ಡೆಂಗ್ಯೂ, ಚಿಕನ್ ಗುನ್ಯಾ ಬರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅರಿವು ಮೂಡಿಸಿ- ಜಿ.ಜಗದೀಶ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ 

ಡೆಂಗ್ಯೂ, ಚಿಕನ್ ಗುನ್ಯಾ ಬರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅರಿವು ಮೂಡಿಸಿ- ಜಿ.ಜಗದೀಶ್

ಕೋಲಾರ: ಡೆಂಗ್ಯೂ ಚಿಕನ್ ಗುನ್ಯಾ ಖಾಯಿಲೆಗಳು ಬರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ತಡೆಗಟ್ಟಲು ಕ್ರಮಕೈಗೊಳ್ಳಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ. ಜಗದೀಶ್ ಅವರು ತಿಳಿಸಿದರು. 

 ಇಂದು ತಮ್ಮ ಕಛೇರಿಯಲ್ಲಿ “ಡೆಂಗ್ಯೂ ವಿರೋಧಿ ಮಾಸಾಚರಣೆ” ಪ್ರಯುಕ್ತ ಹಮ್ಮಿಕೊಂಡಿದ್ದ ಅಂತರ್ ಇಲಾಖೆಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ನೀರು ನಿಲ್ಲದಂತೆ ನೋಡಿಕೊಳ್ಳಲು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಡೆಂಗ್ಯೂ ಚಿಕನ್‍ಗುನ್ಯಾ ಕಂಡು ಬಂದ ಪ್ರದೇಶಗಳ ಕಡೆ ಹೆಚ್ಚು ಮುನ್ನೆಚ್ಚರಿಕೆ ವಹಿಸಿ ಅಗತ್ಯ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಳ್ಳಬೇಕು. ಹಳೆಯ ಟಯರ್, ತೆಂಗಿನ ಚಿಪ್ಪು ಹಾಗೂ ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಸಂಗ್ರಹಿಸುವ ನೀರನ್ನು ಮುಚ್ಚಿ ಇಟ್ಟುಕೊಳ್ಳಬೇಕು ಎಂದು ಮಾಹಿತಿ ನೀಡಿದರು. 

 ಶಿಕ್ಷಕರು ಶಾಲೆಗಳಲ್ಲಿ 10 ನಿಮಿಷ ಮಕ್ಕಳಿಗೆ ಡೆಂಗ್ಯೂ ಹಾಗೂ ಚಿಕನ್‍ಗುನ್ಯಾ ಯಾವ ರೀತಿ  ಬರುತ್ತದೆ, ಅದು ಬರದಂತೆ ಯಾವ ರೀತಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಕ್ಕಳಿಗೆ ಅರಿವು ಮೂಡಿಸಬೇಕು. ಮಕ್ಕಳು ಶಿಕ್ಷಕರು ನೀಡಿದ ಮಾಹಿತಿಯನ್ನು ತಮ್ಮ ಮನೆಗಳಲ್ಲೂ ನೀಡಿ ಅಳವಡಿಸಿಕೊಳ್ಳುವಂತೆ ಪೋಷಕರಿಗೆ ತಿಳಿಸುತ್ತಾರೆ. ಜನನಿಬಿಡ ಪ್ರದೇಶಗಳು ಹಾಗೂ ಸ್ಲಂಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಸಮನ್ವಯ ಸಮಿತಿಯ ಇಲಾಖೆಗಳಿಗೆ ವಹಿಸಿರುವ ಕೆಲಸಗಳನ್ನು 01 ತಿಂಗಳ ಮಾಸಾಚರಣೆ ಮುಗಿದ ನಂತರ ಕೈಗೊಂಡ ಕ್ರಮಗಳ ಕುರಿತು ಪ್ರತಿ ಇಲಾಖೆಯು ವರದಿ ಸಲ್ಲಿಸಬೇಕು ಎಂದು ತಿಳಿಸಿದರು. 

 ಜಿಲ್ಲಾ ಆಶ್ರಿತ ರೋಗಗಳ ನಿವಾರಣಾಧಿಕಾರಿಗಳಾದ ಡಾ|| ಕಮಲಮ್ಮ ಅವರು ಮಾತನಾಡಿ, ಜಿಲ್ಲೆಯಲ್ಲಿ 2019 ರಲ್ಲಿ 16 ಚಿಕನ್‍ಗುನ್ಯಾ ಪ್ರಕರಣ ಹಾಗೂ 31 ಡೆಂಗ್ಯೂ ಪ್ರಕರಣಗಳು ಕಂಡುಬಂದಿವೆ. ಚಿಕನ್‍ಗುನ್ಯಾ ಹಾಗೂ ಡೆಂಗ್ಯೂ ಪ್ರಕರಣ ನಿಯಂತ್ರಕ್ಕೆ ವ್ಯಾಪಕವಾಗಿ ಅರಿವು ಮೂಡಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ಮಾಹಿತಿ ನೀಡುತ್ತಿದ್ದಾರೆ. ಸೊಳ್ಳೆಗಳು ಹೆಚ್ಚು ಇರುವ ಕಡೆ ಫಾಗಿಂಗ್ ಮಾಡಲಾಗುತ್ತಿದೆ. ಲಾರ್ವಾಹಾರಿ ಮೀನುಗಳಾದ ಗಬ್ಬಿ ಮತ್ತು ಗ್ಯಾಂಬೂಸಿಯಾ ಮೀನುಗಳನ್ನು ನೀರಿನ ತೊಟ್ಟಿಗಳಲ್ಲಿ ಬಿಡಲಾಗುತ್ತಿದೆ. ವಾರದಲ್ಲಿ ಒಂದು ದಿನ ಡ್ರೈ ಡೆ ಎಂದು ಆಚರಿಸಿ, ನೀರಿನ ಸಂಗ್ರಹಣಾ ತೊಟ್ಟಿಗಳು ಹಾಗೂ ಡ್ರಂಗಳನ್ನು ತೊಳೆದು ಒಣಗಿಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಪ್ರತಿ ವಾರ ಲಾರ್ವಾ ಸರ್ವೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. 

 ಸಭೆಯಲ್ಲಿ ಜಿಲ್ಲಾ ಪಂಚಾಯತ್‍ನ ಯೋಜನಾ ನಿರ್ದೇಶಕರಾದ ರವಿಚಂದ್ರನ್, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ|| ಚಾರಿಣಿ, ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ|| ಚಂದನ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.