ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಡಿಸೆಂಬರ್ ಅಂತ್ಯದೊಳಗೆ ಯರಗೋಳ್ ಡ್ಯಾಂ ಕಾಮಗಾರಿ ಪೂರ್ಣ -ಕೆ.ಆರ್ ರಮೇಶ್ ಕುಮಾರ್
ಕೋಲಾರ: ಇದೇ ವರ್ಷದ ಡಿಸೆಂಬರ್ ಅಂತ್ಯದೊಳಗೆ ಯರಗೋಳ್ ಡ್ಯಾಂ ಕಾಮಗಾರಿಯನ್ನು ಪೂರ್ಣಗೊಳಿಸಿ ಜನವರಿ 01 ರಂದು ಡ್ಯಾಂ ಅನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಮಾನ್ಯ ವಿಧಾನಸಭಾಧ್ಯಕ್ಷರಾದ ಕೆ. ಆರ್ ರಮೇಶ್ ಕುಮಾರ್ ಅವರು ತಿಳಿಸಿದರು.
ಇಂದು ಜಿಲ್ಲೆಯ ಶಾಸಕರು ಹಾಗೂ ಸಂಸದರೊಂದಿಗೆ ಯರಗೋಳ್ ಜಲಾಶಯದ ಕಾಮಗಾರಿ ಸ್ಥಳವನ್ನು ಪರಿವೀಕ್ಷಣೆ ಮಾಡಿ ಮಾತನಾಡಿದ ಅವರು, ಈ ಡ್ಯಾಂ ಪೂರ್ಣಗೊಂಡರೆ 8 ಟಿ.ಎಂ.ಸಿ ನೀರನ್ನು ಸಂಗ್ರಹಣೆ ಮಾಡಬಹುದಾಗಿದೆ. 2016ರಲ್ಲಿ ನಾನು ಇಲ್ಲಿಗೆ ಬಂದಾಗ ಈ ಕಾಮಗಾರಿಯ ಸ್ಥಿತಿ ಶೋಚನೀಯವಾಗಿತ್ತು. ಈಗ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದರು.
ಕೆ.ಸಿವ್ಯಾಲಿ ನೀರನ್ನು ತರಲು ಸಾಕಷ್ಟು ಅಡೆತಡೆಗಳು ಉಂಟಾದವು. ಅವುಗಳನ್ನು ನಿವಾರಿಸಿ ಜಿಲ್ಲೆಗೆ ನೀರು ಹರಿಸಲಾಗುತ್ತಿದೆ. ಒಳ್ಳೆಯ ಕೆಲಸಗಳನ್ನು ಮಾಡುವಾಗ ವಿಘ್ನಗಳು ಸಹಜ. ಈ ವರ್ಷದ ಅಂತ್ಯದ ವೇಳೆಗೆ 480 ಎಂಎಲ್‍ಡಿ ನೀರು ಜಿಲ್ಲೆಗೆ ಹರಿಯುತ್ತದೆ. ಕೆರೆಗಳ ಪುನಃಶ್ಚೇತನಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕೆರೆ ಸಂಜೀವಿನಿ ಯೋಜನೆಯಲ್ಲಿ ಕೆಸಿ ವ್ಯಾಲಿ ನೀರು ಹರಿಯುವ ಪ್ರಮುಖ ಕೆರೆಗಳ ಹೂಳು ತೆಗೆಯಲಾಗುತ್ತದೆ. ನೀಲಗಿರಿ ಮತ್ತು ಜಾಲಿ ಮರಗಳನ್ನು ತೆಗೆಯಲು ಶಾಸನವನ್ನು ಮಾಡಲಾಗಿದೆ. ಅದರಂತೆ ಹಂತ ಹಂತವಾಗಿ ನೀಲಗಿರಿ ಮತ್ತು ಜಾಜಿ ಮರಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು.
ಎತ್ತಿನ ಹೊಳೆ ಯೋಜನೆಯು 14 ಸಾವಿರ ಕೋಟಿ ರೂ.ಗಳ ಬೃಹತ್ ಯೋಜನೆ ಸಕಲೇಶಪುರದ ಬಳಿ 7 ಹೊಳೆಗಳಿಂದ ಹೋಗುವ ನೀರನ್ನು ತಡೆಗೋಡೆಗಳನ್ನು ನಿರ್ಮಿಸಿ ಪೈಪ್‍ಲೈನ್ ಮೂಲಕ ತರಲಾಗುತ್ತದೆ. ಇದರಲ್ಲಿ ಅಂದಾಜು 24 ಟಿಎಂಸಿ ನೀರು ಸಿಗುತ್ತದೆ. ತುಮಕೂರು, ಬೆಂಗಳೂರು ಜಿಲ್ಲೆಗಳಿಗೆ ನೀಡಿದ ನಂತರ 8 ಟಿ.ಎಂ.ಸಿ ನೀರು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ದೊರೆಯಲಿದೆ. ತಡೆಗೋಡೆಗಳ ಶೇ.90 ರಷ್ಟು ಕಾಮಗಾರಿ ಮುಗಿದಿದೆ. 260 ಕಿ.ಮೀ ದೂರದಿಂದ ನೀರನ್ನು ತರಬೇಕಿದ್ದು, ಶೇ.70 ರಷ್ಟು ಪೈಪ್‍ಲೈನ್ ಕಾಮಗಾರಿ ಮುಗಿದಿದೆ. 2021 ಜನವರಿ ವೇಳೆಗೆ ಎತ್ತಿನ ಹೊಳೆ ನೀರನ್ನು ಜಿಲ್ಲೆಗೆ ತರಲಾಗುವುದು ಎಂದರು.
ಕೋಲಾರ ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ, ಮಾನ್ಯ ಸಭಾಧ್ಯಕ್ಷರಾದ ಕೆ.ಆರ್ ರಮೇಶ್ ಕುಮಾರ್ ಅವರ ಇಚ್ಛಾಶಕ್ತಿಯಿಂದ ಯರಗೋಳ್ ಡ್ಯಾಂ ನಿರ್ಮಾಣವಾಗುತ್ತಿದೆ. ಇವರು ಸತತವಾಗಿ ಕಾಮಗಾರಿಯ ಬೆನ್ನತ್ತಿ ವೇಗವಾಗಿ ಕಾಮಗಾರಿ ನಡೆಯುವಂತೆ ಮಾಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಶಾಸಕರು ಹಾಗೂ ನಾನು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.
ಕೋಲಾರ ಶಾಸಕರಾದ ಕೆ. ಶ್ರೀನಿವಾಸಗೌಡ ಅವರು ಮಾತನಾಡಿ, ಧರ್ಮಸಿಂಗ್ ಅವರ ಸರ್ಕಾರದಲ್ಲಿ 105 ಕೋಟಿ ಅನುದಾನದಲ್ಲಿ ಈ ಯೋಜನೆಯನ್ನು ತರಲಾಯಿತು. ಅಂದು ನಾನು ಸಚಿವನಾಗಿದ್ದೆ. 10 ವರ್ಷಗಳ ನಂತರ ಪುನಃ ಡ್ಯಾಂ ಪೂರ್ಣಗೊಳಿಸುವ ಅವಕಾಶ ಸಿಕ್ಕಿದೆ. ಈ ಡ್ಯಾಂ ನಿರ್ಮಾಣದಿಂದ ಕೋಲಾರ, ಬಂಗಾರಪೇಟೆ, ಮಾಲೂರು ಹಾಗೂ ಕೆಜಿಎಫ್‍ಗಳಿಗೆ ಕುಡಿಯುವ ನೀರನ್ನು ಒದಗಿಸಬಹುದಾಗಿದೆ. ಇನ್ನು ಮುಂದೆ ಬೀಳುವ ಮಳೆಯ ನೀರು ಡ್ಯಾಂನಲ್ಲಿ ಸಂಗ್ರಹವಾಗುತ್ತದೆ ಎಂದರು.
ಬಂಗಾರಪೇಟೆ ಶಾಸಕರು ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ
ಎಸ್.ಎನ್ ನಾರಾಯಣಸ್ವಾಮಿ ಅವರು ಮಾತನಾಡಿ, ರಮೇಶ್ ಕುಮಾರ್ ಅವರು ಕೋಲಾರ ಜಿಲ್ಲೆಗೆ ನೀರು ತಂದ ಆಧುನಿಕ ಭಗೀರಥ. ಯರಗೋಳ್ ಯೋಜನೆಗೆ ಶ್ರೀನಿವಾಸಗೌಡರು ತಳಪಾಯ ಹಾಕಿದರು. ಈ ಯೋಜನೆಗೆ ಮುಳುಗಡೆಯಾಗುವ 124 ಎಕರೆ ಅರಣ್ಯ ಭೂಮಿ ಹಾಗೂ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಅಡತಡೆಗಳು ಉಂಟಾದವು. ಈ ಯೋಜನೆಯಿಂದ ಮುಳುಗಡೆಯಾಗುವ ರೈತರಿಗೆ ಪರ್ಯಾಯವಾಗಿ ಬಲಮಂದೆ ಸುತ್ತಮುತ್ತ ಇರುವ ಸರ್ಕಾರಿ ಜಮೀನನ್ನು ನೀಡುವುದಾಗಿ ಭರವಸೆ ನೀಡಿದ ನಂತರ ರೈತರು ಒಪ್ಪಿದರು. ಅರಣ್ಯ ಇಲಾಖೆ ಜಮೀನನ್ನು ಪಡೆಯಲು 3 ಬಾರಿ ದೆಹಲಿಗೆ ಹೋಗಿ ಬರಬೇಕಾಯಿತು. 13 ದಶಲಕ್ಷ ಲೀಟರ್ ನೀರನ್ನು ಶುದ್ಧೀಕರಿಸುವ ಘಟಕಕ್ಕೆ ಬಂಗಾರಪೇಟೆಯಲ್ಲಿ ಶಂಕುಸ್ಥಾಪನೆ ಮಾಡಲಾಗಿದೆ ಎಂದರು.
ಮಾಲೂರು ಶಾಸಕರು ಹಾಗೂ ಕೋಚಿಮುಲ್‍ನ ಅಧ್ಯಕ್ಷರಾದ ಕೆ.ವೈ ನಂಜೇಗೌಡ ಅವರು ಮಾತನಾಡಿ, ಕೋಲಾರ ಹಿಂದುಳಿದ ಜಿಲ್ಲೆ. ಇಲ್ಲಿ ನೀರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನೀರು ದೊರೆತರೆ ಇಲ್ಲಿನ ರೈತರು ಆರ್ಥಿಕವಾಗಿ ಸದೃಢವಾಗುತ್ತಾರೆ. ಇರುವ ಕಡಿಮೆ ನೀರಿನಿಂದಲೇ ತರಕಾರಿ ಮಾವು, ರೇಷ್ಮೆಯನ್ನು ಉತ್ಪಾದನೆ ಮಾಡುತ್ತಾರೆ. ಕೆ.ಸಿ ವ್ಯಾಲಿ, ಯರಗೋಳ್ ಹಾಗೂ ಎತ್ತಿನಹೊಳೆ ಈ ಮೂರು ಯೋಜನೆಗಳು ಕೋಲಾರ ಜಿಲ್ಲೆಗೆ ವರದಾನವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.