ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಟೊಮ್ಯಾಟೊ ಬೆಳೆಯಲ್ಲಿ ಇತ್ತೀಚೆಗೆ ಊಜಿನೋಣ (ಸೌತ ಅಮೇರಿಕನ್ ಪಿನವರ್ಮ) ಭಾದೆ ಹೆಚ್ಚಾಗಿದ್ದು ಟೂಟಾಮೋಹಕ ಬಲೆಯನ್ನು ಉಪಯೋಗಿಸುವುದರಿಂದ ಊಜಿನೋಣದ ಭಾದೆ ಕಡಿಮೆ ಮಾಡಿ ರೈತರು ಅಧಿಕ ಇಳುವರಿ ಪಡೆಯಬಹುದು ಎಂದು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಸಸ್ಯ ಸಂರಕ್ಷಣೆ ವಿಜ್ಞಾನಿಯಾದ ಡಾ. ಅಂಬಿಕಾ ಡಿ.ಎಸ್ ತಿಳಿಸಿದರು. ಕೆ.ಜಿ.ಎಫ್ ತಾಲ್ಲೂಕಿನ ಬೇತಮಂಗಲ ಹೋಬಳಿಯ ತಿಮ್ಮಸಂದ್ರ ಗ್ರಾಮದಲ್ಲಿ ಟೂಟಾ ಮೋಹಕಬಲೆಯನ್ನು ಅಳವಡಿಸಿಕೊಳ್ಳುವಿಕೆಯನ್ನು ಪ್ರಾತ್ಯೆಕ್ಷಿಕೆಯ ಮೂಲಕ ಗ್ರಾಮದ ರೈತರಿಗೆ ತಿಳಿಸಿದರು. ಅಲ್ಲದೇ ರೈತರು ಕೀಟ ಮತ್ತು ರೋಗದ ಹತೋಟಿಗೆ ಬರೀ ಪೀಡೆನಾಶಕಗಳ ಬಳಕೆಗೆ ಒತ್ತು ಕೊಡದೇ ಸಮಗ್ರ ಪದ್ಧತಿಗಳಾದ ಮಾಗಿ ಉಳುಮೆ ಮಾಡುವುದು, ಜೈವಿಕ ಪೀಡೆನಾಶಕಗಳಾದ ಟ್ರೈಕೋಡರ್ಮಾ ಮತ್ತು ಸ್ಯುಡೋಮೋನಾಸ್ ಬಳಸಿ ಉತ್ಕಷ್ಟಿಕರಿಸಿದ ಕೊಟ್ಟಿಗೆ ಗೊಬ್ಬರ ಬಳಸುವುದು, ಬಲೆಬೆಳೆಯಾಗಿ ಪ್ರತಿ 16 ಸಾಲಿನ ಟೊಮ್ಯಾಟೊ ನಂತರ 1 ಸಾಲು ಚೆಂಡು ಹೂ ನಾಟಿ ಮಾಡುವುದು. ತಡೆಬೆಳೆಯಾಗಿ ಟೊಮ್ಯಾಟೊ ನಾಟಿ ಮಾಡುವ 15 ದಿನಗಳ ಮುಂಚಿತವಾಗಿ ಮೆಕ್ಕೆಜೋಳ ಅಥವಾ ಜೋಳ ಬಿತ್ತುವುದು. ರಸಹೀರುವ ಕೀಟಗಳನ್ನು ಆಕರ್ಷಿಸಲು ಹಳದಿ ಮತ್ತು ಅಂಟು ಪಟ್ಟಿಯನ್ನು ಬಳಸುವುದು ಕಳೆಗಳ ನಿರ್ಮೂಲನೆ ಮಾಡಿ ಸ್ವಚ್ಚ ಬೇಸಾಯ ಮಾಡುವುದು ಹಾಗೂ ಬೆಳೆ ಪರಿವರ್ತನೆ ಕೈಗೊಳ್ಳಬೇಕು.
ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬಿಡುಗಡೆಗೊಳಿಸಿರುವ ಅರ್ಕಾಮೈಕ್ರೋಬಿಯಲ್ ಕಂಸೊರ್ಶಿಯಂ ಎಂಬ ಜೈವಿಕ ಸಾರ ಬಳಸುವುದುರಿಂದ ಮಣ್ಣಿನಿಂದ ಬರುವ ರೋಗಗಳನ್ನು ಹತೋಟಿ ಮಾಡಬಹುದು. ಅಲ್ಲದೇ ತರಕಾರಿ ಸ್ಪೇಷಲ್ನ್ನು ಸಿಂಪರಣೆ ಮಾಡುವುದರಿಂದ ಅಧಿಕ ಇಳುವರಿಯನ್ನು ಪಡೆಯಬಹುದು ಎಂದು ತಿಳಿಸಿದರು.
ಪ್ರಾತ್ಯೆಕ್ಷಿಕೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಮಣ್ಣು ವಿಜ್ಞಾನಿಯಾದ ಡಾ. ಅನಿಲ್ಕುಮಾರ್ ಎಸ್ ಭಾಗವಹಿಸಿದ್ದರು. ಗ್ರಾಮದ ರೈತರಾದ ಮುನಿವೆಂಕಟಪ್ಪ, ರಘು, ಅರ್ಜುನ, ಭರತ ಮುಂತಾದ ರೈತರು ಇದ್ದರು.