ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿಕೆ 60 ಸೊಸೈಟಿ ಆನ್‍ಲೈನ್‍ಗೆ ಮಾರ್ಚ್ ಗಡುವು
ಸೊಸೈಟಿಗಳಿಗೆ 8 ಕೋಟಿ ರೂ. ಲಾಭಾಂಶ ಹಂಚಿಕೆಗೆ ಕ್ರಮ
ಕೋಲಾರ: ಮಾರ್ಚ್ ಅಂತ್ಯಕ್ಕೆ ಅವಳಿ ಜಿಲ್ಲೆಯ ಸೊಸೈಟಿಗಳಿಗೆ ಸುಮಾರು 8 ಕೋಟಿ ರೂ. ಲಾಭಾಂಶವನ್ನು ಹಂಚಿಕೆ ಮಾಡಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.
ಡಿಸಿಸಿ ಬ್ಯಾಂಕಿನಿಂದ ಇಲ್ಲಿನ ಸಹಕಾರಿ ಯೂನಿಯನ್‍ನಲ್ಲಿ ನಡೆದ ಸೊಸೈಟಿ ಆನ್‍ಲೈನ್ ಯೋಜನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮಾರ್ಚ್ 31ರೊಳಗೆ ಕೋಲಾರ ಜಿಲ್ಲೆಯ 30 ಹಾಗೂ ಚಿಕ್ಕಬಳ್ಳಾಪುರದ 30 ಆಯ್ದ ಸೊಸೈಟಿಗಳನ್ನು ಆನ್‍ಲೈನ್ ವ್ಯವಸ್ಥೆಗೆ ತರಲಾಗುತ್ತಿದ್ದು ಇದಕ್ಕೆ ಸಿಇಒಗಳು ಸನ್ನದ್ಧರಾಗಬೇಕೆಂದರು.
ಮುಂದಿನ ಜನರಲ್ ಬಾಡಿ ಮೀಟಿಂಗ್ ಒಳಗೆ ಎರಡೂ ಜಿಲ್ಲೆಗಳ ಎಲ್ಲ ಸೊಸೈಟಿಗಳನ್ನು ಆನ್‍ಲೈನ್‍ಗೆ ತರಲು ಯೋಜನೆ ರೂಪಿಸಲಾಗಿದ್ದು ಇದಕ್ಕೆ ಸ್ಪಂದಿಸದ ಸೊಸೈಟಿಗಳಿಗೆ ಡಿಸಿಸಿ ಬ್ಯಾಂಕಿನಿಂದ ಯಾವುದೇ ಸಾಲ ನೀಡದಿರಲು ನಿರ್ಧರಿಸಲಾಗಿದೆ. ಅಪೆಕ್ಸ್ ಬ್ಯಾಂಕ್ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ನೆರವಿನಿಂದ ಸೊಸೈಟಿಗಳನ್ನು ಆನ್‍ಲೈನ್ ಮಾಡಲಾಗುತ್ತಿದ್ದು ಹಣದ ಕೊರತೆ ಇಲ್ಲವಾಗಿದೆ. ಹೀಗಾಗಿ ಸೊಸೈಟಿ ಕಾರ್ಯದರ್ಶಿಗಳು ಬದ್ದತೆಯಿಂದ ಇಚ್ಛಾಶಕ್ತಿ ತೋರಿಸಿ ಬ್ಯಾಲೆನ್ಸ್‍ಶೀಟ್ ಟ್ಯಾಲಿ ಮಾಡಿಸಿಕೊಂಡು ಸಹಕಾರಿ ಸಂಸ್ಥೆಯನ್ನು ಆನ್‍ಲೈನ್‍ಗೆ ತರುವ ಮೂಲಕ ಸೊಸೈಟಿ ವ್ಯವಹಾರವನ್ನು ಪಾರದರ್ಶಕ ಮಾಡಬೇಕು ಎಂದು ತಿಳಿಸಿದರು.
ಆಡಿಟ್ ವಿಫಲ: ನೋಟಿಸ್ ನೀಡಿದರೂ 8 ಸೊಸೈಟಿಗಳು ಆಡಿಟ್ ಮಾಡಿಸಲು ವಿಫಲ ಆಗಿರುವುದು ವಿಷಾಧಕರ ಸಂಗತಿ. ಇನ್ನು ಮುಂದೆ ಲೋಪ ಮುಂದುವರೆಯಲು ಅವಕಾಶ ನೀಡಬಾರದು, ಸೊಸೈಟಿಗಳು ಸಶಕ್ತ ಹಾಗೂ ಪಾರದರ್ಶಕ ಆಗದ ಹೊರತು ಮಾದರಿ ಡಿಸಿಸಿ ಬ್ಯಾಂಕ್ ಕಟ್ಟಲು ಸಾಧ್ಯವಿಲ್ಲ. ಬೀದರ್ ಹೊರತುಪಡಿಸಿದರೆ ಇಡೀ ರಾಜ್ಯದಲ್ಲಿಯೇ ಕೋಲಾರ ಡಿಸಿಸಿ ಬ್ಯಾಂಕ್ ಲಾಭದಲ್ಲಿದ್ದು ಸಾಲ ಮನ್ನಾದಲ್ಲಿ ಒಂದೂ ದೂರು ಬಾರದಂತೆ ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ. ಇದು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಹೆಗ್ಗಳಿಕೆ ಆಗಿದ್ದು ಪ್ರತಿಯೊಬ್ಬ ರೈತರೂ ಎಟಿಎಂ ಕಾರ್ಡ್‍ನಲ್ಲಿ ಹಣ ಡ್ರಾ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಏ.14ರಂದು ಲ್ಯಾಬ್ ಲೋಕಾರ್ಪಣೆ: ಅವಳಿ ಜಿಲ್ಲೆಯ 12 ತಾಲೂಕುಗಳಲ್ಲೂ ಅಂಬೇಡ್ಕರ್ ಜಯಂತಿಯಂದು ತಲಾ 20 ಲಕ್ಷ ರೂ.ವೆಚ್ಚದಲ್ಲಿ ಸಹಕಾರಿ ಮೆಡಿಕಲ್ ಲ್ಯಾಬ್ ಉದ್ಘಾಟನೆ ಮಾಡಲಾಗುತ್ತಿದ್ದು ಶ್ರೀನಿವಾಸಪುರ ಹಾಗೂ ಕೋಲಾರದಲ್ಲಿ ಈಗಾಗಲೇ ಸ್ಥಳ ನಿಗದಿ ಮಾಡಲಾಗಿದೆ. ಪ್ರಸ್ತುತ ಲ್ಯಾಬ್‍ಗಳು ಸಂಗ್ರಹಿಸುತ್ತಿರುವ ಶೇ.25 ದರದಲ್ಲಿ ಸಹಕಾರಿ ಲ್ಯಾಬ್ ಸೇವೆ ನೀಡಲಿದ್ದು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಮಾಸಾಂತ್ಯಕ್ಕೆ ವಿಮೆ: 40 ಕೋಟಿ ರೂ. ಎನ್‍ಆರ್‍ಎಲ್‍ಎಂ ಬಡ್ಡಿ ಹಣ ಡಿಸಿಸಿ ಬ್ಯಾಂಕಿಗೆ ಬರಬೇಕಿದ್ದರೂ ಸಾಲ ವಿತರಣೆಯನ್ನು ನಿರಂತರವಾಗಿ ಮುಂದುವರಿಸಲಾಗಿದೆ. ಸೊಸೈಟಿ ಕಾರ್ಯದರ್ಶಿಗಳು ಠೇವಣಿ ಸಂಗ್ರಹದತ್ತಲೂ ಗಮನ ಹರಿಸಬೇಕಿದ್ದು ಕೋಲಾರ ತಾಲೂಕಿನಿಂದ ಮಾತ್ರವೇ 25 ಕೋಟಿ ರೂ. ಡಿಪಾಸಿಟ್ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ರೈತರು,ಬಡವರು,ಮಹಿಳಾ ಸಂಘಕ್ಕೆ ಸೊಸೈಟಿ ಕಾರ್ಯದರ್ಶಿಗಳು ಗುಣಮಟ್ಟದ ಸೇವೆ ನೀಡುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕಿದ್ದು ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಗೋವಿಂದಗೌಡರು ಎಚ್ಚರಿಕೆ ನೀಡಿದರಲ್ಲದೆ ಮಾಸಾಂತ್ಯಕ್ಕೆ ಎಲ್ಲ ಕಾರ್ಯದರ್ಶಿಳಿಗೂ ಆರೋಗ್ಯ ವಿಮೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಮುಳಬಾಗಲು ತಾಲೂಕಿನಲ್ಲಿ ಸೊಸೈಟಿ ಕಾರ್ಯದರ್ಶಿಗಳು ಈಗಾಗಲೇ ಒಂದುಕೋಟಿ ರೂ.ಗೂ ಮೀರಿ ಡಿಪಾಸಿಟ್ ಸಂಗ್ರಹಿಸಿದ್ದು ಇದು ಎಲ್ಲ ತಾಲೂಕುಗಳ ಸೊಸೈಟಿಗೂ ಮಾದರಿ ಆಗಬೇಕು ಎಂದು ಸೂಚಿಸಿದರು.
ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಎಂ.ಸಿ.ನೀಲಕಂಠೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೆ.ವಿ.ದಯಾನಂದ್,ಎಚ್.ನರಸಿಂಹರೆಡ್ಡಿ,ಆರ್.ನಾರಾಯಣರೆಡ್ಡಿ, ಬಿ.ವಿ.ವೆಂಕಟರೆಡ್ಡಿ,ಸಿಇಒ ಎಂ.ರವಿ, ಎಜಿಎಂ ಶಿವಕುಮಾರ್, ಬೈರೇಗೌಡ, ಇದ್ದರು.
ಪಿಎಲ್‍ಡಿ ಬ್ಯಾಂಕ್‍ಗಿಂತ ಸೊಸೈಟಿ ಮೇಲು
ಕೋಲಾರ ಪಿಎಲ್‍ಡಿ ಬ್ಯಾಂಕ್‍ಗಿಂತ ಹೆಚ್ಚಿನ ನೆರವು ಹಳ್ಳಿ ಸೊಸೈಟಿಯಿಂದ ಆಗುತ್ತಿರುವಾಗ ಸಹಕಾರಿ ಸಂಸ್ಥೆಗಳನ್ನು ಮತ್ತಷ್ಟು ಬಲಯುತವಾಗಿ ಕಟ್ಟಲು ಕಾರ್ಯದರ್ಶಿಗಳು ಮುಂದಾಗಬೇಕು ಎಂದು ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್ ಹೇಳಿದರು.
ಕಳೆದ 5 ವರ್ಷದಿಂದ ಪಿಎಲ್‍ಡಿ ಬ್ಯಾಂಕಿನಿಂದ ರೈತರಿಗೆ 5 ಕೋಟಿ ರೂ. ನೆರವು ನೀಡಲು ಸಾಧ್ಯವಿಲ್ಲವಾಗಿರುವಾಗ ಗ್ರಾಮಾಂತರ ಪ್ರದೇಶದ ಸೊಸೈಟಿಗಳಿಂದ ವರ್ಷಕ್ಕೆ ತಲಾ 10 ಕೋಟಿ ರೂ.ವರೆಗೂ ಸಾಲ ನೀಡಲಾಗಿದೆ. ಹೀಗಾಗಿ ಸೊಸೈಟಿಗಳು ಡಿಸಿಸಿ ಬ್ಯಾಂಕ್ ಮೂಲಕ ಯಾವುದೇ ಬಂಡವಾಳ ಇಲ್ಲದೆ ಲಕ್ಷಾಂತರ ರೂ. ಲಾಭ ಮಾಡುತ್ತಿದ್ದು ಇದನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಏರಿಸಲು ಕಾರ್ಯದರ್ಶಿಗಳು ಶ್ರಮಿಸಬೇಕು ಎಂದು ಸೂಚಿಸಿದರು.