ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಡಿಸಿಸಿ ಬ್ಯಾಂಕಿನಿಂದ 186 ಮಹಿಳಾ ಸಂಘಗಳಿಗೆ 10 ಕೋ.ರೂ ಸಾಲ ವಿತರಣೆ
ಬಡ್ಡಿರಹಿತ ಸಾಲದ ಮೊತ್ತ 10ಲಕ್ಷಕ್ಕೇರಿಸಲು ಕ್ರಮ -ಸ್ವೀಕರ್ ರಮೇಶ್‍ಕುಮಾರ್
ಕೋಲಾರ:- ಡಿಸಿಸಿ ಬ್ಯಾಂಕಿನಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುವ ಬಡ್ಡಿರಹಿತ ಸಾಲವನ್ನು 5 ಲಕ್ಷದಿಂದ 10 ಲಕ್ಷಕ್ಕೇರಿಸಲು ಒಂದು ವಾರದೊಳಗೆ ಸರ್ಕಾರದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ಭರವಸೆ ನೀಡಿದರು.
ಭಾನುವಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ನಡೆದ
ಸುಗಟೂರು ಹೋಬಳಿಯ 186 ಸ್ವಸಹಾಯ ಸಂಘಗಳಿಗೆ 10.2 ಕೋಟಿರೂ ಸಾಲ
ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಚುನಾವಣೆಗೆ ಮುನ್ನ ಹೇಳಿರುವಂತೆಯೇ ಪ್ರತಿಯೊಂದು ಸ್ವಸಹಾಯ
ಸಂಘಕ್ಕೂ ತಲಾ 10 ಲಕ್ಷರೂ ಸಾಲವನ್ನು ನೀಡುತ್ತೇವೆ. ಇದರಲ್ಲಿ ಅನುಮಾನ ಬೇಡ, ತಡವಾಗುವುದನ್ನು ತಪ್ಪಿಸಲು ಈಗ 5 ಲಕ್ಷ ರೂ ನೀಡುತ್ತಿದ್ದು, ಮುಂದಿನ 10 ದಿನಗಳೊಳಗೆ ಉಳಿದ 5 ಲಕ್ಷರೂ ಸಂಘಗಳಿಗೆ ನೀಡುವುದಾಗಿ ತಿಳಿಸಿದರು.
ಪ್ರಾಣಹೋದರೂ ತಲೆ ಬಗ್ಗಿಸುವುದಿಲ್ಲ, ನಿಮ್ಮ ವಿಶ್ವಾಸ ಕಳೆದುಕೊಳ್ಳುವುದಿಲ್ಲ ಎಂದು ಹೇಳಿದ ಅವರು, ಇತ್ತೀಚೆಗಿನ ಚುನವಣೆಯಿಂದಾಗಿ ಸಾಲ ಮರುಪಾವತಿಸಿದ್ದರೂ ಮರು ಸಾಲ ವಿತರಣೆಗೆ 3 ತಿಂಗಳು ತಡವಾಯಿತು ಎಂದು ತಿಳಿಸಿದರು.
ನಮ್ಮ ಹಾಗೂ ಬ್ಯಾಂಕ್ ಬಗ್ಗೆ ಅನೇಕರು ಮಾತನಾಡುತ್ತಾರೆ. ಅವರಿಗೆ ಜವಾಬ್ದಾರಿ
ಎನ್ನುವುದೇ ಇರುವುದಿಲ್ಲ. ಇನ್ನೂ ಕೆಲವು ಪಾಳೇಗಾರರು ಇಲ್ಲಸಲ್ಲದ
ವಿಚಾರಗಳನ್ನು ಹೇಳಿ, ಜನರು ಹಣ ವಾಪಸ್ಸು ಕಟ್ಟುವುದಿಲ್ಲ ಎಂದು
ಕಿವಿಚುಚ್ಚುತ್ತಿದ್ದಾರೆ. ಇವೆಲ್ಲವೂ ಹೊಟ್ಟೆಗೆ ಅನ್ನ ತಿನ್ನುವ ಮಾತುಗಳೇ ಎಂದು
ಕಿಡಿಕಾರಿದರು.
ಅವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಕಾರಣ ನಾನು ಹೆತ್ತ ತಾಯಿಯಂತೆ
ನಿಮ್ಮನ್ನು ನಂಬಿದ್ದೇನೆ. ತಾಯಿ ಹಾಲು ಎಂದಾದರೂ ವಿಷ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ನಿಮಗೆ ಸಾಲ ನೀಡಲು ಅಡ್ಡಿಪಡಿಸುವವರ ಕುಟುಂಬವನ್ನು ದೇವರು ಚೆನ್ನಾಗಿ ಇಟ್ಟಿರಲಿ ಎಂದು ಆಶಿಸಿ, ನೀವು ಪ್ರಾಮಾಣಿಕವಾಗಿ ಸಾಲ ಮರುಪಾವತಿಸಿ ಎಂದು ಮನವಿ ಮಾಡಿದರು,
ಸಂಘದ ಪ್ರತಿಯೊಬ್ಬ ಸದಸ್ಯರಿಗೆ 50 ಸಾವಿರ ಬದಲಿಗೆ ನಿಮಗೆ 1 ಲಕ್ಷರೂಗಳನ್ನು
ನೀಡುತ್ತಿರುವುದು ಪ್ರವಾಸ ಹೋಗುವುದಕ್ಕೆ ಅಲ್ಲ. ಹೈನುಗಾರಿಕೆ ಸೇರಿದಂತೆ
ಇನ್ನಿತರೆ ಕೆಲಸಗಳಿಗೆ ಬಳಸಿಕೊಂಡು ತಮ್ಮ ಕುಟುಂಬ ನಿರ್ವಹಣೆ ಮಾಡಿಕೊಳ್ಳುವಷ್ಟು ಮಟ್ಟಕ್ಕೆ ಸ್ವಾವಲಂಭಿಗಳಾಗಿ ಬೆಳೆಯಬೇಕು ಎಂದು ಕರೆ ನೀಡಿದರು.
ನನ್ನ ಇಬ್ಬರು ಮಕ್ಕಳಿಗೆ ಮದುವೆಯಾಗಿದ್ದು, ಅವರು ಆರಾಮಾಗಿ ಇದ್ದಾರೆ.
ಹೀಗಾಗಿ ನನಗೆ ಬೇರೆ ಯಾವುದೇ ಆಲೋಚನೆಗಳಿಲ್ಲ. ಮಲಗಿದರೂ, ಎದ್ದರೂ
ನನಗೆ ನೀರಿನದ್ದೇ ಚಿಂತೆಯಾಗಿದೆ.
ಕೆಸಿವ್ಯಾಲಿ ಜತೆಗೆ ಎತ್ತಿನಹೊಳೆ ಯೋಜನೆಯಡಿ ಜಿಲ್ಲೆಗೆ ನೀರು ಯಾವಾಗ
ಬರುತ್ತದೆ ಎನ್ನುವ ಕಾತುರ ನನ್ನಲ್ಲಿದೆ. ಸರಕಾರಿ ಭೂಮಿಗಳಲ್ಲಿ ಹುಲ್ಲು ಬೆಳೆದು ನಿಮ್ಮ ಹಸುಗಳಿಗೆ ಹುಲ್ಲು ನೀಡಬೇಕು ಎನ್ನುವ ಆಸೆ ನನಗಿದೆ. ನನ್ನ ಆಲೋಚನೆಯು ಜನರು, ಬಡವರ ಪರ ಇರುವುದರಿಂದ ನನ್ನ ಪರವಾಗಿ ನೀವಿದ್ದೀರಿ ಎನ್ನುವ ಆಶಾಭಾವನೆ ನನ್ನಲ್ಲಿದೆ ಎಂದರು.
ಕೇವಲ ಎಸ್ಸಿ, ಎಸ್ಟಿಗಳಿಗೆ ಮಾತ್ರವಲ್ಲದೆ ಎಲ್ಲ ವರ್ಗದ ರೈತರಿಗೂ ಕೊಳವೆಬಾವಿಗಳನ್ನು ಕೊರೆಯಿಸಲು 1 ತಿಂಗಳಲ್ಲೇ ಚಾಲನೆ ನೀಡಲಾಗುವುದು, ನಾನು ಪಾರ್ಟಿ, ಜಾತಿಗಳನ್ನು ದಾಟಿ ಬಂದಿರುವುದರಿಂದ ಎಲ್ಲರೂ ನನಗೆ ಸಮಾನರು ಎಂದು ತಿಳಿಸಿದರು.
ಸರ್ಕಾರದ ವಿವಿಧ ಸಹಾಯಧನ ಸೇರಿದಂತೆ ಇತರೆಲ್ಲಾ ಯೋಜನೆಗಳನ್ನು ಡಿಸಿಸಿ ಬ್ಯಾಂಕ್ ಮೂಲಕವೇ ಅನುದಾನ ನೀಡಿ ಅನುದಾನ ನೀಡಿಕೆಗೆ ನಾನು ಬದ್ದನಾಗಿದ್ದು, ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯ ಕ್ರಮದ ಭರವಸೆ ನೀಡಿದರು.
ಕೊಟ್ಟ ಮಾತಿಗೆ ಎಂದೂ ತಪ್ಪುವುದಿಲ್ಲ, ತಪ್ಪಿದರೆ ಈ ಭೂಮಿಯ ಮೇಲೆಯೇ
ಉಳಿಯಲ್ಲ ಎಂದು ತಿಳಿಸಿದ ಅವರು, ದೇವರ ಕೆಲಸ ಮಾಡಿದರೆ ಪುಣ್ಯ ಬರಲ್ಲ,
ಜನರ ಕೆಲಸ ಮಾಡಿದರೆ ಪುಣ್ಯ ಬರುತ್ತದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿಗೋವಿಂದಗೌಡ ಅಧ್ಯಕ್ಷತೆವಹಿಸಿದ್ದು, ವೇಮಗಲ್ ವ್ಯಾಪ್ತಿಯ ಉರಿಗಿಲಿ ಗ್ರಾಪಂಅನ್ನು ಸಾಲವಿತರಣೆ ಮಾಡುವ ಸಲುವಾಗಿ
ಸುಗಟೂರು ವ್ಯಾಪ್ತಿಗೆ ಸೇರಿಸಲಾಗಿದ್ದು, ಅಲ್ಲಿನ ಮಹಿಳಾ ಸಂಘಗಳಿಗೂ ಸಾಲ ನೀಡುವ ವ್ಯವಸ್ಥೆ ಮಾಡಬೇಕು ಎಂದರು.
ಸಾಲ ಮರುಪಾವತಿ ವಿಚಾರದಲ್ಲಿ ಸುಗಟೂರು ಹಾಗೂ ಹೋಳೂರು ಹೋಬಳಿಯಲ್ಲಿ
ಯಾರೊಬ್ಬರೂ ನಂಬಿಕೆ ಕಳೆದುಕೊಂಡಿಲ್ಲ. ನಮ್ಮ ಮೇಲೆ ಈ ಹಿಂದೆ ದೂರು
ಕೊಟ್ಟವರೇ ಈಗ ನಿಮ್ಮನ್ನು ನೋಡಿ ಕಲಿಯಬೇಕಾಗಿದೆ ಎಂದು ಹೇಳಿದರು.
ಸರ್ಕಾರದ ವಿವಿಧ ಇಲಾಖೆಗಳ ಹಣವನ್ನು ಡಿಸಿಸಿ ಬ್ಯಾಂಕಿನಲ್ಲೇ ಠೇವಣಿಯಿಟ್ಟು ವ್ಯವಹರಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಸ್ವೀಕರ್ ಅವರಿಗೆ ಮನವಿ ಮಾಡಿದ ಅವರು, ಇದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ ಎಂದರು.
ಜೂ.9ಕ್ಕೆ ಶ್ರೀನಿವಾಸಪುರದಲ್ಲಿ
7ನೇ ವರ್ಷದ ಕಲ್ಯಾಣೋತ್ಸವ
ಲೋಕ ಕಲ್ಯಾಣಕ್ಕಾಗಿ ಪ್ರತಿ ವರ್ಷದಂತೆಯೇ ಶ್ರೀನಿವಾಸಪುರದಲ್ಲಿ ಜನ್ಮಭೂಮಿ
ಸೇವಾ ಟ್ರಸ್ಟ್‍ನಿಂದ 7ನೇ ವರ್ಷದ ಕಲ್ಯಾಣೋತ್ಸವ ಕಾರ್ಯಕ್ರಮವನ್ನು
ಆಯೋಜಿಸಲಾಗಿದೆ ಎಂದು ಸ್ಪೀಕರ್ ರಮೇಶ್‍ಕುಮಾರ್ ತಿಳಿಸಿದರು.
ಆಂಧ್ರಪ್ರದೇಶದ ಸಿಂಹಾಚಲಂ ಶ್ರೀ ವರಾಹಾಲ ಲಕ್ಷ್ಮಿನರಸಿಂಹಸ್ವಾಮಿಯ
ಭವ್ಯಮೆರವಣಿಗೆ ಹಾಗೂ ಕಲ್ಯಾಣೋತ್ಸವ ಪ್ರಯುಕ್ತ ಜೂ.4 ರಿಂದ 9ರವರೆಗೆ
ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಭಾಗವಹಿಸಿ
ಯಶಸ್ವಿಗೊಳಿಸಿ ಎಂದು ಮಹಿಳಾ ಸಂಘಗಳ ಸದಸ್ಯರನ್ನು ಆಹ್ವಾನಿಸಿದರು.
ಸುಗಟೂರು ಎಸ್‍ಎಫ್‍ಸಿಎಸ್ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ ಸ್ವಾಗತಿಸಿ, ಇದೀಗ 186 ಸಂಘಗಳಿಗೆ ಸಾಲ ವಿತರಿಸುತ್ತಿದ್ದು, ಇದರಲ್ಲಿ 165 ಸಂಘಗಳು ಹಳೆಯ ಸಂಘಗಳಾಗಿವೆ, 21 ಹೊಸ ಸಂಘಗಲಿಗೂ ಸಾಲ ನೀಡುತ್ತಿರುವುದಾಗಿ ತಿಳಿಸಿದರು.