ಗ್ರಂಥಾಲಯ ಎನ್ನುವುದು ಎಲ್ಲಾ ಮಾಹಿತಿ ಕೊಡುವ ಒಂದು ಸಂಗ್ರಹಾಲಯ -ಜೆ.ಮಂಜುನಾಥ್.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಗ್ರಂಥಾಲಯ ಎನ್ನುವುದು ಎಲ್ಲಾ ಮಾಹಿತಿ ಕೊಡುವ ಒಂದು ಸಂಗ್ರಹಾಲಯ -ಜೆ.ಮಂಜುನಾಥ್.
ಕೋಲಾರ: ನಾವೆಲ್ಲರೂ ಮಾಹಿತಿ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಗ್ರಂಥಾಲಯ ಎನ್ನುವುದು ಎಲ್ಲಾ ಮಾಹಿತಿ ಕೊಡುವ ಒಂದು ಸಂಗ್ರಹಾಲಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರಾದ ಜೆ.ಮಂಜುನಾಥ್ ಅವರು ತಿಳಿಸಿದರು.
ಇಂದು ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಕೋಲಾರ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2019 ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನವು ಬೆಳೆದಂತೆ ಬದಲಾವಣೆ ಸಹಜ ಹಾಗೂ ವ್ಯಕ್ತಿತ್ವ ವಿಕಸನ ಹೊಂದಿದಂತೆ ಅನೇಕ ವಿಚಾರಗಳನ್ನು ತಿಳಿದುಕೊಳ್ಳುತ್ತೇವೆ.  ನಾವು ಒಂದು ಕಡೆಯಿಂದ ಮತ್ತೊಂದು ಕಡೆ ಸಂಚರಿಸುವುದರಿಂದ ಜ್ಞಾನ ಸಂಪಾದನೆ ಮಾಡಿದಂತೆ ಗ್ರಂಥಾಲಯದಲ್ಲಿ ಅನೇಕ ಜ್ಞಾನಾರ್ಜನೆ ಮಾಡಿದ ಲೇಖಕರು ಬರೆದ ಪುಸ್ತಕಗಳು, ನಿಯತಕಾಲಿಕೆಗಳು ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಂಡು ನಮ್ಮ ಜ್ಞಾನವನ್ನು ಕುಳಿತಲ್ಲಿಯೇ ವೃದ್ಧಿಸಿಕೊಳ್ಳಬಹುದು ಎಂದ ಅವರು ನಾವು ವಿದ್ಯಾಭ್ಯಾಸದಲ್ಲಿ ಓದಿ ಮುಂದುವರೆದ ಸಂದರ್ಭದಲ್ಲಿ ವಿದ್ಯಾಭ್ಯಾಸಕ್ಕನುಗುಣವಾಗಿ ಉದ್ಯೋಗಗಳು ದೊರೆಯುತ್ತಿತ್ತು.  ಆದರೆ ಇಂದಿನ ತಂತ್ರಜ್ಞಾನದ ಯುಗದಲ್ಲಿ ಕೌಶಲ್ಯ ತುಂಬಾ ಮುಖ್ಯ ಎಂದು ಹೇಳಿದರು.
ಈ ಸ್ಪರ್ಧಾತ್ಮಕ ಯುಗದಲ್ಲಿ ನಾವು ಉದ್ಯೋಗಸ್ಥರಾಗಬೇಕಾದರೆ ವಿದ್ಯೆಯೊಂದಿಗೆ ಕೌಶಲ್ಯವೂ ಮುಖ್ಯ ಎಂದ ಅವರು ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅವರ ಭವಿಷ್ಯಕ್ಕೆ ಅನುಕೂಲವಾಗುವಂತೆ ಕೌಶಲ್ಯ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ ಅವರು ಅದರಂತೆ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಕೌಶಲ್ಯ ಶಿಕ್ಷಣವನ್ನು ನೀಡುವ ಯೋಜನೆಯನ್ನು ಸಹ ಸರ್ಕಾರವು ರೂಪಿಸುತ್ತಿದೆ. ಭವಿಷ್ಯದಲ್ಲಿ ಸೃಷ್ಟಿಯಾಗುವ ಉದ್ಯೋಗಗಳತ್ತ ಯುವ ಜನತೆಯನ್ನು ತಯಾರು ಮಾಡುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು. 
ಈಗಿರುವ ಹಾಗೂ ಮುಂದೆ ಬೇಕಾಗಿರುವ ಕೌಶಲ್ಯಕ್ಕಾಗಿ ಯಾವ ವಿದ್ಯಾಭ್ಯಾಸ ಮುಖ್ಯ ಎಂದು  ಶಿಕ್ಷಣ ತಜ್ನರು ಕೊಡುವ ಸಲಹೆಗಳನ್ನಾಧರಿಸಿ ಪಠ್ಯಪುಸ್ತಕ ಬದಲಾವಣೆ ಆಗುತ್ತದೆ. ವಿದ್ಯಾರ್ಥಿಗಳು ಒಂದು ವಿಷಯ ಪ್ರಾಯೋಗಿಕವಾಗಿ ಕೆಲವು ಶಾಲೆಗಳಲ್ಲಿ ಕೌಶಲ್ಯ ತರಬೇತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಇದು ಬಹು ದೊಡ್ಡ ಮಟ್ಟದಲ್ಲಿ ಆರಂಭವಾಗುತ್ತದೆ. ನಮ್ಮ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗರ ಹುದ್ದೆಗೆ ಅರ್ಜಿ ಆಹ್ವಾನಿಸಿದರೆ 62 ಹುದ್ದೆಗೆ 24000 ಅರ್ಜಿಗಳು ಬಂದಿವೆ. ಸರ್ಕಾರವೇ ಎಲ್ಲರಿಗೂ ಹುದ್ದೆ ಕೊಡಲು ಆಗುವುದಿಲ್ಲ. ಖಾಸಗಿ ವಲಯದಲ್ಲಿ ಹಾಗೂ ಸ್ವಂತ ಹುದ್ದೆಗಳನ್ನು ಸಹ ನಾವು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. 
ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯರು ಹಾಗೂ ಹಿರಿಯ ಪತ್ರಕರ್ತರಾದ ಬಿ.ವಿ ಗೋಪಿನಾಥ್ ಅವರು ಮಾತನಾಡಿ, ಮೊದಲು ಕೆಎಎಸ್ ಎಂದರೆ ಹಿಂದೆ ಕೋಲಾರ ಅಡ್ಮನಿಸ್ಟ್ರೇಷನ್ ಅಂತ ಇತ್ತು. ಕಾರಣ ಕೋಲಾರ ಜಿಲ್ಲೆಯಿಂದ ಹೆಚ್ಚಿನ ಅಭ್ಯರ್ಥಿಗಳು ಕೆ.ಎ.ಎಸ್ ಪರೀಕ್ಷೆಯಲ್ಲಿ ಉತೀರ್ಣರಾಗಿ ಹುದ್ದೆಗಳನ್ನು ಪಡೆಯುತ್ತಿದ್ದರು. ಆದರೆ ಈಗ ಅದರ ಪ್ರಮಾಣ ಕಡಿಮೆ ಇದೆ. ನಾವು ದೂರದಲ್ಲಿರುವ ಸಿನಿಮಾ ತಾರೆಯರನ್ನು ಪ್ರೇರಣೆಯಾಗಿ ತೆಗೆದುಕೊಳ್ಳುತ್ತೇವೆ. ದೂರದ ಬೆಟ್ಟ ನುಣ್ಣಗೆ ಎಂದು ತಿಳಿದು ನಮ್ಮ ಮಧ್ಯೆ ಇರುವ ಯುಪಿಎಸ್‍ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಕೋಲಾರದ ನಂದಿನಿ, ಮಾಲೂರಿನ ಬೈರಪ್ಪ ಅವರನ್ನು ನಾವು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ಜೀವನದಲ್ಲಿ ಪ್ರಯತ್ನವೆಂಬುದು ಬಹು ಮುಖ್ಯ. ಅಬ್ದುಲ್ ಕಲಾಂ ಅವರು ಹೇಳಿದಂತೆ I ಛಿಚಿಟಿ ಎಂಬ ಶಬ್ದವನ್ನು ಮನಸ್ಸಿನಲ್ಲಿಟ್ಟುಕೊಂಡರೆ ಯಾವುದನ್ನಾದರೂ ಸಾಧಿಸಬಹುದು ಎಂದ ಅವರು ಇ-ಡಿಜಿಟಲ್ ಲೈಬ್ರರಿಯನ್ನು ಸ್ಥಾಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. 
ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ಹಾಗೂ ಪತ್ರಕರ್ತರಾದ ಕೆ.ಎಸ್ ಗಣೇಶ್ ಅವರು ಮಾತನಾಡಿ, ಕೋಲಾರ ವಿದ್ಯಾರ್ಥಿಗಳು ಕೆ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದಂತೆ ಐ.ಎ.ಎಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಪ್ರಮಾಣ ಬಹಳ ಕಡಿಮೆ. ಇದಕ್ಕೆ ಕಾರಣ ಭಾಷೆಯ ಸಮಸ್ಯೆ. ವಿದ್ಯಾರ್ಥಿಗಳು ಆಂಗ್ಲಭಾಷೆಯನ್ನು ಸ್ಪಷ್ಟವಾಗಿ ಕಲಿತಿರುವುದಿಲ್ಲ. ಮಾರ್ಗದರ್ಶನ ಸಮಸ್ಯೆಯ ತುಂಬಾ ಇದೆ. ಕೋಲಾರ ಜಿಲ್ಲೆಯ ಪ್ರಾಕೃತಿಕ ಸವಾಲುಗಳನ್ನು ಎದುರಿಸಿ ಬದುಕುತ್ತಿರುವವರು ಸ್ಮರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಕಷ್ಟವೇನಿಲ್ಲ. ಜ್ಞಾನಾರ್ಜನೆಯು ಇದ್ದು, ತರಬೇತಿ ಕೊರತೆ ಇದೆ ಎಂದು ತಿಳಿಸಿದರು. 
ಸ್ಪರ್ಧಾತ್ಮಕ ಪರೀಕ್ಷೆ ಎಂದರೆ ಕಾಲಮಿತಿಯೊಳಗೆ ನಿಮ್ಮಲ್ಲಿರುವ ಜ್ಞಾನವನ್ನು ಉಪಯೋಗಿಸಿ ಪರೀಕ್ಷೆಯನ್ನು ಬರೆದು ಸಫಲರಾಗಿ ಎಂದು ತಿಳಿಸಿದರು. 
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 
ಕಾರ್ಯಕ್ರಮದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ದಿವಾಕರ, ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ರುದ್ರಪ್ಪ, ಸ್ಪರ್ಧಾತ್ಮ ಪರೀಕ್ಷೆಗಳ ಸಲಹೆಗಾರರಾದ ಡಾ|| ರವಿ ಎಸ್.ಆರ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.