ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಗ್ರಾಮೀಣ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಕಲಾ ಜಾಥಾ ಕಾರ್ಯಕ್ರಮ
-ಗೀತಮ್ಮ ಆನಂದರೆಡ್ಡಿ
ಕೋಲಾರ : ಗ್ರಾಮೀಣ ಸಮುದಾಯದಲ್ಲಿ ಶೌಚಾಲಯ ಬಳಕೆ, ನೈರ್ಮಲ್ಯ ಹಾಗೂ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಜಿಲ್ಲೆಯ 50 ಆಯ್ದ ಪಂಚಾಯಿತಿಗಳಲ್ಲಿ ಕಲಾ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಗೀತಮ್ಮ ಆನಂದರೆಡ್ಡಿ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಆವರಣದಲ್ಲಿ ಸ್ವಚ್ಛ ಮೇವ ಜಯತೆ ಕಲಾ ಜಾಥಾ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗ್ರಾಮೀಣ ಕರ್ನಾಟಕವನ್ನು ‘ಬಯಲು ಬಹಿರ್ದೆಸೆ ಮುಕ್ತ’ ಎಂದು ಘೋಷಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಮೊದಲ ಹಂತದಲ್ಲಿ ರಾಜ್ಯಾದ್ಯಂತ 2000 ಗ್ರಾಮ ಪಂಚಾಯಿತಿಗಳಲ್ಲಿ ಜಾಗೃತಿ ಮೂಡಿಸಿ ‘ತ್ಯಾಜ್ಯ ಮುಕ್ತ ಗ್ರಾಮ’ ಗಳನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಸಂಜೀವಪ್ಪ ಅವರು ಮಾತನಾಡಿ, ಜಿಲ್ಲೆಯಲ್ಲಿ 156 ಗ್ರಾಮ ಪಂಚಾಯಿತಿಗಳು ಇದ್ದು, ಇವುಗಳಲ್ಲಿ 50 ಗ್ರಾಮ ಪಂಚಾಯಿತಿಗಳನ್ನು ಕಲಾ ಜಾಥಾ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಕಲಾ ಜಾಥಾ ರಥದೊಂದಿಗೆ ತರಬೇತಿ ಹೊಂದಿದ ಕಲಾ ತಂಡವು ಇದ್ದು, ಇದು ನಾಟಕಗಳ ಮೂಲಕ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಿದ್ದಾರೆ. ಈ ಕಾರ್ಯಕ್ರಮವು ಇಂದಿನಿಂದ ಅಕ್ಟೋಬರ್ 15 ರವರೆಗೆ ನಡೆಯಲಿದೆ ಎಂದರು.
ಕಲಾ ಜಾಥಾ ಕಾರ್ಯಕ್ರಮದ ಮೂಲ ಉದ್ದೇಶ ಹಸಿ ಮತ್ತು ಒಣಕಸವನ್ನು ಬೇರ್ಪಡಿಸಿ ಸಾರ್ವಜನಿಕರು ತಮ್ಮ ವ್ಯಾಪ್ತಿಯ ಗ್ರಾಮಪಂಚಾಯಿತಿಯಿಂದ ಸಂಗ್ರಹಿಸುವ ವಾಹನಗಳಿಗೆ ನೀಡಬೇಕು. ಈ ಕಸವನ್ನು ಬಳಸಿ ಗೊಬ್ಬರವನ್ನು ತಯಾರಿಸಲಾಗುವುದು. ಈ ಕಾರ್ಯಕ್ಕೆ ಜಿಲ್ಲೆಯ ಆಯ್ದ 50 ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಮುನಿಕೃಷ್ಣಪ್ಪ, ಸಹಾಯಕ ಯೋಜನಾಧಿಕಾರಿಗಳಾದ ವಸಂತ್, ಸಹಾಯಕ ಕಾರ್ಯದರ್ಶಿಗಳಾದ ರವಿಚಂದ್ರ ಅವರು ಸೇರಿದಂತೆ ಜಿಲ್ಲಾ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.