ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ: ಡಿಸೆಂಬರ್ 23ರ ರೈತ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಘೋಷಣೆ ಮಾಡಿ, ಕಿಸಾನ್ ಸಮ್ಮಾನ್ ಯೋಜನೆಯನ್ನು ಮುಂದುವರೆಸಬೇಕು ಹಾಗೂ ಜಿಲ್ಲೆಯಲ್ಲಿ ಪ್ರತಿ ಗ್ರಾಪಂಗೆ ಒಂದು ರಾಗಿ ಖರೀದಿ ಕೇಂದ್ರವನ್ನು ಆರಂಭ ಮಾಡಬೇಕೆಂದು ಆಗ್ರಹಿಸಿ ರೈತಸಂಘದಿಂದ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ರಾಜ್ಯ, ದೇಶದಲ್ಲಿ ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ರೈತರ ಹೆಸರಿನಲ್ಲಿ ಪ್ರಮಾಣ ಮಾಡಿ ಬರುವುದು ಸಾಮಾನ್ಯವಾಗಿದೆ. ಎಲ್ಲ ರೈತರು ಒಂದಲ್ಲಾ ಒಂದು ಸಮಸ್ಯೆಗಳನ್ನು ವರ್ಷವಿಡೀ ಅನುಭವಿಸುತ್ತಲೇ ಇದ್ದರೂ ಸಹ ಅವರ ನೆರವಿಗೆ ಸರ್ಕಾರಗಳು ಮುಂದಾಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಇನ್ನು ಪ್ರತಿಯೊಂದು ಜಾತಿ ಜನಾಂಗಕ್ಕೂ ಇಂದು ಸರ್ಕಾರವು ಜಯಂತಿಗಳನ್ನು ಕಾರ್ಯರೂಪಕ್ಕೆ ತಂದಿರುವುದು ಸ್ವಾಗತಾರ್ಹದ ಸಂಗತಿಯಾಗಿದೆ. ಆದರೆ, ದೇಶದ ಬೆನ್ನೆಲುಬು ಆಗಿರುವ ರೈತರಿಗೆ ಮಾತ್ರ ದಿನಾಚರಣೆಯನ್ನು ಮಾಡಲು ಯಾವುದೇ ಸರ್ಕಾರಗಳು ಮುಂದಾಗಿಲ್ಲ. ಮುಂಬರುವ ಡಿಸೆಂಬರ್ ತಿಂಗಳ 23ರಂದು ಕಾರ್ಯಕ್ರಮವನ್ನು ಆಚರಿಸಲಾಗುತ್ತಿದ್ದು, ಆ ವೇಳೆಗಾದರೂ ಸರ್ಕಾರಿ ಕಾರ್ಯಕ್ರಮವನ್ನಾಗಿ ಘೋಷಿಸಲು ಮಾನ್ಯ ಸಚಿವರು ಸಂಬಂಧಪಟ್ಟವರ ಗಮನಕ್ಕೆ ತಂದು ಆದೇಶ ಹೊರಡಿಸಬೇಕಾಗಿ ಆಗ್ರಹಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಸಾಕಷ್ಟು ಅನುಕೂಲತೆಗಳಾಗುತ್ತಿದ್ದು, ಆದಾಯ ತೆರಿಗೆ ಹೆಸರಿನಲ್ಲಿ ಯೋಜನೆಯನ್ನೇ ವಾಪಸ್ಸುಪಡೆದಿರುವುದರಿಂದ ತೊಂದರೆಯಾಗುತ್ತಿದೆ. ಹೀಗಾಗಿ ಅದನ್ನು ಮುಂದುವರೆಸಬೇಕಿದ್ದು, ಇಲ್ಲವಾದಲ್ಲಿ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು, ರೈತ ದಿನಾಚರಣೆ, ರಾಗಿ ಖರೀದಿ ಕೇಂದ್ರ ಆರಂಭ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಕಿಸಾನ್ ಸಮ್ಮಾನ್ ಯೋಜನೆಯ ಬಗ್ಗೆ ಮತ್ತೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐತಾಂಡಹಳ್ಳಿ ಮುನ್ನಾ, ಸ್ವಸ್ತಿಕ್ ಶಿವು, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗಾರಪೇಟೆ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಉಪಾಧ್ಯಕ್ಷ ಜಾವೀದ್, ಮಂಗಸಂದ್ರ ತಿಮ್ಮಣ್ಣ, ವಕ್ಕಲೇರಿ ಹನುಮಯ್ಯ, ವಿ.ನಳಿನಿ, ಸುಪ್ರಿಂ ಚಲ ಮತ್ತಿತರರು ಉಪಸ್ಥಿತರಿದ್ದರು.