ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿರುವ ಕೆ.ರತ್ನಯ್ಯ ಅವರು ರಾಜ್ಯ ಸರ್ವಶಿಕ್ಷಣ ಅಭಿಯಾನದ ಜಂಟಿ ನಿರ್ದೇಶಕರಾಗಿ ಬಡ್ತಿ ಹೊಂದಿರುವ ಹಿನ್ನಲೆಯಲ್ಲಿ ಜಿಲ್ಲಾ ಪ್ರೌಢಶಾಲಾ ವೃತ್ತಿಶಿಕ್ಷಕರ ಸಂಘದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿಡಿಪಿಐ ಅವರು, ಜಿಲ್ಲೆಯಲ್ಲಿ ಕೆಲಸ ಮಾಡಿದ್ದಕ್ಕೆ ತೃಪ್ತಿ ಇದೆ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು.
ಕೋವಿಡ್ ಆತಂಕದಲ್ಲಿ ಶಾಲೆ ಎಂದು ಆರಂಭವಾಗುತ್ತದೆಯೋ ಗುತ್ತಿಲ್ಲ, ಆದರೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಕರು ಮಕ್ಕಳನ್ನು ಸಂಪರ್ಕದಲ್ಲಿಟ್ಟುಕೊಂಡು ಅವರ ಕಲಿಕೆಗೆ ನೆರವಾಗಬೇಕು ಎಂದು ಕೋರಿದರು.
ವಿಷಯ ಪರಿವೀಕ್ಷಕ ಬಿ.ವೆಂಕಟೇಶಪ್ಪ, ಪ್ರೌಢಶಾಲಾ ವೃತ್ತಿಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ಮೂಲಕ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಡಿಡಿಪಿಐ ರತ್ನಯ್ಯ ಅವರಿಗೆ ಮತ್ತಷ್ಟು ಉನ್ನತ ಹುದ್ದೆ ಸಿಗಲಿ,ದೇವರು ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸಿದರು.
ಶಿಕ್ಷಣಾಧಿಕಾರಿ ನಾಗೇಂದ್ರಪ್ರಸಾದ್, ಕೋವಿಡ್-19ರ ಸಂಕಷ್ಟದಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸುವ ಮೂಲಕ ರಾಜ್ಯಮಟ್ಟದಲ್ಲಿ ಜಿಲ್ಲೆ ಉತ್ತಮ ಹೆಸರು ಗಳಿಸಲು ಶ್ರಮಿಸಿದ ರತ್ನಯ್ಯ ಅವರ ಸೇವೆಯನ್ನು ಎಂದಿಗೂ ಜಿಲ್ಲೆಯ ಶಿಕ್ಷಕರು,ಸಿಬ್ಬಂದಿ ಮರೆಯುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಡಯಟ್ ಪ್ರಾಂಶುಪಾಲ ಜಯರಾಮರೆಡ್ಡಿ, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್,ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ವಿಷಯಪರಿವೀಕ್ಷಕರಾದ ಶಶಿವಧನ,ಕೃಷ್ಣಪ್ಪ,ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್,ಖಜಾಂಚಿ ಆಂಜಿನಪ್ಪ, ಕಾರ್ಯದರ್ಶಿ ಮಾರ್ಕಂಡೇಶ್ವರ್, ಶ್ರೀನಿವಾಸಲು ಮತ್ತಿತರರು ಉಪಸ್ಥಿತರಿದ್ದರು.