ಕೋಲಾರ: ವಿದ್ಯಾರ್ಥಿಗಳಿಗೆ ಶಾಸಕಾಂಗದ ಅರಿವು ಮೂಡಿಸಿ – ಶ್ರೀನಿವಾಸ ಶೋಷಿ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ಕೋಲಾರ: ವಿದ್ಯಾರ್ಥಿಗಳಿಗೆ ಶಾಸಕಾಂಗದ ಅರಿವು ಮೂಡಿಸಿ – ಶ್ರೀನಿವಾಸ ಶೋಷಿ

 

 

ಕೋಲಾರ ಡಿ.14 : ವಿದ್ಯಾರ್ಥಿಗಳಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಜ್ಞೆ ಜಾಗೃತಗೊಳ್ಳಬೇಕಾದರೆ ಶಿಕ್ಷಕರು ಮುಖ್ಯವಾಗಿ ಅವರಿಗೆ ಶಾಸಕಾಂಗ, ಸಂಸತ್ತಿನ ಪರಿಕಲ್ಪನೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಸಂಸದೀಯ ವ್ಯವಹಾರಗಳ ಇಲಾಖೆಯ ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ ಶ್ರೀನಿವಾಸ ಜೋಷಿ ತಿಳಿಸಿದರು.
ನಗರದ ಮೆಥೋಡಿಸ್ಟ್ ಶಾಲೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳು ದೇಶದ ಭವಿಷ್ಯದ ನಾಯಕರಾಗಿ ರೂಪುಗೊಳ್ಳಬೇಕಾದರೆ ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದ ಅತ್ಯವಶ್ಯಕ. ಹಾಗಾಗಿ ಪ್ರತಿ ವಿದ್ಯಾರ್ಥಿಗೆ ಪ್ರಜಾಪ್ರಭುತ್ವದ ಬಗ್ಗೆ ಅರಿವು ಅಗತ್ಯ ಎಂದರು.
ದೇಶ ಅಭಿವೃದ್ಧಿಯಾಗಬೇಕು ಹಾಗೂ ಉತ್ತಮ ಸಮಾಜ ನಿರ್ಮಾಣ ಆಗಬೇಕಾದರೆ ವಿದ್ಯಾರ್ಥಿಗಳು ಉತ್ತಮ ರಾಜಕಾರಣಿಯಾಗಲು ಮುಂದಾಗಬೇಕು. ಸೇವಾ ಮನೋಭಾವ ಇರುವವರು ರಾಜಕೀಯ ಪ್ರವೇಶಿಸಿದರೆ ಉತ್ತಮ ಸಮಾಜ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಎ.ಎನ್.ನಾಗೇಂದ್ರ ಪ್ರಸಾದ್ ಮಾತನಾಡಿ ವಿದ್ಯಾರ್ಥಿಗಳಿಗೆ ಸಂಸತ್ ಎಂದರೇನು? ವಿಧಾನ ಮಂಡಳ ಮತ್ತು ಸಂಸತ್ ಕಲಾಪಗಳು ಹೇಗೆ ನಡೆಯುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು. ಸಮಾಜದಲ್ಲಿನ ಸಮಸ್ಯೆಗಳ ಕುರಿತು ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಸಚಿವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಗಮನಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಗಾಯತ್ರಿ ಪ್ರಾಸ್ಥಾವಿಕವಗಿ ಮಾತನಾಡಿ ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಯುವ ಸಂಸತ್ ಸ್ಪರ್ಧೆ ಸಹಕಾರಿ. ಸಾರ್ವಜನಿಕ ಶಿಕ್ಷಣ ಇಲಾಖೆ ಇಂತಹ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಸಂಗತಿ. ವಿದ್ಯಾರ್ಥಿಗಳು ಸಂಸದೀಯ ವ್ಯವಹಾರಗಳ ಕುರಿತು ಹೆಚ್ಚು ಅರಿತುಕೊಂಡಾಗ ಸಮಾಜದಲ್ಲಿ ತಮ್ಮ ಮೇಲೆ ಇರುವ ಹೊಣೆಗಾರಿಯನ್ನು ನಿಭಾಯಿಸಲು ಸಹಕಾರಿಯಾಗುತ್ತದೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾದ್ಯಾಯರ ಸಂಘದ ಕಾರ್ಯದರ್ಶಿ ಗೋಪಾಲರೆಡ್ಡಿ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರಪ್ಪ, ತಾಲ್ಲೂಕು ಅಧ್ಯಕ್ಷ ಮುಕುಂದ, ಕೆಜಿಎಫ್ ಕಾರ್ಯದರ್ಶಿ ಬಿ.ಶ್ರೀನಿವಾಸ್, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷ ಜಿ. ಶ್ರೀನಿವಾಸ್, ಶ್ರೀನಿವಾಸಪುರ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಂಗವಾದಿ ಎಂ.ನಾಗರಾಜ್, ಮುದುವಾಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯ ಶಂಕರೇಗೌಡ, ಮುಳಬಾಗಿಲು ಎಂ. ಅಗ್ರಹಾರ ಮುಖ್ಯೋಪಾದ್ಯಾಯ ನಾರಾಯಣಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕಿ ಶಶಿವಧನ, ಶ್ರೀನಿವಾಸಪುರ ಆದರ್ಶ ವಿದ್ಯಾಲಯದ ಮುಖ್ಯೋಪಾದ್ಯಾಯ ಸುಬ್ರಮಣಿ, ಕೆಜಿಎಫ್ ಸೆಂಟ್ ಜೋಸೆಫ್ ಕಾನ್ವೆಂಟ್ ಪ್ರಸಿಲ್ಲಾ ದೇವಕುಮಾರಿ ಮತ್ತಿತರರು ಉಪಸ್ಥಿತರಿದ್ದರು.
ಮುದುವಾಡಿ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕಿ ಜಯಲಕ್ಷ್ಮಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಆಯ್ಕೆಯಾದ ವಿದ್ಯಾರ್ಥಿಗಳು ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಾರಿತೋಷಕ ಪಡೆದುಕೊಂಡರು.