ಗಡಿ ಪ್ರದೇಶದಲ್ಲಿ  ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡುವುದರ ಮೂಲಕ, ಕನ್ನಡ ಭಾಷೆಯ ಬೆಳವಣಿಗೆಗೆ ಸಹಕರಿಸಬೇಕು

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಗಡಿ ಪ್ರದೇಶದಲ್ಲಿ  ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡುವುದರ ಮೂಲಕ, ಕನ್ನಡ ಭಾಷೆಯ ಬೆಳವಣಿಗೆಗೆ ಸಹಕರಿಸಬೇಕು
ಶ್ರೀನಿವಾಸಪುರ: ಅನ್ಯ ಭಾಷೆಗಳ ಪ್ರಭಾವ ಹೊಂದಿರುವ ನಾಡಿನ ಗಡಿ ಪ್ರದೇಶದಲ್ಲಿ  ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡುವುದರ ಮೂಲಕ, ಕನ್ನಡ ಭಾಷೆಯ ಬೆಳವಣಿಗೆಗೆ ಸಹಕರಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಮನವಿ ಮಾಡಿದರು. 
  ಪಟ್ಟಣದಲ್ಲಿ ಬುಧವಾರ ರಾತ್ರಿ ಕರ್ನಾಟಕ ವಿಜಯ ಸೇನೆ ತಾಲ್ಲೂಕು ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನೆ ಮಾತು ಯಾವುದೇ ಇದ್ದರೂ, ರಾಜ್ಯ ಭಾಷೆಯಾದ ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕು. ಕನ್ನಡ ಜನಮನದ ಕನ್ನಡಿಯಾಗಬೇಕು ಎಂದು ಹೇಳಿದರು.
   ಕೋಚಿಮುಲ್‌ ನಿರ್ದೇಶಕ ಎನ್‌.ಹನುಮೇಶ್‌, ಮಾಜಿ ನಿರ್ದೇಶಕ ಎನ್‌.ಜಿ.ಬ್ಯಾಟಪ್ಪ ನಾಡು ನುಡಿಯ ಬಗ್ಗೆ ಮಾತನಾಡಿದರು.
  ಇದಕ್ಕೂ ಮೊದಲು ತಹಶೀಲ್ದಾರ್‌ ಸುಜಾತ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿದರು. 
  ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್‌.ಆನಂದ್‌, ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜಣ್ಣ, ತೆಂಗಿನ ನಾರು ಅಭಿವೃದ್ಧಿ ನಿಗಮದ ಮಾಜಿ ಅದ್ಯಕ್ಷ ವೆಂಕಟೇಶ್‌, ಕರ್ನಾಟಕ ವಿಜಯ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎನ್‌.ಸಂತೋಷ್‌, ಪುರಸಭಾ ಸದಸ್ಯರಾದ ಭಾಸ್ಕರ್‌, ಅಜಯ್‌ಸಿಂಗ್‌, ನಾಗರಾಜ್‌, ಹರೀಶ್‌, ಮುಖಂಡರಾದ ಸುಬ್ರಮಣಿ, ವಿಶ್ವನಾಥ್‌ ಇದ್ದರು.