ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಇತ್ತೀಚಿನ ದಿನಗಳಲ್ಲಿ ಗೋಡಂಬಿ ಬೆಳೆಯ ವಿಸ್ತೀರ್ಣ ಮೈದಾನದ ಒಣ ಪ್ರದೇಶಗಳಲ್ಲಿ ಹೆಚ್ಚಾಗುತ್ತಿದ್ದರಿಂದ ಕೃಷಿ ವಿಜ್ಞಾನ ಕೇಂದ್ರ ಕೋಲಾರವು “ಗೋಡಂಬಿ (ಗೇರು) ಬೆಳೆಯ ಆಧುನಿಕ ಬೇಸಾಯ ಕ್ರಮಗಳು” ಎಂಬ ಅಂತರ್ಜಾಲ ಕಾರ್ಯಾಗಾರವನ್ನು ದಿನಾಮಕ: 25.09.2020 ರಂದು ಹಮ್ಮಿಕೊಂಡಿತ್ತು.
ಡಾ. ಗುರುಪ್ರಸಾದ, ನಿವೃತ್ತ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕರು ಮಾತನಾಡಿ ಬೆಳೆ ಅವಶ್ಯಕತೆ ಮತ್ತು ಉತ್ಪಾದನಾ ತಾಂತ್ರಿಕತೆಗಳ ಬಗ್ಗೆ ತಿಳಿಸಿಕೊಟ್ಟರು. ಪ್ರಸ್ತುತ ಭಾರತದಲ್ಲಿ 7 ಲಕ್ಷ ಟನ್ ಉತ್ಪಾದನೆ ಇದ್ದು, ಇನ್ನೂ 10 ಲಕ್ಷ ಟನ್‍ಗಳಷ್ಟು ಬೆಳೆಯ ಉತ್ಪಾದನೆಯ ಅವಶ್ಯಕತೆ ಇರುತ್ತದೆ. ಗೇರು ಬೆಳೆಯ ಉತ್ತಮ ಬೇಸಾಯ ಕ್ರಮಗಳನ್ನು ಅನುಸರಿಸಿ ಪ್ರಸ್ತುತವಿರುವ ಪ್ರತಿ ಗಿಡದ 750 ಕೆ.ಜಿ. ಇಳುವರಿಯನ್ನು 1500 ರಿಂದ 2000 ಕೆ.ಜಿಗೆ ಹೆಚ್ಚಿಸಬಹುದು. ನಮ್ಮ ರಾಜ್ಯದಲ್ಲಿ ಶಿಫಾರಸ್ಸು ಮಾಡಿದ ತಳಿಗಳಾದ ಉಳ್ಳಾಲ-1, ಉಳ್ಳಾಲ-3, ವೆಂಗುರ್ಲಾ-4 , ವೆಂಗುರ್ಲಾ-7, ಚಿಂತಾಮಣಿ-1 ಮತ್ತು ಭಾಸ್ಕರ ತಳಿಗಳು ದೊಡ್ಡ ಗಾತ್ರದ ಬೀಜಗಳನ್ನು ಒದಗಿಸುತ್ತವೆ. 6-12 ತಿಂಗಳು ವಯಸ್ಸಿನ ಕಸಿ ಗಿಡಗಳನ್ನು 27 *27 ಅಡಿ ಅಂತರದಲ್ಲಿ ಮರಳು ಮಿಶ್ರಿತ ಕೆಂಪು ಗೋಡು ಮಣ್ಣಿನಲ್ಲಿ 3 ಅಡಿ ಉದ್ದ, ಅಗಲ ಮತ್ತು ಆಳದ ಗುಣಿಗಳನ್ನು ತೋಡಿ, ನಾಟಿ ಮಾಡಬೇಕು. 250 ಗ್ರಾಂ ನಷ್ಟು ಸಾರಜನಕ ಮತ್ತು ರಂಜಕ ಹಾಗೂ 150 ಗ್ರಾಂ ನಷ್ಟು ಪೊಟ್ಯಾಷ್ ಗೊಬ್ಬರವನ್ನು 10 ಕೆ.ಜಿ ಯಷ್ಟು ತಿಪ್ಪೆಗೊಬ್ಬರದ ಜೊತೆಗೆ ಮೊದಲನೆಯ ವರ್ಷ ಗಿಡದಿಂದ 1 ಅಡಿ ದೂರದಲ್ಲಿ ನೀಡಬೇಕು. ಮುಂದಿನ ವರ್ಷಗಳಲ್ಲಿ ದುಪ್ಪಟ್ಟು ಪ್ರಮಾಣದ ರಸಗೊಬ್ಬರಗಳನ್ನು ಗಿಡದ ಸುತ್ತಳತೆಗೆ ತಕ್ಕಂತೆ ನೀಡಬೇಕು. ಮಳೆಗಾಲದಲ್ಲಿ ನೀರು ಸಂರಕ್ಷಣೆಗೆ 3 ಮೀಟರ್ ಉದ್ದ 1.5 ಅಡಿ ಅಗಲ ಮತ್ತು 1.5 ಅಡಿ ಆಳದ ಇಂಗು ಗುಂಡಿಗಳನ್ನು ನಿರ್ಮಿಸಬೇಕು. ಲಭ್ಯವಿರುವ ನೀರಿನ ಪ್ರಮಾಣದ ಅನುಗುಣವಾಗಿ ಸ್ಥಳೀಯ ಹವಾಮಾನಕ್ಕೆ ತಕ್ಕಂತೆ ಅಂತರ್ ಬೆಳೆಗಳನ್ನು ಬೆಳೆಯಬಹುದು. ಈ ಬೆಳೆಯಲ್ಲಿ ಬಿದ್ದ ಹಣ್ಣುಗಳನ್ನು ಆಯ್ದು ಕೊಯ್ಲು ಮಾಡಬಹುದು.
ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಮುಖ್ಯಸ್ಥರು ಶ್ರೀ. ಕೆ. ತುಳಸಿರಾಮ್‍ರವರು ಮಾತನಾಡಿ ಗೇರು ಬೆಳೆಯಲ್ಲಿ ಕಂಡುಬರುವ ಪ್ರಮುಖ ಕೀಟಗಳಾದ ಕಾಂಡ ಕೊರೆಯುವ ಹುಳು, ಟೀ ಸೊಳ್ಳೆ, ಸುರಂಗ ಕೀಟ ಮತ್ತು ತಿಗಣೆ ಹುಳುಗಳ ಸಮಗ್ರ ನಿರ್ವಹಣೆಯ ವಿವಿಧ ಘಟಕಗಳಾದ ಕೀಟ ನಿರೋಧಕ ತಳಿ, ಜೈವಿಕ ವಿಧಾನ ಮತ್ತು ರಾಸಾಯನಿಕ ಬಳಕೆಗಳ ಬಗ್ಗೆ ತಿಳಿಸಿಕೊಟ್ಟರು. ಈ ಅಂತರ್ಜಾಲ ಕಾರ್ಯಾಗಾರವನ್ನು ಡಾ. ಜ್ಯೋತಿ ಕಟ್ಟೆಗೌಡರ್, ವಿಜ್ಞಾನಿ (ತೋಟಗಾರಿಕೆ) ಮತ್ತು ಡಾ. ಅನಿಲಕುಮಾರ್ ಎಸ್, ವಿಜ್ಞಾನಿ (ಮಣ್ಣು ವಿಜ್ಞಾನ)ರವರು ಆಯೋಜಿಸಿದ್ದರು.