ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಜನರ ಸುಭೀಕ್ಷತೆಗಾಗಿ ಪ್ರಗತಿ ಪರ ಆಡಳಿತ – ಸಚಿವ ಹೆಚ್.ನಾಗೇಶ್.
ಕೋಲಾರ: ಜನರು ಸುಭಿಕ್ಷವಾಗಿ ಇರುವಂತೆ ಪ್ರಗತಿಪರ ಹಾಗೂ ಜನಪರ ಆಡಳಿತವನ್ನು ರಾಜ್ಯ ಸರ್ಕಾರ ನೀಡುತ್ತಿದೆ ಎಂದು ಅಬಕಾರಿ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಹೆಚ್.ನಾಗೇಶ್ ಅವರು ತಿಳಿಸಿದರು.
ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸರ್ಕಾರದ ನೂರು ದಿನಗಳ ಸಾಧನೆ ಕುರಿತ ಛಾಯಾಚಿತ್ರ ಪ್ರದರ್ಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ನೂರು ದಿನಗಳ ಸಾಧನೆ ತೃಪ್ತಿದಾಯಕವಾಗಿದ್ದು, ಈ ಅವಧಿಯಲ್ಲಿ ರಾಜ್ಯದ 23 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿತ್ತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಶೀಘ್ರವಾಗಿ ಸ್ಪಂದಿಸಿ ಸಮಾರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡಿತು. ಗಂಜಿ ಕೇಂದ್ರಗಳನ್ನು ತೆರೆದು ನಿರಾಶ್ರಿತರನ್ನು ಒಂದೆಡೆ ಸೇರಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಯಿತು ಎಂದು ತಿಳಿಸಿದರು.
ಮಹಾರಾಷ್ಟ್ರದ ಕೊಯ್ನಾ ಡ್ಯಾಂನಿಂದ ಏಕಾಏಕಿ ನೀರನ್ನು ಹರಿಬಿಟ್ಟ ಕಾರಣ ಪ್ರವಾಹ ಉಂಟಾಗಿ ಇದರಲ್ಲಿ ಹಲವಾರು ಜನರು ಮನೆಗಳನ್ನು, ಅಗತ್ಯ ವಸ್ತುಗಳನ್ನು, ಜಾನುವಾರುಗಳನ್ನು ಕಳೆದುಕೊಂಡರು. ಇವರಿಗೆ ತಾತ್ಕಾಲಿಕ ಪರಿಹಾರವನ್ನು ಒದಗಿಸಲು ಕೇಂದ್ರ ಸರ್ಕಾರವೂ ಮದ್ಯಂತರ ಪರಿಹಾರವಾಗಿ 1200 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತು.
ಪ್ರವಾಹದಿಂದ ಶೇಕಡ 15 ರಷ್ಟು ಹಾನಿಯಾದ ಮನೆಗಳಿಗೆ 50 ಸಾವಿರ, ತೀವ್ರ ಹಾನಿಯಾದ ಮನೆಗಳಿಗೆ 5 ಲಕ್ಷ ಪರಿಹಾರವನ್ನು ಪಾವತಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸರ್ಕಾರವು ಜನಹಿತಕ್ಕಾಗಿ ಅವರ ಅಬ್ಯುದಯಕ್ಕಾಗಿ ಕೈಗೊಳ್ಳುವ ಕಾರ್ಯಕ್ರಮಗಳ ಬಗ್ಗೆ ಜನಸಾಮನ್ಯರಿಗೆ ತಿಳಿಸುವುದು ಅತಿ ಮುಖ್ಯ. ಈ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಸ್ತು ಪ್ರದರ್ಶನ, ಪುಸ್ತಕಗಳ ಮೂಲಕ ಅರಿವು ಮೂಡಿಸುತ್ತಿರುವುದು ಅತ್ಯಂತ ಪ್ರಸ್ತುತ ಎಂದು ಅಭಿಪ್ರಾಯ ಪಟ್ಟರು.
ವಸ್ತುಪ್ರದರ್ಶನ : ವಸ್ತುಪ್ರದರ್ಶನದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಸ್.ಸಿ.ಪಿ., ಟಿ.ಎಸ್.ಪಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಹಿಳೆಯರು ಮತ್ತು ಮಕ್ಕಳು ಅಭಿವೃದ್ಧಿಗೆ ಕೈಗೊಂಡಿರುವ ಕಲ್ಯಾಣ ಕಾರ್ಯಕ್ರಮಗಳು, ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಉದ್ಯೋಗ ಸೃಷ್ಠಿಗೆ ಸರ್ಕಾರ ಆದ್ಯತೆ ನೀಡಿರುವ ಕುರಿತು, ಮೀನುಗಾರರ 60.58 ಕೋಟಿ ಸಾಲಮನ್ನಾ ಕುರಿತು ಮಾಹಿತಿ ಪ್ರದರ್ಶಿಸಲಾಗಿದೆ.
ಅಲ್ಲದೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ರೈತರಿಗೆ ವಾರ್ಷಿಕ 6 ಸಾವಿರ ನೀಡುವುದರ ಜೊತೆಗೆ ರಾಜ್ಯ ಸರ್ಕಾರವು 4 ಸಾವಿರ ರೂ.ಗಳನ್ನು ನೀಡುತ್ತಿರುವ ಬಗ್ಗೆ. ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜಿಲ್ಲೆಗಳ ಸಂತ್ರಸ್ಥರ ನೆರವಿಗೆ ಮಿಡಿದು ಸರ್ಕಾರವು ಕೈಗೊಂಡ ಹಲವು ಪರಿಹಾರ ಕಾರ್ಯಗಳ ಕುರಿತು ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಲಾಗಿದೆ.
ಈ ವಸ್ತುಪ್ರದರ್ಶನವು ಡಿಸೆಂಬರ್ 30 ರವರೆಗೆ ಪ್ರದರ್ಶನವಾಗಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರದ ಯೋಜನೆಗಳ ಕುರಿತ ಮಾಹಿತಿಯನ್ನು ಪಡೆದು ಕೊಳ್ಳಬಹುದಾಗಿದೆ.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಹೆಚ್.ವಿ. ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ರೆಡ್ಡಿ, ಉಪವಿಭಾಗಾಧಿಕಾರಿಗಳಾದ ಸೋಮಶೇಖರ್, ಜಿಲ್ಲಾ ವಾರ್ತಾಧಿಕಾರಿಗಳಾದ ಪಲ್ಲವಿ ಹೊನ್ನಾಪುರ, ಜಿಲ್ಲಾ ಪಂಚಾಯತ್ ಸದಸ್ಯರಾದ ಕೃಷ್ಣಪ್ಪ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.