ಚಳಿಗಾಲದಲ್ಲಿ ಹೃದಯಾಘಾತ ಸಾಮನ್ಯವಾಗಿದೆ – ಸಂವಾದ ಕಾರ್ಯಕ್ರಮ ಡಿಸಿ ಸಿ.ಸತ್ಯಭಾಮ ಉದ್ಘಾಟನೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

“ದುಶ್ಚಟಗಳಿಂದ ದೂರವಿದ್ದು, ಕಾಲಕಾಲಕ್ಕೆ ಹೃದಯ ತಪಾಸಣೆ ಮಾಡಿಸಿಕೊಂಡರೆ
ಹೃದಯಾಘಾತದಿಂದಾಗುವ ಜೀವ ಹಾನಿ ತಪ್ಪಿಸಬಹುದು- ಡಿಸಿ ಸಿ.ಸತ್ಯಭಾಮ”

ಕೋಲಾರ:- ಆರೋಗ್ಯಕ್ಕೆ ಮಾರಕವಾದ ಮದ್ಯ,ಧೂಮಪಾನದಂತಹ ದುಶ್ಚಟಗಳಿಂದ ದೂರವಿದ್ದು, ಕಾಲಕಾಲಕ್ಕೆ ಆರೋಗ್ಯ ತಪಾಸಣೆ,ಚಿಕಿತ್ಸೆ ಪಡೆಯುವುದರಿಂದ ಹೃದಯಾಘಾತದಿಂದಾಗುವ ಜೀವಹಾನಿ ತಪ್ಪಿಸಬಹುದು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಮಣಿಪಾಲ್ ಆಸ್ಪತ್ರೆ ಬೆಂಗಳೂರು ಹಾಗೂ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ “ಚಳಿಗಾಲದಲ್ಲಿ ಹೃದಯಾಘಾತ ಸಾಮನ್ಯವಾಗಿದೆ” ಈ ಬಗ್ಗೆ ಪತ್ರಕರ್ತರೊಂದಿಗೆ ನೇರ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆರೋಗ್ಯದ ಮಹತ್ವವನ್ನು ಅರಿತು ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಜೀವ ರಕ್ಷಣೆ ಸಾಧ್ಯ ಎಂದ ಅವರು ಜತೆಗೆ ನಮ್ಮ ಆಹಾರ ಪದ್ದತಿಯಲ್ಲೂ ಎಚ್ಚರಿಕೆ ಅಗತ್ಯ ಎಂದು ತಿಳಿಸಿದರು.
ದೇಹದ ಪ್ರಮುಖವಾದ ಅಂಗ ಹೃದಯವಾಗಿದ್ದು, ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳನ್ನು ಸಮಯಕ್ಕೆ ಸರಿಯಾಗಿ ವೈದ್ಯರ ಬಳಿ ತೋರಿಸಿ ಸಲಹೆ, ಸೂಚನೆಗಳನ್ನು ಪಡೆದು ಜೀವ ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗ ದಿನದ 24ಗಂಟೆಯೂ ಸಾಮಾಜಿಕ ಒಳತಿಗಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಹೃದಯಕ್ಕೆ ಆಯಾಸವಾಗುತ್ತದೆ. ಆದ್ದರಿಂದ ಜಾಗ್ರತೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ನುಡಿದರು.
`ವೈದ್ಯೋನಾರಾಯಣಹರಿ’ ಎಂಬ ಲೋಕರೂಢಿ ಮಾತಿನಂತೆ ಬಡವರ, ಸರ್ವಸಮಾನ್ಯರ ಆರೋಗ್ಯವನ್ನು ಕಾಪಾಡುವ ಮೂಲಕ ವೈದ್ಯರು ಸಾಕ್ಷಾತ್ ದೇವರಾಗಿದ್ದಾರೆ, ಬೆಂಗಳೂರಿನಿಂದ ಬಂದು ಜಿಲ್ಲೆಯ ಪತ್ರಕರ್ತರ ಕುರಿತು ಕಾಳಜಿ ತೋರಿರುವ ಮಣಿಪಾಲ್ ಆಸ್ಪತ್ರೆ ವೈದ್ಯರ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಣಿಪಾಲ್ ಆಸ್ಪತ್ರೆಯ ಸಲಹೆಗಾರ ಹಾಗೂ ಹೃದಯರೋಗ ತಜ್ಞ ಡಾ.ಪ್ರದೀಪ್ ಹಾರನಹಳ್ಳಿ ಮಾತನಾಡಿ, ಬೇಸಿಗೆಯ ಕಾಲಕ್ಕಿಂತಲೂ ಚಳಿಗಾಲದಲ್ಲಿ ಹೃದಯಾಘಾತ ಹೆಚ್ಚಾಗಿ ಕಂಡುಬರುತ್ತದೆ. ಈ ಮೊದಲೇ ಹೃದಯಾಘಾತದಿಂದ ಬಳಲಿದವರು, ಮಧುಮೇಹ, ಅಧಿಕ ರಕ್ತದೊತ್ತಡ ವಿರುವವವರು ಹಾಗೂ 65ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಚಳಿಗಾಲದಲ್ಲಿ ಹೃದಯಾಘಾತ ಶೇ.30ರಷ್ಟು ಹೆಚ್ಚಾಗಿ ಆಗುತ್ತದೆ ಎಂದು ತಿಳಿಸಿದರು
ಚಳಿಗಾಲಕ್ಕೆ ಹೊಂದಿಕೊಳ್ಳುವ ಕೆಲವು ಶಾರೀರಿಕ ಬದಲಾವಣೆಗಳಾಗುವುದರಿಂದ ಹೃದಯ ರೋಗವನ್ನು ಪ್ರಚೋದಿಸುವ ಸಾಧ್ಯತೆ ಇರುತ್ತದೆ. ವಾತಾವರಣ ಶೀತಮಯವಾಗಿದ್ದು ದೇಹದಲ್ಲಿ ಹೆಚ್ಚುವರಿ ರಕ್ತದ ಬೇಡಿಕೆಯನ್ನು ಪೂರೈಸಲು ಹೃದಯವು ಅಧಿಕ ಶ್ರಮವಹಿಸುವುದರಿಂದ ಹೃದಯಾಘಾತವು ಸಂಭವಿಸುತ್ತದೆ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಸಾಕ್ಸ್, ಕೈ ಕವಚ, ಮಫ್ಲರ್ ಮತ್ತು ಬೆಚ್ಚಗಿನ ಉಡುಪುಗಳನ್ನು ಉಪಯೋಗಿಸುವ ಮೂಲಕ ಹೃದಯಾಘಾತವನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು.
ಎದೆನೋವು ಕಾಣಿಸಿ ಕೊಂಡರೆ ತಡ ಮಾಡದೆ ವೈದ್ಯರ ಸಲಹೆ ಪಡೆಯುವುದು ಅತ್ಯವಶ್ಯಕ. ವ್ಯಾಯಾಮ ಮಾಡುವುದು, ಕೊಬ್ಬಿನ ಆಹಾರ ಸೇವನೆ ಮಿತಗೊಳಿಸಿ, ಮಧ್ಯಪಾನ, ಧೂಮಪಾನದಿಂದ ದೂರವುಳಿದು ಹಾಗೂ ಸಮಯಕ್ಕೆ ಸರಿಯಾಗಿ ಔಷಧಿ ಸೇವಿಸುವ ಮೂಲಕ ಹೃದ್ರೋಗ ತಡೆಯಬಹುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ, ಪತ್ರಕರ್ತರ ಆರೋಗ್ಯದ ದೃಷ್ಟಿಯಿಂದ ಕೋವಿಡ್ ಕಾಣಿಸಿಕೊಂಡ ದಿನಗಳಿಂದಲೂ ಇಲ್ಲಿಯವರೆಗೆ ಮೂರು ಬಾರಿ ಆರೋಗ್ಯ ಕಾಪಾಡಿಕೊಳ್ಳುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಪತ್ರಕರ್ತರ ಸುರಕ್ಷತೆಗಾಗಿ ಮಣಿಪಾಲ್ ಆಸ್ಪತ್ರೆಯವರು ಆರೋಗ್ಯ ಕಾರ್ಡ್ ನೀಡಿ, ಶೇ. 20 ರಷ್ಟು ರಿಯಾಯಿತಿಯನ್ನು ರಾಜ್ಯದ ಯಾವುದೇ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅವಕಾಶವನ್ನು ಕಲ್ಪಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಬಿ.ವಿ.ಗೋಪಿನಾಥ್, ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‍ಕುಮಾರ್, ಪತ್ರಕರ್ತರು ಹಾಗೂ ಮಣಿಪಾಲ್ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು
.