ಕಾಲೇಜು, ಕುಂದಾಪುರ ಮತ್ತು ಕುಂದಾಪುರ ಪೊಲೀಸ್ ಠಾಣೆ ಸಂಯೋಗದೊಂದಿಗೆ  ರಸ್ತೆ ಸುರಕ್ಷತಾ ಅರಿವು ಮತ್ತು ಮಾದಕ ದ್ರವ್ಯ ವಿರೋಧಿ ಮಾಸಾಚರಣೆ ನಡೆಯಿತು.ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ್ ಕುಮಾರ್ ಶೆಟ್ಟಿ ವಹಿಸಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಠಾಣಾಧಿಕಾರಿ ಹರೀಶ್ ನಾಯ್ಕ್ ಮಾತನಾಡಿದರು. ಕಾರ್ಯಕ್ರಮವನ್ನು ಕನ್ನಡ ವಿಭಾಗ ಮುಖ್ಯಸ್ಥರಾದ ಕೃಷ್ಣಮೂರ್ತಿ ಡಿಬಿ ನಿರ್ವಹಿಸಿ, ಸ್ವಾಗತಿಸಿ,ಕಾಲೇಜಿನ ಹಿರಿಯ ಉಪನ್ಯಾಸಕರಾದ ಶ್ರೀ ರವಿ ಉಪಾಧ್ಯ ಅತಿಥಿಗಳಿಗೆ ಪುಷ್ಪ ನೀಡಿ ಗೌರವಿಸಿದರು. ಇಂಗ್ಲೀಷ್ ವಿಭಾಗ ಮುಖ್ಯಸ್ಥೆ ಶ್ರೀಮತಿ ವನಿತಾ ಜೆ ಶೆಟ್ಟಿ ವಂದಿಸಿದರು.