ಡಿಸಿಸಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಪೀಕರ್ ಸೂಚನೆ ಸುಸ್ತಿ ಆಗದವರಿಗೆ ಮರು ಸಾಲ ವಿತರಣೆಗೆ ನಿರ್ಧಾರ ಸಾಲ ವಸೂಲಾತಿಗೆ ಅಡ್ಡಿಪಡಿಸಿದರೆ ಪೊಲೀಸರಿಗೆ ದೂರು

ವರದಿ:ಶಬ್ಬೀರ್ ಅಹ್ಮದ್

ಡಿಸಿಸಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಪೀಕರ್ ಸೂಚನೆ ಸುಸ್ತಿ ಆಗದವರಿಗೆ ಮರು ಸಾಲ ವಿತರಣೆಗೆ ನಿರ್ಧಾರ
ಸಾಲ ವಸೂಲಾತಿಗೆ ಅಡ್ಡಿಪಡಿಸಿದರೆ ಪೊಲೀಸರಿಗೆ ದೂರು

ಕೋಲಾರ: ಡಿಸಿಸಿ ಬ್ಯಾಂಕ್ ಸಾಲ ವಸೂಲಾತಿಗೆ ಅಡ್ಡಿಯಾಗಿರುವ ಮುಖಂಡರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಬೇಕೆಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಸೂಚಿಸಿದರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಡಿಸಿಸಿ ಬ್ಯಾಂಕ್‍ನಿಂದ ವಿತರಿಸಲಾಗಿರುವ ಸಾಲದ ಮರುಪಾವತಿ, ಸಾಲ ವಿತರಣೆ, ಸಾಲ ನವೀಕರಣದ ಕುರಿತು ನಡೆದ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿ, ಬ್ಯಾಂಕಿಂಗ್ ವ್ಯವಸ್ಥೆ ಕುಸಿಯದಂತೆ ಎಚ್ಚರಿಕೆ ವಹಿಸಬೇಕೆಂದರು.
ಸೊಸೈಟಿ ಕಾರ್ಯದರ್ಶಿಗಳ ಮೇಲೆ ಈಗಾಗಲೇ ದೂರುಗಳು ಬಂದಿದ್ದು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು. ರಿಕವರಿ ಇಳಿಮುಖವಾಗಿರುವ ಕಡೆ ಸಾಲ ವಿತರಣೆಯನ್ನು ಸ್ವಲ್ಪ ದಿನ ಮುಂದಕ್ಕೆ ಹಾಕಬೇಕು. ಸಾಲ ವಸೂಲಾತಿಯಲ್ಲಿ ರಾಜಿ ಮತ್ತು ಹೊಂದಾಣಿಕೆ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಸ್ತ್ರೀ ಶಕ್ತಿ ಸಂಘಗಳ ಸಾಲ ವಸೂಲಾತಿಗೆ ಕೆಲವು ಮುಖಂಡರು ತೊಂದರೆ ಕೊಡುತ್ತಿದ್ದಾರೆಂದು ಕೆಲ ಸೊಸೈಟಿ ಕಾರ್ಯದರ್ಶಿಗಳು ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ಅಂತಹವರ ಪಟ್ಟಿ ಪಡೆದುಕೊಂಡ ಸ್ಪೀಕರ್ ಸಂಬಂಧಪಟ್ಟವರ ಜತೆ ಮಾತನಾಡಿ ವಸೂಲಾತಿಗೆ ಅಡ್ಡಿ ಮಾಡದಂತೆ ಎಚ್ಚರಿಕೆ ನೀಡುವುದಾಗಿ ಹೇಳಿದರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಸ್ತಿ ಆಗಿರುವ ಸ್ತ್ರೀ ಶಕ್ತಿ ಸಂಘಗಳ ಸದಸ್ಯರ ಜತೆ ಸಭೆ ನಡೆಸಿ ಸಾಲ ಮರುಪಾವತಿಗೆ ಮನವಿ ಮಾಡುವುದಾಗಿ ಹೇಳಿದ ಸ್ಪೀಕರ್ ಅವರು ಚುನಾವಣೆಯಲ್ಲಿ ಕೆಲ ದೊಡ್ಡ ಮನುಷ್ಯರು ಮನ್ನಾ ಮಾಡಿಸುವುದಾಗಿ ಹೇಳಿಕೊಂಡು ಓಡಾಡಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ವಿಷಾಧಿಸಿದರು.
ಸ್ತ್ರೀ ಶಕ್ತಿ ಸಂಘದವರು ಸಾಲ ಮರು ಪಾವತಿ ಮಾಡಿದರೆ ಸೊಸೈಟಿಗಳು ಉಳಿಯುತ್ತವೆ, ಸೊಸೈಟಿಗಳು ಉಳಿದರೆ ಡಿಸಿಸಿ ಬ್ಯಾಂಕ್ ಉಳಿಯುತ್ತದೆ, ಬ್ಯಾಂಕ್ ಇದ್ದರೆ ನಾವು,ನೀವು ಇರುತ್ತೇವೆ. ತಪ್ಪಿದಲ್ಲಿ ಪಿಎಲ್‍ಡಿ ಬ್ಯಾಂಕ್‍ಗೆ ಬಂದಿರುವ ದುಸ್ಥಿತಿ ಡಿಸಿಸಿ ಬ್ಯಾಂಕಿಗೂ ಬರುತ್ತದೆ ಎಂದು ಎಚ್ಚರಿಸಿದರು.
ಜೂ.2 ರಂದು ಬೆಳಗ್ಗೆ 10 ಗಂಟೆಗೆ ಸುಗಟೂರು ಸೊಸೈಟಿಯಲ್ಲಿ ಮಹಿಳಾ ಸಂಘಗಳಿಗೆ ಸಾಲ ವಿತರಣೆ ನಡೆಸಲು ಸೂಚಿಸಿದ ಸ್ಪೀಕರ್ ನಂತರದಲ್ಲಿ ಶ್ರೀನಿವಾಸಪುರ ಕಸಬಾಕ್ಕೆ ಸಂಬಂಧಿಸಿದಂತೆ ಸಾಲ ವಿತರಣೆ ಮಾಡಬೇಕು. ಅಂತಿಮವಾಗಿ ಜುಲೈ ಮೊದಲ ವಾರದಲ್ಲಿ ಆರಂಭವಾಗುವ ಸಾಲ ವಿತರಣೆ ಕಾರ್ಯಕ್ರಮ ಪೂರ್ಣಗೊಳ್ಳುವವರೆಗೆ ಮುಂದುವರೆಯಬೇಕು ಎಂದು ವೇಳಾಪಟ್ಟಿ ನಿಗದಿ ಮಾಡಿದರು.
ಬ್ರೋಕರ್ ಇಲ್ಲದೆ ಸಾಲ ಸಿಕ್ಕಬೇಕು, ಜಾಮೀನು ಕೇಳದೆ ಎಲ್ಲರಿಗೂ ಸಾಲ ಸೌಲಭ್ಯ ತಲುಪಿಸಬೇಕು ಎಂಬ ಕಾರಣಕ್ಕಾಗಿ ಡಿಸಿಸಿ ಬ್ಯಾಂಕನ್ನು ಸಶಕ್ತಗೊಳಿಸಲಾಗಿದ್ದು ಇದೀಗ ರಾಜಕೀಯ ಹಾಗೂ ಮುಖಂಡರ ಲಾಭಕ್ಕಾಗಿ ಬ್ಯಾಂಕನ್ನು ಇಕ್ಕಟ್ಟಿಗೆ ಸಿಲುಕಿಸುವುದು ಬೇಡ. ಪವಿತ್ರವಾದ ಕಾರ್ಯಕ್ರಮದಲ್ಲಿ 10 ಜನರನ್ನು ಖುಷಿಪಡಿಸಲು ಹೋದರೆ ಬ್ಯಾಂಕ್ ಮುಳುಗಿ ಹೋಗುತ್ತದೆ ಎಂದು ಕಿವಿಮಾತು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ನಿರ್ದೇಶಕ ಅನಿಲ್ ಕುಮಾರ್ ಇದ್ದರು.

 

ಸುಸ್ತಿ ಸಾಲ ವಸೂಲಿಗೆ ಸ್ಪೀಕರ್ ಸಾರಥ್ಯ

ಅವಳಿ ಜಿಲ್ಲೆಯಲ್ಲಿ ಸುಸ್ತಿ ಆಗಿರುವ ಸಾಲ ವಸೂಲಾತಿಗೆ ನಾನೇ ಬರುತ್ತೇನೆ. ಸೊಸೈಟಿ ಕಾರ್ಯದರ್ಶಿಗಳು ಸಾಲ ವಿತರಣೆಯಲ್ಲಿ ಹಣ ಪಡೆದುಕೊಳ್ಳುತ್ತಿರುವ ದೂರುಗಳಿದ್ದು ಮುಂದೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದ್ದು ಸಾಲ ವಸೂಲಾತಿಗೆ ಯಾವುದೇ ಮುಲಾಜು ತೋರಬಾರದು ಎಂದು ಸ್ಪೀಕರ್ ರಮೇಶ್ ಕುಮಾರ್ ಕಟ್ಟಪ್ಪಣೆ ಮಾಡಿದರು.
ಅಗತ್ಯ ಬಂದ ಕಡೆ ಪೊಲೀಸರ ನೆರವನ್ನು ಪಡೆದುಕೊಳ್ಳಬೇಕು. ನೇರ ಮಾರುಕಟ್ಟೆ ಒಡಂಬಡಿಕೆ ಮಾಡಿಕೊಂಡಿರುವ ಪೌಲ್ಟ್ರಿಫಾರಂಗಳಿಗೆ ಸಾಲ ಒದಗಿಸುವ ಮೂಲಕ ವಹಿವಾಟು ಹೆಚ್ಚಿಸಿಕೊಳ್ಳಬೇಕು. ಶೀಘ್ರದಲ್ಲೇ ವಿಜ್ಞಾನಿಗಳನ್ನು ಜಿಲ್ಲೆಗೆ ಕರೆಸಿ ರೈತರಿಗೆ ಯಾವ ಬೆಳೆ ಮಾಡಿದರೆ ಲಾಭದಾಯಕ ಎಂಬ ಬಗ್ಗೆ ಜಾಗೃತಿ ಮೂಡಿಸಲಾಗುವುದು. ದಗಾಕೋರತನ ತಡೆದರೆ ಮಾತ್ರ ಬ್ಯಾಂಕಿಂಗ್ ವ್ಯವಸ್ಥೆ ಸರಿ ಆಗುತ್ತದೆ ಎಂಬುದನ್ನು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕು ಎಂದು ಸ್ಪೀಕರ್ ತಿಳಿಸಿದರು.